Sunday, 19th May 2024

ನಿರ್ಮಾಪಕ ದೊರೆ ದ್ವಾರಕೀಶ್ ಇನ್ನಿಲ್ಲ…!

ಕರುನಾಡ ಕುಳ್ಳನ ಬಗ್ಗೆ ಗೊತ್ತಿಲ್ಲದ ವಿಷಯಗಳು!

ಖಂಡಿತ ದ್ವಾರಕೀಶ್ ಸಿನೆಮಾ ಸಾಹಸದ ಬಗ್ಗೆ ಹೇಳುತ್ತಾ ಹೋದರೆ ದಿನಗಟ್ಟಲೇ ಬೇಕು…ನಿರ್ಮಾಪಕ ಎನ್ನಿಸಿಕೊಳ್ಳುವುದು ಈಸಿ. ಆದರೆ ಗಂಡೆದೆಯ ನಿರ್ಮಾಪಕ ಅಂತ ಇದ್ದರೆ ಅದು ವೀರಾಸ್ವಾಮಿಯವರನ್ನು ಬಿಟ್ಟರೆ ದ್ವಾರಕೀಶ್ ಮಾತ್ರ!

ಹೌದು, ಒಬ್ಬ ಸಾಮಾನ್ಯ ಹಾಸ್ಯ ನಟನಾಗಿ ಬಂದು, ಸಿನೆಮಾ ನಿರ್ಮಾಣವನ್ನ ಒಂದು ಚಾಲೆಂಜಿಂಗ್ ಆಗಿ ತೆಗೆದುಕೊಂಡು, ಯಶಸ್ವೀ ಐವತ್ತು ಸಿನೆಮಾಗಳನ್ನು ನಿರ್ಮಾಣ ಮಾಡುವುದು ತಮಾಷೆಯ ಮಾತೇ ಅಲ್ಲ! ದ್ವಾರಕೀಶ್ ಆ ಕಾಲದಲ್ಲಿ ಟ್ರೆಂಡ್ ಸೆಟ್ಟರ್. ನಟನೆ, ನಿರ್ದೇಶನದ ಜೊತೆಗೆ ನಿರ್ಮಾಣವನ್ನೂ ಮಾಡಿ ಗೆದ್ದ ಮಗ ಕರ್ನಾಟಕದ ಕುಳ್ಳ ದ್ವಾರಕೀಶ್!

ವಿದೇಶಗಳಲ್ಲಿ ಯಶಸ್ವೀ ಚಿತ್ರೀಕರಣ ಮಾಡುವುದರಿಂದ ಹಿಡಿದು, ಸ್ಟಾರ್ ಕಾಂಬಿನೇಷನ್‌ನಲ್ಲಿ ಸಿನೆಮಾ ಮಾಡುವ ಧೈರ್ಯ ದಿಂದ ಹಿಡಿದು, ವರುಷಗಟ್ಟಲೇ ಸಿನೆಮಾ ಓಡಿಸಿ ತೋರಿಸುವ ಸಾಹಸವನ್ನು ತೋರುವುದರಿಂದ ಹಿಡಿದು, ಹೊಸ ಹೊಸ ಮುಖಗಳನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿರುವ ದಾಖಲೆಗಳಿಂದ ಹಿಡಿದು ದ್ವಾರಕೀಶ್ ಮಾಡಿದ್ದೆಲ್ಲಾ ಸೂಪರ್ ಡೂಪರ್…
ದ್ವಾರಕೀಶ್ ಅವರ ವೃತ್ತಿಬದುಕಿನ ಇನ್ನೊಂದು ವಿಶೇಷತೆ ಎಂದರೆ, ಮುಗೀತು ಕುಳ್ಳನ ಕಥೆ ಎಂದು ಯರ‍್ಯಾರೆಲ್ಲಾ ಆಡಿಕೊಂಡಿ ದ್ದರೋ ಅದೇ ಜನಗಳ ಮುಂದೆ ಎದ್ದು ನಿಂತು, ಗೆದ್ದು ನಿಂತು ತೊಡೆ ತಟ್ಟುವ ಸ್ಪೆಷಾಲಿಟಿ ದ್ವಾರಕೀಶ್ ಅವರದ್ದು. ಆಪ್ತಮಿತ್ರ ಸಿನೆಮಾ ಬಿಡುಗಡೆಯೇ ಡೌಟು ಎನ್ನುತ್ತಿದ್ದವರ ಬಾಯಲ್ಲೇ ಆ ಸಿನೆಮಾ ಮಾಡಿದ ಪವಾಡವನ್ನ ಕಂಡು ಅದೇ ಬಾಯಿಬಡುಕರ ಬಾಯಿ ಮುಚ್ಚಿಸಿತ್ತು…ದ್ವಾರಕೀಶ್ ಕಿಸೆಗೆ ಕೋಟಿ ಕೋಟಿ ಹಣವನ್ನ ಸಂದಾಯ ಮಾಡಿತ್ತು…!

ಆರು ದಶಕಗಳಿಂದ ಸಿನೆಮಾನಂಟು ಹೊಂದಿದ್ದ ದ್ವಾರಕೀಶ್ ವಿಷಯದಲ್ಲಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಮಾತು ಸರಿಯಾಗಿ ಮ್ಯಾಚ್ ಆಗುತ್ತದೆ. ದ್ವಾರಕೀಶ್ ಅವರಿಗೆ ಸಿನೆಮಾವೇ ಬದುಕಾಗಿತ್ತು, ಬದುಕೇ ಸಿನೆಮಾ ಆಗಿತ್ತು…ಬಣ್ಣದ ಜಗತ್ತಿನ ದಿವ್ಯ ಕೊಂಡಿಯAತಿದ್ದ ದ್ವಾರಕೀಶ್ ಚಿತ್ರರಂಗದ ಮಹಾದ್ವಾರದಂತಿದ್ದರು…ಮಹಾಶೂರರಂತಿದ್ದರು…!

ಸೋಲು ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಿ ಸಂಭ್ರಮಿಸುವುದರಲ್ಲೂ ದ್ವಾರಕೀಶ್ ಸದಾ ಮುಂದು…ಸಿಂಗಾಪುರದಲ್ಲಿ ರಾಜಾ ಕುಳ್ಳ ಸಿನೆಮಾ ಗೆದ್ದಾಗ ಅವರ ಮೊಗದಲ್ಲಿ ಯಾವ ನಗು ಇರುತ್ತಿತ್ತೋ ಅದೇ ಸೇಮ್ ಸ್ಮೈಲ್ ಆಫ್ರಿಕಾದಲ್ಲಿ ಶೀಲಾ ಥರದ ವಂಡರ್‌ಫುಲ್ ಸಿನೆಮಾ ಸೋತಾಗಲೂ ಇರುತ್ತಿತ್ತು…ಇಲ್ಲಿ ಸಂಪಾದಿಸಿದ್ದನ್ನ ಇಲ್ಲಿಯೇ ಚೆಲ್ಲಿ, ಅದೇ ಮುಗ್ದ ನಗು ಚೆಲ್ಲುವ ದ್ವಾರಕೀಶ್, ಪ್ರತಿಭಾವಂತರೂ ಹೌದು, ಹತ್ತು ಹಲವು ಪ್ರತಿಭಾವಂತರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ದ್ವಾರಕೀಶ್ ಅವರಿಗೆ ಮತ್ತು ಅವರಿಗಷ್ಟೇ ಸಲ್ಲುತ್ತದೆ!

ಆಡು ಮುಟ್ಟದ ಸೊಪ್ಪಿಲ್ಲ, ದ್ವಾರಕೀಶ್ ಆಡದ ಆಟವಿಲ್ಲ ಎಂದರೂ ತಪ್ಪಾಗಲಾರದು. ತನ್ನ ಇಡೀ ಎಂಬತ್ತೊಂದು ವರುಷ ವನ್ನು ಎಂಜಾಯ್ ಮಾಡಿ, ಜೀವನಪ್ರೀತಿಯನ್ನ ಅನುಭವಿಸಿ ಸಕ್ಸಸ್‌ಫುಲ್ ಹೀರೋ ಎನಿಸಿಕೊಂಡ ಧೀಮಂತ, ಶ್ರೀಮಂತ, ಬುದ್ದಿವಂತ ದ್ವಾರಕೀಶ್ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರು ಕರುನಾಡಿಗೆ ಕಾಣಿಕೆಯಾಗಿ ಕೊಟ್ಟ ಸಿನೆಮಾಗಳು, ಚಲನಶೀಲ ಚಿತ್ರಗಳು ಸದಾ ಜೀವಂತ, ಸದಾ ಶ್ರೀಮಂತ!

ವಿನಾಯಕರಾಮ್ ಕಲಗಾರು, ವಿಶ್ವವಾಣಿ ಟಿವಿ, ಬೆಂಗಳೂರು

Leave a Reply

Your email address will not be published. Required fields are marked *

error: Content is protected !!