Thursday, 19th September 2024

ನಾನು ಮೊದಲೋ ನೀನು ಮೊದಲೋ : ನಿಯಮ ತೊದಲು

ನಾಡಿಮಿಡಿತ
ವಸಂತ ನಾಡಿಗೇರ

ಇದು ಐಪಿಎಲ್ ಸೀಸನ್. ಎಲ್ಲೆೆಲ್ಲೂ ಕ್ರಿಕೆಟ್ ಜ್ವರ. ಹಾಗೆ ನೋಡಿದರೆ ಕರೋನಾ ಕಾರಣದಿಂದಾಗಿ ಸ್ವಲ್ಪ ಡಲ್ ಆಗಿದೆ ಎನ್ನಿ.
ಮಾಮೂಲಿಯಂತಾಗಿದ್ದರೆ ಸ್ಟೇಡಿಯಂಗೆ ಹೋಗಿ ನೋಡಲು ಪಡುವ ಹರಸಾಹಸವೇನು? ಟಿಕೆಟ್ ಸಿಕ್ಕರೆ, ತಾವೇ ಮ್ಯಾಚ್ ಗೆದ್ದವರಂತೆ ಬೀಗುವುದೇನು? ಆದರೆ ಈ ಬಾರಿ ದೂರದ ಯುಎಇನಲ್ಲಿ ಪಂದ್ಯಗಳು ನಡೆಯುತ್ತಿವೆ.

ಜತೆಗೆ ಖಾಲಿ ಕ್ರೀಡಾಂಗಣದಲ್ಲಿ. ಆದರೂ ಟಿವಿ ಮೂಲಕವೇ ಕ್ರೀಡಾಪ್ರೇಮಿಗಳು ಕ್ರಿಕೆಟ್ ರಸಗವಳವನ್ನು ಸವಿಯುತ್ತಿದ್ದಾರೆ. ಎಷ್ಟೆೆಂದರೂ ನಮ್ಮ ದೇಶದಲ್ಲಿ ಕ್ರಿಕೆಟ್ ಕೂಡ ಜೀವನದ ಒಂದು ಭಾಗವೇ ಆದಂತಾಗಿದೆ. ಇರಲಿ. ಆದರೆ ನಾನಿಲ್ಲಿ ಪ್ರಸ್ತಾಪಿಸ ಹೊರಟಿರುವುದು ಕ್ರಿಕೆಟ್‌ಗೆ ಸಂಬಂಧಿಸಿದ ಮತ್ತೊಂದು ವಿಷಯವನ್ನು.

ಐಪಿಎಲ್‌ನ ಈ ಋತುವಿನಲ್ಲೇ ಮೂರು ಪಂದ್ಯಗಳು ಸೂಪರ್ ಓವರ್‌ನಲ್ಲಿ ಫಲಿತಾಂಶ ಕಂಡಿವೆ. ಪಂಜಾಬ್ ಮತ್ತು ಮುಂಬೈ ನಡುವಿನ ಮ್ಯಾಚ್ ಅಂತೂ ಎರಡು ಸೂಪರ್ ಓವರ್‌ವರೆಗೆ ಎಳೆದುಕೊಂಡು ಹೋಯಿತು. ಮೊದಲೆಲ್ಲ ಕ್ರಿಕೆಟ್ ಎಂಬುದು ಹೊಡಿ ಬಡಿ ಆಟವಾಗಿರಲಿಲ್ಲ. ಸಜ್ಜನರ, ಸಜ್ಜನಿಕೆಯ ಆಟವೆನಿಸಿತ್ತು. ಆಗೆಲ್ಲ ಮಿತಿ ಇಲ್ಲದೆ ವಾರಗಟ್ಟಲೆ ನಡೆಯುತ್ತಿತ್ತು. ಇದೇ
ಕಾರಣಕ್ಕಾಗಿ ಕ್ರಿಕೆಟ್ ಆಟವು ರೋಚಕತೆಯನ್ನು ಕಳೆದುಕೊಂಡು ಸಪ್ಪೆ ಎನಿಸತೊಡಗಿದಂತೆ ಆಟದ ನಿಯಮ ಹಾಗೂ ಸ್ವರೂಪ ವನ್ನು ಬದಲಾಯಿಸುವ ಕುರಿತು ಚರ್ಚೆಗಳು ನಡೆದವು. ಇದರ ಫಲವಾಗಿ ಸೀಮಿತ ಓವರುಗಳ ಪಂದ್ಯಗಳು ಚಾಲ್ತಿಗೆ ಬಂದವು.

ಇವು ಇಡೀ ದಿನ ನಡೆಯುತ್ತಿದ್ದುದರಿಂದ ಏಕದಿನ ಪಂದ್ಯ ಎಂದೂ ಕರೆಯಲಾಗುತ್ತಿತ್ತು. ಪುರಸೊತ್ತಿಲ್ಲದ, ತಾಳ್ಮೆ ಇಲ್ಲದ ಹಾಗೂ ಥ್ರಿಲ್ ಬಯಸುವವವರಿಗೆ ಇದು ಕೂಡ ಬೋರ್ ಎನಿಸಿದಾಗ ಬಂದಿದ್ದೇ ಟ್ವೆಂಟಿ ಟ್ವೆಂಟಿ ಕ್ರಿಕೆಟ್. ಇದು ಬಹಳ ರೋಚಕವಾಗಿ, ಶಾರ್ಟ್ ಅಂಡ್ ಸ್ವೀಟಾಗಿರುವುದರಿಂದ ಬಲುಬೇಗ ಪ್ರೇಕ್ಷಕರ ಮನಸೂರೆಗೊಂಡಿದ್ದು ನಿಜ. ಚುಟುಕು ಪಂದ್ಯವಾಗಿರುವುದರಿಂದ ಫಲಿತಾಂಶ ಬರುವುದಂತೂ ಸರಿ. ಆದರೆ ಕಡೆಯ ಬಾಲ್‌ವರೆಗೂ ವಿಜಯಲಕ್ಷ್ಮೀ ಹೊಯ್ದಾಡುವುದು ಸಾಮಾನ್ಯವಾಯಿತು.

ವೈರ್‌ಗೆ ಹೋಗುವುದು ಎಂದು ಇದನ್ನು ಕರೆಯುತ್ತಾರೆ. ಅಷ್ಟು ಮಾತ್ರವಲ್ಲದೆ ಓವರೂ ಮುಗಿದು ಸ್ಕೋ ರೂ ಸಮವಾಗಿ
ಟೈ ಆಗುವ ಸಂದರ್ಭಗಳೂ ಹೆಚ್ಚಾದವು. ಮೊದಲೆಲ್ಲ ಇತ್ತಂಡಗಳಿಗೂ ಒಂದೊಂದು ಪಾಯಿಂಟ್ ಕೊಡಲಾಗುತ್ತಿತ್ತು. ಆದರೆ ಮುಂದೆ ಟೈಬ್ರೇಕ್ ಮಾಡುವ ವಿಧಾನ ಅಳವಡಿಸಲಾಯಿತು. ಎರಡೂ ತಂಡಗಳಿಗೆ ಒಂದೊಂದು ಓವರ್ ಬ್ಯಾಟಿಂಗ್ ಮಾಡುವ ಅವಕಾಶ. ಮತ್ತೊಂದು ತಂಡ ಆ ಟಾರ್ಗೆಟ್ ಅನ್ನು ಚೇಸ್ ಮಾಡಿ ಫಲಿತಾಂಶ ಪಡೆಯಲಾಗುತ್ತಿತ್ತು. ಇದನ್ನು ಸೂಪರ್ ಓವರ್ ಎಂದು ಕರೆದರು. ಆದರೆ ಕೆಲವು ಸಂದರ್ಭಗಳಲ್ಲಿ ಆಗಲೂ ಸ್ಕೋರ್ ಸಮವಾಗಿ ಫಜೀತಿಯಾದಾಗ ಬ್ಯಾಟ್ಸ್‌‌ಮನ್ ಇಲ್ಲದೆ ಬೌಲರ್
ಮಾತ್ರ ಬೌಲ್ ಮಾಡುವುದು; ಎಷ್ಟು ವಿಕೆಟ್ ಉರುಳುತ್ತವೆ ಎಂಬುದನ್ನು ಆಧರಿಸಿ ಫಲಿತಾಂಶ ನೀಡುವ ಪ್ರಯೋಗವೂ ಆಯಿತು. ಆದರೆ ಈ ಟೂರ್ನಿಯಲ್ಲಿ ಹೊಸ ನಿಯಮ ಜಾರಿಗೆ ಬಂದಿದೆ.

ಎರಡನೇ ಸೂಪರ್ ಓವರ್‌ನಲ್ಲೂ ಮತ್ತೆ ಬ್ಯಾಟಿಂಗ್, ಬೌಲಿಂಗ್ ಮಾಡಿ ಫಲಿತಾಂಶ ಪಡೆಯುವ ಪದ್ಧತಿ ಅನುಸರಿಸಲಾಗುತ್ತಿದೆ. ಆದರೆ ಮೊದಲನೇ ಸೂಪರ್ ಓವರ್‌ನಲ್ಲಿ ಬ್ಯಾಟ್ ಮತ್ತು ಬೌಲ್ ಮಾಡಿದವರಿಗೆ ಅವಕಾಶವಿಲ್ಲ. ಈ ಬಾರಿಗೆ ಎರಡಕ್ಕೆನೋ ಮುಗಿಯಿತು. ಆದರೆ ಮೂರು, ನಾಲ್ಕು ಬಾರಿ ಸೂಪರ್ ಓವರ್ ಆದರೆ ಏನು ಗತಿ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಕೊನೆಗೆ ಎರಡು
ಫ್ರಾಂಚೈಸಿಗಳ ಮಾಲೀಕರೆ ಬ್ಯಾಟಿಂಗ್‌ಗೆ ಇಳಿಯಬಹುದು ಎಂಬಂಥ ಮೀಮ್‌ಗಳು ಹರಿದಾಡಿದ್ದುಂಟು. ತಮಾಷೆಗೇನೋ ಸರಿ. ಆದರೆ ನಿಜವಾಗಿಯೂ ಹೀಗೇ ಆದರೆ ಏನು ಗತಿ ಎಂಬ ಪ್ರಶ್ನೆಗೆ ಉತ್ತರ ಇನ್ನಷ್ಟೇ ಸಿಗಬೇಕಿದೆ. ಫುಟ್ಬಾಲ್‌ನಲ್ಲೂ ಸಡನ್‌ಡೆತ್ ಎಂಬ
ವಿಧಾನ ಉಂಟು.

ಟೈ ಸಮಸ್ಯೆಗೆ ಸೂಪರ್ ಓವರ್ ಪರಿಹಾರವಾದರೂ ಒಂದು ಹಂತಕ್ಕೆ ಸರಿ. ಆಟಗಾರರಿಗೆ ಸಂಕಟವಾದರೂ ನೋಡುಗರಿಗೆ ಬೊಂಬಾಟಾಗಿರುತ್ತದೆ. ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡುವಷ್ಟು ಥ್ರಿಲ್ ಇರುತ್ತದೆ. ಆದರೆ ಇದೇ ಮಾತನ್ನು ಮತ್ತೊಂದು ಸನ್ನಿವೇಶದಲ್ಲಿ ಹೇಳುವಂತಿಲ್ಲ. ಮಳೆ ಅಥವಾ ಇನ್ನಿತರ ಹವಾಮಾನ ವೈಪರೀತ್ಯದಿಂದ ಆಟಕ್ಕೆ ಅಡ್ಡಿ
ಆಗುವುದುಂಟು. ಆಗೆಲ್ಲ ಫಲಿತಾಂಶವನ್ನು ನಿರ್ಧರಿಸುವುದು ಸಮಸ್ಯೆಯಾಗುತ್ತಿತ್ತು. ಮೊದಮೊದಲು ಸರಾಸರಿ ರನ್ ಲೆಕ್ಕದ ಆಧಾರದ ಮೇಲೆ ಪರಿಷ್ಕೃತ ಟಾರ್ಗೆಟ್ ಫಿಕ್ಸ್‌ ಮಾಡಲಾಗುತ್ತಿತ್ತು. ಆದರೆ ಇದು ಅಂಥ ಒಳ್ಳೆಯ ವಿಧಾನವಲ್ಲ ಎಂಬ ಭಾವನೆ ಬರತೊಡಗಿದಾಗ ಜಾರಿಗೆ ಬಂದಿದ್ದೇ ಡಕ್ ವರ್ತ್ – ಲೂಯಿಸ್ ಮೆಥಡ್. ಇದರಲ್ಲಿ ರನ್, ವಿಕೆಟ್, ಓವರ್ ಇವೆಲ್ಲ ಅಂಶಗಳನ್ನು
ಪರಿಗಣಿಸಲಾಗುವುದರಿಂದ ಹೆಚ್ಚು ನ್ಯಾಯಯುತವಾದುದು ಎಂದು ಹೇಳಲಾಗುತ್ತಿದೆ.

ಆದರೆ ಈ ವಿಧಾನವೂ ಮಾಡಿರುವ ಅವಾಂತರ, ಅಪಸವ್ಯಗಳು ಒಂದೆರಡಲ್ಲ. ಡಕ್‌ವರ್ತ್ ಲೂಯಿಸ್ ನಿಯಮದ ಬಗ್ಗೆ ಕೇಳಿದರೆ ಗಡಗಡ ನಡುಗುವುದು ಎಲ್ಲರಿಗಿಂತ ಹೆಚ್ಚಾಗಿ ದಕ್ಷಿಣ ಆಫ್ರಿಕಾ ತಂಡ. ಏಕೆಂದರೆ ಈ ನಿಯಮದಿಂದಾಗಿ ಈ ಟೀಮ್ ಎರಡು ಸಲ ಪೆಟ್ಟು ತಿಂದಿದೆ. ಅದು 1992ರ ವಿಶ್ವಕಪ್‌ನ ಇಂಗ್ಲೆೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೆಮಿಫೈನಲ್ ಪಂದ್ಯ. ಮಳೆಯಿಂದಾಗಿ 45 ಓವರ್‌ಗೆ ಸಿಮಿತಗೊಳಿಸಲಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 252 ರನ್ ಗಳಿಸಿತು. ದಕ್ಷಿಣ ಆಫ್ರಿಕಾ
ಉತ್ತಮವಾಗಿಯೇ ಆಟ ಆರಂಭಿಸಿತ್ತು. ಒಂದು ಹಂತದಲ್ಲಿ ಗೆಲುವಿಗೆ 13 ಬಾಲ್‌ಗಳಲ್ಲಿ 22 ರನ್ ಬೇಕಾಗಿತ್ತು. ಇದು ಕಠಿಣವಾಗಿರ ಲಿಲ್ಲ.ಆದರೆ ಮತ್ತೆ ಮಳೆ ಕಾಟ ಶುರುವಾಯಿತು. ವಾಪಸ್ ಬ್ಯಾಟಿಂಗ್‌ಗೆ ಬಂದಾಗ 1 ಬಾಲ್‌ನಲ್ಲಿ 21 ರನ್ ಗಳಿಸಬೇಕಾದ ಅಸಾಧ್ಯ ಟಾರ್ಗೆಟ್ ಎದುರಾಗಿತ್ತು. ಕೃಪೆ- ಅದೇ ಮಳೆಯ ವಿಚಿತ್ರ ನಿಯಮ. ಅದೇ ರೀತಿ 2003ರ ವಿಶ್ವಕಪ್‌ನಲ್ಲೂ ಇದೇ ಪರಿಸ್ಥಿತಿ ಎದುರಾಯಿತು. ಈ ಬಾರಿಯೂ ಅದರ ಕೆಟ್ಟ ಫಲಾನುಭವಿ ದಕ್ಷಿಣ ಆಫ್ರಿಕಾ ತಂಡವೇ ಆಗಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯ ವದು.

ಇಲ್ಲೂ ಮಳೆಯದೇ ಆಟವಾಗಿತ್ತು. ದಕ್ಷಿಣ ಆಫ್ರಿಕಾಗೆ 229ರನ್ ಟಾರ್ಗೆಟ್ ನೀಡಲಾಗಿತ್ತು. ಆ ಓವರ್‌ನ 5ನೇ ಬಾಲ್‌ನಲ್ಲಿ ಮಾರ್ಕ್ ಬೌಚರ್ ಸಿಕ್ಸ್‌ ಹೊಡೆದರು. ಗೆಲುವಿಗೆ ಇನ್ನೊಂದು ರನ್ ಬೇಕಾಗಿತ್ತು. ಆದರೆ ಕೊನೆಯ ಬಾಲ್‌ನಲ್ಲಿ ರನ್ ಪಡೆಯಲಿಲ್ಲ. ಅಷ್ಟೊತ್ತಿಗೆ ಮಳೆ ಮತ್ತೆ ಧೋ ಎಂದು ಸುರಿಯಲಾರಂಭಿಸಿ ಪಂದ್ಯ ನಿಂತಿತು. ಮಳೆ ಬಿರುಸಾದುದರಿಂದ ಮತ್ತೆ ಆರಂಭ
ವಾಗಲಿಲ್ಲ. ಹೀಗಾಗಿ ಆ ಒಂದು ರನ್ ಸಲುವಾಗಿ ಪಂದ್ಯ ಟೈ ಆಯಿತು. ಆಗ ಸೂಪರ್ ಓವರ್ ಕಲ್ಪನೆ ಇರಲಿಲ್ಲ. ಉತ್ತಮ ರನ್‌ರೇಟ್ ಆಧಾರದಲ್ಲಿ ಮುಂದಿನ ಹಂತಕ್ಕೆ ಲಂಕಾ ಮುನ್ನಡೆಯಿತು.ದಕ್ಷಿಣ ಆಫ್ರಿಕಾ ಮನೆಗೆ ಹೋಯಿತು.

ಡಕ್‌ವರ್ಥ್ – ಲೂಯಿಸ್ ನಿಯಮವು ಇದ್ದುದರಲ್ಲಿ ನ್ಯಾಯಯುತವಾಗಿದೆ ಎಂದು ಹೇಳಲಾಗುತ್ತಿದೆ ಯಾದರೂ ಮೇಲೆ ತಿಳಿಸದ ರೀತಿಯ ಸಾಕಷ್ಟು ಅಪಸವ್ಯಗಳು ಉಂಟಾಗುತ್ತವೆ. ಅಂದರೆ ಮಳೆ ಮತ್ತಿತರ ಸಂದರ್ಭಗಳಲ್ಲೆಲ್ಲ ಫಲಿತಾಂಶ ಹೀಗೆ ಏರುಪೇರಾ ಗುವ ಸಂಭವ ಹೆಚ್ಚಾಗಿರುತ್ತದೆ. ಇದು ಮಾತ್ರವಲ್ಲದೆ ಒಂದು ಕೆಟ್ಟ ಅಂಪೈರಿಂಗ್ ತೀರ್ಪು ಕೂಡ ಇಡೀ ಪಂದ್ಯದ ಗತಿಯನ್ನು ಬದಲಾಯಿಸುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಎಲ್‌ಬಿಡಬ್ಲು ಹಾಗೂ ಕ್ಯಾಚ್ ಕುರಿತ ತೀರ್ಪುಗಳು. ಆದರೆ ಇತ್ತೀಚೆಗೆ ಡಿಆರ್‌ಎಸ್, ಅಂದರೆ ಅಂಪೈರ್ ತೀರ್ಪು ಮರುಪರಿಶೀಲಿಸುವ ವ್ಯವಸ್ಥೆ ಬಂದಿರುವುದ ರಿಂದ ಈ ರೀತಿಯ ತಪ್ಪು ತೀರ್ಪುಗಳು ಕಡಿಮೆಯಾಗುತ್ತಿವೆ.

ಹಾಗೆಂದು ಬರಿ ಕ್ರಿಕೆಟ್ ಕಾಮೆಂಟರಿಯೇ ಆಯಿತು ಎಂದುಕೊಳ್ಳದಿರಿ. ಈಗ ಆಟದಿಂದ ಪಾಠಕ್ಕೆ ಬರೋಣ. ಹೌದು. ಅಸ್ಪಷ್ಟ, ವಿಚಿತ್ರ ನಿಯಮಗಳಿಂದಾಗಿ ಪರೀಕ್ಷಾ ಫಲಿತಾಂಶದಲ್ಲೂ ಒಬ್ಬರಿಗೆ ಲಕ್ ಆಗಿ ಇನ್ನೊಬ್ಬರಿಗೆ ಅನ್ಯಾಯವಾದ ಪ್ರಸಂಗದ ಬಗೆಗಿನ ವಿಷಯವಿದು. ನಾವು ಎಸ್ಸೆಸೆಲ್ಸಿ, ಪಿಯುಸಿ ಇದ್ದಾಗೆಲ್ಲ 70, 80 ಪರ್ಸೆಂಟ್ ಮಾರ್ಕ್ಸ್‌ ತೆಗೆದರೆ ಸಾಕು ದೊಡ್ಡ ಸಾಧನೆ ಎನಿಸುತ್ತಿತ್ತು. ಅಷ್ಟೇ ಏಕೆ. ಪಾಸಾದರೆ ಸಾಕು ಎಂದು ಎಷ್ಟೋ ಮಂದಿ ಅಂದುಕೊಳ್ಳುವ ಪರಿಸ್ಥಿತಿ ಇದ್ದುದು ನಿಜ. ಪಾಸಾದರೆ ಊರಿಗೆಲ್ಲ ಸಿಹಿ ಹಂಚುತ್ತಿದ್ದುದೂ ಉಂಟು. ಪರೀಕ್ಷಾ ಪದ್ಧತಿ, ಸೌಲಭ್ಯ ಹೀಗೆ ನಾನಾ ಕಾರಣಗಳು ಇದ್ದಿರಬಹುದು. ಆದರೆ ಈಗೀಗ ಔಟ್ ಆಫ್ ಔಟ್ ಮಾರ್ಕ್ಸ್  ತೆಗೆಯೋದು ಕಾಮನ್ ಆಗಿದೆ.

ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದವರು ಆರೋ ಎಂಟೋ ಜನರಿದ್ದರು. ಅದರಿಂದ ಯಾರಿಗೂ ನಷ್ಟ ಆಗುವುದಿಲ್ಲವಾದ್ದರಿಂದ ತೊಂದರೆ ಇಲ್ಲ. ಆದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಾಗಾಗದು. ಅಲ್ಲಿ ರ್ಯಾಂಕ್‌ಗಳನ್ನು ಪ್ರತ್ಯೇಕ ವಾಗಿ ನೀಡಲೇಬೇಕಾಗುತ್ತದೆ. ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಅವಕಾಶ ನೀಡುವ ಪ್ರವೇಶ ಪರೀಕ್ಷೆಯಲ್ಲಿ (ನೀಟ್ ಎನ್ನುತ್ತಾರೆ) ಈ ವರ್ಷ ಇಂಥ ಅಪರೂಪದ ಹಾಗೂ ಅನಿರೀಕ್ಷಿತ ಪ್ರಸಂಗ ಎದುರಾಯಿತು.

ಇಬ್ಬರು ಅಭ್ಯರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದಿದ್ದರಿಂದ ಟೈ ಆಗಿ ರ್ಯಾಂಕ್ ಕೊಡುವುದು ಕಷ್ಟವಾಯಿತು. ಆಗ ಟೈಬ್ರೇಕರ್ ನಿಯಮ ಅಳವಡಿಸಬೇಕಾಯಿತು. ಬಹುಶಃ ನೀಟ್‌ನಲ್ಲಿ ಇಂಥ ಪ್ರಮೇಯ ಈ ಹಿಂದೆ ಬಂದಿರಲಿಲ್ಲ ಎನಿಸುತ್ತದೆ. ಆದರೂ ಟೈ ಆದರೆ ಏನು ಮಾಡಬೆಕು ಎಂಬುದುರ ಬಗ್ಗೆ ನೀಟ್‌ನಲ್ಲಿ ಅದರದೇ ಆದ ನಿಯಮವಿದೆ.

ಆ ನಿಯಮ ಹೇಳುವುದು ಹೀಗೆ: ಇಬ್ಬರಿಗೆ ಸರಿಸಮ ಅಂಕ ಬಂದಿದ್ದರೆ ಬಯಾಲಜಿ ಹಾಗೂ ಕೆಮಿಸ್ಟ್ರಿಯಲ್ಲಿ ಯಾರಿಗೆ ಹೆಚ್ಚು ಮಾರ್ಕ್ಸ್‌ ಬಂದಿದೆಯೋ ಅವರಿಗೆ ಮೇಲಿನ ರ್ಯಾಾಂಕ್ ಕೊಡಬೇಕು. ಇವೆರಡೂ ಸರಿಯಾಗಿದ್ದರೆ ತಪ್ಪುು ಉತ್ತರಗಳನ್ನು ಯಾರು ಹೆಚ್ಚು ಬರೆದಿರುತ್ತಾರೋ ಅವರು ರ್ಯಾಂಕ್‌ನಲ್ಲಿ ಕೆಳಕ್ಕೆ ಹೋಗುತ್ತಾರೆ.

ಆದರೆ ಈ ಪ್ರಕರಣದಲ್ಲಿ ಇವಾವೂ ಲಾಗೂ ಆಗುವಂತಿರಲಿಲ್ಲ. ಏಕೆಂದರೆ ಒಡಿಶಾದ ಶೋಯೆಬ್ ಅಫ್ತಾಬ್ ಹಾಗೂ ದೆಹಲಿಯ ಆಕಾಂಕ್ಷಾ ಸಿಂಗ್ ಇಬ್ಬರೂ ಗರಿಷ್ಠ ಅಂಕ ಪಡೆದಿದ್ದರು. ಅಂತಿಮ ಮಾನದಂಡವಾದ ಎಲಿಮಿನೇಟ್ ಮಾಡಲು ವಯಸ್ಸನ್ನು ಪರಿಗಣಿಸಲಾಯಿತು. ಶೋಯೆಬ್ ಹಿರಿಯರಾಗಿದ್ದರಿಂದ ಅವರಿಗೆ ಮೊದಲ ರ್ಯಾಂಕ್ ನೀಡಲಾಯಿತು.

ಆದರೆ ಈ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಯಿತು. ಸಮಾನ ಅಂಕ ಪಡೆದಿದ್ದರೂ ವಯಸ್ಸಿನ ಆಧಾರದಲ್ಲಿ ರ್ಯಾಂಕ್ ಹಂಚುವುದು ಯಾವ ನ್ಯಾಯ, ಇದು ಸರಿ ಅಲ್ಲ ಎಂಬಿತ್ಯಾದಿ ಚರ್ಚೆಗಳು ನಡೆದವು. ಹಾಗೆ ನೋಡಿದರೆ ಮಹಿಳೆಗೆ ಆದ್ಯತೆ
ನೀಡಬೇಕಿತ್ತು. ಆದರೆ ಆ ವರ್ಗಕ್ಕೆ ಯಥಾಪ್ರಕಾರ ಅನ್ಯಾಯವಾಗಿದೆ ಎಂದು ಆರೋಪಿಸಲಾಯಿತು. ಇದು ಕೊನೆಗೆ ಲಿಂಗ ತಾರತಮ್ಯದ ಕಡೆಗೆ ಹೊರಳಿತು. ಈ ವ್ಯವಸ್ಥೆ ನೀಟ್ ಆಗಿಲ್ಲ ಎಂಬ ಗೊಣಗಾಟ ನಡೆಯಿತು.

ಅಲ್ಲಿಗೆ ನೀಟ್ ಪರೀಕ್ಷೆಯ ನಿಯಮಗಳಲ್ಲೂ ಸಮಸ್ಯೆ ಇದೆ ಎಂದಾಯಿತು. ಇಬ್ಬರನ್ನೂ ಜಂಟಿ ಅಗ್ರಸ್ಥಾನಿಗಳಾಗಿ ಘೋಷಿಸಲು ಏನು ಅಡ್ಡಿ ಎಂಬುದು ಗೊತ್ತಾಗಲಿಲ್ಲ. ಅಥವಾ ವಯಸ್ಸಿನ ಮಾನದಂಡವಿದೆಯಲ್ಲ. ಅದನ್ನು ಅನುಸರಿಸೋಣ ಎಂದು
ಸುಮ್ಮನಾಗಿರಬೇಕು. ಆದರೆ ಈ ಮಾನದಂಡ ಅನುಸರಿಸುವುದು ಸರಿಯೇ ಎಂಬ ಚರ್ಚೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಈ ಬಗ್ಗೆ ಯೊಚನೆ ಮಾಡಬೇಕಾಗಬಹುದು. ಈ ಎಲ್ಲ ವಿಷಯಗಳನ್ನು ಇಷ್ಟು ವಿಸ್ತೃತವಾಗಿ
ಚರ್ಚಿಸಲು ಕಾರಣ ಬದಲಾದ ಜಗತ್ತು, ಪರಿಸ್ಥಿತಿ.

ಇದೀಗ ವಿಶ್ವವು ತುಂಬ ಸ್ಪರ್ಧಾತ್ಮಕವಾಗಿದೆ. ‘ನಾನೂ ಮೊದಲು, ನೀನೂ ಮೊದಲು’ ಎಂಬುದು ಈಗ ನಡೆಯುವುದಿಲ್ಲ. ‘ನಾನು ಮೊದಲೋ, ನೀನು ಮೊದಲೋ’ ಎಂಬ ಪೈಪೋಟಿ ಶುರುವಾಗಿದೆ. ಕಠಿಣ ಸ್ಪರ್ಧೆಯ ಈ ದಿನಗಳಲ್ಲಿ ಆಯ್ಕೆಯೂ ಕಠಿಣವಾಗಿದೆ.
ಇಲ್ಲಿ ಎಲಿಮಿನೇಶನ್, ಅಂದರೆ ಸೋಸುವ ಪ್ರಕ್ರಿಯೆ ಮಹತ್ವ ಪಡೆದುಕೊಳ್ಳುತ್ತಿದೆ. ಒಬ್ಬರನ್ನು ಏರಿಸ ಬೇಕೆಂದರೆ ಇನ್ನೊಬ್ಬ ರನ್ನು ಇಳಿಸಲೇ ಬೇಕು. ಅದಕ್ಕಾಗಿಯೇ ಇಷ್ಟೆಲ್ಲ ದ್ರಾವಿಡ ಪ್ರಾಣಾಯಾಮಗಳು. ಇದನ್ನು ಮನಗಂಡೇ, ‘ಹಾಗಾದರೆ ಹೇಗೆ, ಹೀಗಾದರೆ ಏನು ಮಾಡುವುದು’ ಎಂಬಿತ್ಯಾದಿ ಪರ್ಮುಟೇಶನ್ ಅಂಡ್ ಕಾಂಬಿನೇಶನ್‌ಗಳು ಬಂದಿವೆ. ಆದರೂ ಒಂದು ವ್ಯವಸ್ಥೆ ಮಾಡಿದರೆ ಮತ್ತೊಂದು ಅವಸ್ಥೆ ಎದುರಾಗುತ್ತಿರುವುದರಿಂದ ಈ ಎಲ್ಲ ಸಮಸ್ಯೆಗಳಾಗುತ್ತಿವೆ. ಈ ಎಡರು ತೊಡರುಗಳನ್ನು, ಲೋಪ ದೋಷಗಳನ್ನು ಕಾಲಕಾಲಕ್ಕೆ ಸರಿಪಡಿಸಲೆಬೇಕಾದ ಅನಿವಾರ್ಯತೆ ಉಂಟಾಗಿದೆ. ಏಕೆಂದರೆ ಜೀವನ ಲಾಟರಿ ಅಲ್ಲವಲ್ಲ. ಒಂದು ಮಾತಿದೆ.

ಒಂದು ವರ್ಷದ ಮಹತ್ವ ಪರೀಕ್ಷೆಯಲ್ಲಿ ಫೇಲಾದವರಿಗೆ ಗೊತ್ತು. ಒಂದು ತಿಂಗಳ ಮಹತ್ವ ಅವಧಿಪೂರ್ವ ಪ್ರಸವವಾದ
ಮಹಿಳೆಗೆ ಗೊತ್ತು. ಒಂದು ಗಂಟೆಯ ಮಹತ್ವ ಭೇಟಿಗೆ ಕಾತರಿಸುತ್ತಿರುವ ಪ್ರೇಮಿಗಳಿಗೆ ಗೊತ್ತು. ಒಂದು ನಿಮಿಷದ ಮಹತ್ವ ಟ್ರೇನ್
ತಪ್ಪಿಸಿಕೊಂಡವರಿಗೆ ಗೊತ್ತು. ಒಂದು ಸೆಕೆಂಡಿನ ಮಹತ್ವ ಅಪಘಾತದಲ್ಲಿ ಪಾರಾದವನಿಗೆ ಗೊತ್ತು. ಒಂದು ಮಿಲಿ ಸೆಕೆಂಡಿನ ಮಹತ್ವ ಒಲಿಂಪಿಕ್ಸ್‌ನಲ್ಲಿ ಪದಕ ತಪ್ಪಿಸಿಕೊಂಡವರಿಗೆ ಗೊತ್ತು ಹೀಗಾಗಿ ಈಗ ಪ್ರತಿ ಸೆಕೆಂಡಿಗೂ, ಪ್ರತಿ ಅಂಕಕ್ಕೂ ಭಾರಿ ಮಹತ್ವ. ಇದಕ್ಕೆ ನೀಟ್ ಪರೀಕ್ಷೆಯ ಟಾಪರ್‌ಗಳು ಉದಾಹರಣೆ. ಸೂಪರ್ ಓವರ್‌ನಲ್ಲಿ ಗೆದ್ದ, ಸೋತ ತಂಡಗಳು ನಿದರ್ಶನ.
ಕೂದಲೆಳೆಯ ಅಂತರದಲ್ಲಿ ಪದಕ ತಪ್ಪಿಸಿಕೊಂಡ ಪಿ.ಟಿ.ಉಷಾ ಸಾಕ್ಷಿ.

ನಾಡಿಶಾಸ್ತ್ರ
ಸೂಪರ್ ಓವರಲ್ಲಿ ಪಂದ್ಯ ಗೆದ್ದವರು ಸೂಪರ್
ವಯಸಿನಲ್ಲಿ ಹಿರಿಯರಾದವರು ಪರೀಕ್ಷೆ ಟಾಪರ್
ಸ್ಪರ್ಧೆ ಕಠಿಣವಾದರೆ ನಿಯಮಗಳಿಗಿಲ್ಲ ಹುರುಳು
ಬದಲಾವಣೆ ಜಗದ ನಿಯಮವೇ ಇದರ ತಿರುಳು.

Leave a Reply

Your email address will not be published. Required fields are marked *