Thug Life: ಕಮಲ್ ಹಾಸನ್ ಹಠದಿಂದ ಥಗ್ ಲೈಫ್ ಚಿತ್ರತಂಡಕ್ಕೆ ಆದ ನಷ್ಟ ಎಷ್ಟು ಗೊತ್ತೇ?
ಕಮಲ್ ಹಾಸನ್ ಹೇಳಿಕೆಯಿಂದ ಉಂಟಾಗಿರುವ ವಿವಾದದಿಂದಾಗಿ ಕರ್ನಾಟಕದಲ್ಲಿ ಥಗ್ ಲೈಫ್ (Thug Life) ಚಿತ್ರ ಬಿಡುಗಡೆಯಾಗಿಲ್ಲ. ಇದು ಚಿತ್ರತಂಡಕ್ಕೆ ಬಹುದೊಡ್ಡ ನಷ್ಟವನ್ನು ಉಂಟು ಮಾಡಲಿದೆ. ಯಾಕೆಂದರೆ ಚಿತ್ರದ ಮೊದಲ ದಿನದ ಕಲೆಕ್ಷನ್ ಚಿತ್ರ ಬಾಕ್ಸ್ ಆಫೀಸ್ನಲ್ಲಿ (box office collection) ಸೋಲುವ ಭೀತಿಯನ್ನು ಉಂಟು ಮಾಡಿದೆ.


ಬೆಂಗಳೂರು: "ವಿನಾಶ ಕಾಲೇ ವಿಪ್ರೀತ್ ಬುದ್ಧಿ'' ಎನ್ನುವ ಪ್ರಸಿದ್ಧ ಸಂಸ್ಕೃತ ನುಡಿಗಟ್ಟು ಈಗ ಬಹುಶ ಕಮಲ್ ಹಾಸನ್ (Kamal Haasan) ಅವರಿಗೆ ಚೆನ್ನಾಗಿ ಅನ್ವಯವಾಗುವಂತಿದೆ. ಯಾಕೆಂದರೆ 'ಥಗ್ ಲೈಫ್' (Thug Life) ಚಿತ್ರ ಬಿಡುಗಡೆಗೂ (movie release) ಮುನ್ನ ಅವರಾಡಿದ ಒಂದು ಮಾತು ಮತ್ತು ಅದಕ್ಕಾಗಿ ಅವರು ತಮ್ಮ ಅಹಂ ಅನ್ನು ಬಿಟ್ಟುಕೊಡದೇ ಇರುವುದು ಈಗ ಅವರು ಸಿನಿಮಾ ರಂಗದಲ್ಲಿದ್ದು ಇಷ್ಟು ವರ್ಷಗಳ ಕಾಲ ಇದ್ದು ಸಂಪಾದಿಸಿದ ಕೋಟ್ಯಂತರ ಅಭಿಮಾನಿಗಳ ಪ್ರೀತಿ, ವಿಶ್ವಾಸವನ್ನು ನುಚ್ಚುನೂರು ಮಾಡಿದೆ. ಇದರ ಫಲವೇ ಕಮಲ್ ಹಾಸನ್ ಚಿತ್ರವೀಗ ಬಾಕ್ಸ್ ಆಫೀಸ್ನಲ್ಲಿ (box office collection) ಸೋಲುವ ಭೀತಿಯನ್ನು ಎದುರಿಸುತ್ತಿದೆ.
ಕಮಲ್ ಹಾಸನ್ ಮತ್ತು ಮಣಿರತ್ನಂ ಜೋಡಿಯ ಥಗ್ ಲೈಫ್ ಚಿತ್ರದ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಬಗ್ಗೆ ತಮಿಳು ನಾಡಿನ ಜನರೇ ಅಸಮಧಾನ ಹೊರ ಹಾಕಿದ್ದಾರೆ. ಕೆಲವರು ಚಿತ್ರ ನಿಧಾನಗತಿಯಲ್ಲಿರುವುದರಿಂದ ಬೇಸರ ಮೂಡಿಸುತ್ತದೆ ಎಂದಿದ್ದರೆ ಇನ್ನು ಕೆಲವರು ಈ ಸಿನಿಮಾವನ್ನು ಮಣಿರತ್ನಂ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಹೀಗಾಗಿ ಭಾರಿ ನಿರೀಕ್ಷೆಯೊಂದಿಗೆ ಚಿತ್ರಮಂದಿರದಲ್ಲಿ ಬಿಡುಗಡೆಯಾದ 'ಥಗ್ ಲೈಫ್' ಈಗ ಬಾಕ್ಸ್ ಆಫೀಸ್ ನಲ್ಲಿ ಸೋಲುವ ಭೀತಿಯನ್ನು ಎದುರಿಸುತ್ತಿದೆ.
ಕನ್ನಡಿಗರೊಂದಿಗೆ ವಿವಾದದಿಂದಾಗಿ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯಾಗದೇ ಇರುವುದು ಕೂಡ ಚಿತ್ರತಂಡಕ್ಕೆ ಬಹುದೊಡ್ಡ ನಷ್ಟವನ್ನು ಉಂಟು ಮಾಡಲಿದೆ.
‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್ ಗೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಯಿತು. ಅಲ್ಲದೇ ಇವರ 'ಥಗ್ ಲೈಫ್' ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕನ್ನಡ ಸಂಘಗಳು ಪಟ್ಟು ಹಿಡಿಯಿತು. ಇದಕ್ಕೆ ಮಣಿದ ಚಿತ್ರೋದ್ಯಮ ಈ ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಘೋಷಿಸಿದವು. ಈ ವಿಚಾರವಾಗಿ ಕಮಲ್ ಹಾಸನ್ ಕೋರ್ಟ್ ಮೆಟ್ಟಿಲೇರಿದರೂ ಕರ್ನಾಟಕ ಹೈಕೋರ್ಟ್ ಅವರಿಗೆ ಛೀಮಾರಿ ಹಾಕಿತು. ಹೀಗಾಗಿ ಚಿತ್ರ ಕರ್ನಾಟಕ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಬಿಡುಗಡೆ ಮಾಡಲಾಯಿತು.
ಈಗಾಗಲೇ ಸಿನಿಮಾ ಕುರಿತಾದ ವಿಮರ್ಶೆಗಳು ಹೊರಬಿದ್ದಿದ್ದರಿಂದ ಒಂದು ವೇಳೆ ಜೂನ್ 10ರ ಅನಂತರ ಈ ಚಿತ್ರ ಕರ್ನಾಟಕದ ಚಿತ್ರ ಮಂದಿರಕ್ಕೆ ಬಂದರೂ ಗಳಿಕೆಯಲ್ಲಿ ಸೋಲುವುದು ಖಚಿತ ಎನ್ನಲಾಗುತ್ತಿದೆ.
ಒಂದು ವೇಳೆ ಈ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಿದ್ದರೆ ಇಲ್ಲಿ ಕೋಟ್ಯಂತರ ರೂಪಾಯಿ ಮೊದಲ ದಿನವೇ ಕಲೆಕ್ಷನ್ ಆಗುವುದು ಪಕ್ಕಾ ಆಗಿರುತ್ತಿತ್ತು. ಯಾಕೆಂದರೆ ಇಲ್ಲಿ ಕನ್ನಡಕ್ಕಿಂತ ಪರಭಾಷೆಯ ಸಿನಿಮಾಗಳೇ ಹೆಚ್ಚಾಗಿ ಕೋಟ್ಯಂತರ ರೂಪಾಯಿ ಕಲೆಕ್ಷನ್ ಮಾಡಿಕೊಂಡು ಹೋಗಿರುವ ದಾಖಲೆಗಳಿವೆ. ಹೀಗಿರುವಾಗ 'ಥಗ್ ಲೈಫ್' ಮೊದಲ ದಿನವಂತೂ ಬಾಕ್ಸಾಫೀಸ್ನಲ್ಲಿ ಒಳ್ಳೆಯ ಕೆಲಕ್ಷನ್ ಮಾಡುತ್ತಿತ್ತು ಎನ್ನುತ್ತಾರೆ ವಿತರಕರು. ಆದರೆ ಈಗ ಕಮಲ್ ಅವರ ಹೇಳಿಕೆ ಮತ್ತು ಕನ್ನಡಿಗರ ಕ್ಷಮೆ ಯಾಚಿಸದೇ ಇರುವುದರಿಂದ ಚಿತ್ರ ತಂಡ ಭಾರಿ ನಷ್ಟವನ್ನೇ ಹೊರಬೇಕಿದೆ.
ಕರ್ನಾಟಕದಲ್ಲಿ 'ಥಗ್ ಲೈಫ್' ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ನಡೆದಿತ್ತು. ಈ ಸಿನಿಮಾವನ್ನು ಕರ್ನಾಟಕದ ವಿತರಕ ವೆಂಕಟೇಶ್ ಎಂಬವರು ಸುಮಾರು 8.10 ಕೋಟಿ ರೂಪಾಯಿಗೆ ಖರೀದಿ ಮಾಡಿ ಸುಮಾರು 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದ್ದರು ಎನ್ನಲಾಗುತ್ತಿದೆ. ಆದರೆ ವಿವಾದದಿಂದಾಗಿ ಸಿನಿಮಾ ಬಿಡುಗಡೆಯಾಗಲಿಲ್ಲ.ಇದರಿಂದ ಒಳ್ಳೆಯದೇ ಆಯುತು ಎನ್ನುತ್ತಿದ್ದಾರೆ ವಿತರಕರು.
ಸದ್ಯ ಈ ಚಿತ್ರ ಬಿಡುಗಡೆ ವಿಷಯ ಹೈಕೋರ್ಟ್ನಲ್ಲಿದೆ. ಕಮಲ್ ವಿವಾದ ಮಾಡಿಕೊಳ್ಳದೇ ಇರುತ್ತಿದ್ದರೆ ಕರ್ನಾಟಕದಲ್ಲಿ ಚಿತ್ರವು ಮೊದಲ ದಿನ ಕನಿಷ್ಠ ಸುಲಭವಾಗಿ 4 ರಿಂದ 5 ಕೋಟಿ ರೂ . ಗಳಿಕೆ ಮಾಡುತ್ತಿತ್ತು. ಬಳಿಕ ಎರಡನೇ ದಿನ ಕನಿಷ್ಠ 1.5 ರಿಂದ 2 ಕೋಟಿ ರೂ. ಸಂಗ್ರಹವಾಗುತ್ತಿತ್ತು. ಚಿತ್ರ ದೊಡ್ಡ ಮಟ್ಟದಲ್ಲಿ ಸೋಲು ಕಾಣುತ್ತಿರಲಿಲ್ಲ. ಒಂದು ವೇಳೆ ಇನ್ನು ಒಂದು ವಾರ ಬಿಟ್ಟು ಕರ್ನಾಟಕದಲ್ಲಿ ಈ ಚಿತ್ರ ಬಿಡುಗಡೆಯಾದರೂ ಕಲೆಕ್ಷನ್ ಕಷ್ಟ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಇದನ್ನೂ ಓದಿ: Thug Life Movie: ಕಮಲ್ ಹಾಸನ್ ನಟನೆಯ ʻಥಗ್ ಲೈಫ್ʼ ಫ್ಲಾಪ್? ಮಣಿರತ್ನಂ ಮ್ಯಾಜಿಕ್ ಮಾಯ ಆಗಿದ್ಯಾ?
ಇದೀಗ ‘ಥಗ್ ಲೈಫ್’ ಚಿತ್ರ ಮೊದಲ ದಿನದ ಕಲೆಕ್ಷನ್ ಕೇವಲ 17 ಕೋಟಿ ರೂಪಾಯಿ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯವಾಗಿ ಸೋಲು ಕಂಡಿರುವ ಕಮಲ್ ಅಭಿನಯದ ‘ಇಂಡಿಯನ್ 2’ ಚಿತ್ರದ ಮೊದಲ ದಿನದ ಗಳಿಕೆಯನ್ನು ದಾಟಲು ಸಾಧ್ಯವಾಗಿಲ್ಲ. ಇಂಡಿಯನ್ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ 25.2 ಕೋಟಿ ರೂ. ಗಳಿಕೆ ಮಾಡಿದ್ದು ಎರಡನೇ ದಿನ 18.2 ಕೋಟಿ ರೂ. ಗಳಿಸಿತ್ತು.