#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Stock Market: ನಿಲ್ಲದ ಸೆನ್ಸೆಕ್ಸ್‌, ನಿಫ್ಟಿ ಕುಸಿತ; ಕಾರಣವೇನು?

ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸತತ 6ನೇ ದಿನವಾದ ಬುಧವಾರವೂ ಕುಸಿತ ದಾಖಲಿಸಿವೆ. ಬಿಎಸ್‌ಇ ಸೆನ್ಸೆಕ್ಸ್‌ 122 ಅಂಕ ಕಳೆದುಕೊಂಡು 76,171 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 26 ಅಂಕ ಕಳೆದುಕೊಂಡು 23,045ಕ್ಕೆ ದಿನದ ವಹಿವಾಟು ಪೂರ್ಣಗೊಳಿಸಿತು.

ಸತತ 6ನೇ ದಿನವೂ ಕುಸಿತ ಕಂಡ ಸೆನ್ಸೆಕ್ಸ್‌, ನಿಫ್ಟಿ

ಸಾಂದರ್ಭಿಕ ಚಿತ್ರ.

Keshava Prasad B Keshava Prasad B Feb 12, 2025 5:17 PM

ಮುಂಬೈ: ಮುಂಬೈ ಷೇರು ಮಾರುಕಟ್ಟೆ (Stock Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ (Sensex) ಮತ್ತು ನಿಫ್ಟಿ (Nifty) ಸತತ 6ನೇ ದಿನವಾದ ಬುಧವಾರವೂ (ಫೆ. 12) ಕುಸಿತ ದಾಖಲಿಸಿವೆ. ಹೀಗಿದ್ದರೂ ಆರಂಭಿಕ ಹಂತದ ಭಾರಿ ಕುಸಿತದಿಂದ ಚೇತರಿಸಿತು. ಬಿಎಸ್‌ಇ ಸೆನ್ಸೆಕ್ಸ್‌ 122 ಅಂಕ ಕಳೆದುಕೊಂಡು 76,171 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 26 ಅಂಕ ಕಳೆದುಕೊಂಡು 23,045ಕ್ಕೆ ದಿನದ ವಹಿವಾಟು ಪೂರ್ಣಗೊಳಿಸಿತು. ದಿನದ ಆರಂಭದಲ್ಲಿ ಸೆನ್ಸೆಕ್ಸ್‌ 780 ಅಂಕ ನಷ್ಟದಲ್ಲಿತ್ತು. ಮಧ್ಯಂತರದ ಕುಸಿತದ ಬಳಿಕ ಸೂಚ್ಯಂಕ ಚೇತರಿಸಿತು.

ಸೂಚ್ಯಂಕ ಇಳಿಕೆಗೆ ಕಾರಣವೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉಕ್ಕು ಮತ್ತು ಅಲ್ಯುಮಿನಯಂ ಮೇಲೆ ಆಮದು ತೆರಿಗೆ ಹೆಚ್ಚಿಸಿರುವುದರಿಂದ ಜಾಗತಿಕ ಷೇರು ಸೂಚ್ಯಂಕಗಳು ಕುಸಿದಿವೆ. ಮೆಕ್ಸಿಕೊ, ಕೆನಡಾ ಮತ್ತು ಐರೋಪ್ಯ ಒಕ್ಕೂಟ ಇದನ್ನು ಖಂಡಿಸಿದೆ.



ಅಮೆರಿಕದಲ್ಲಿ ಫೆಡರಲ್‌ ರಿಸರ್ವ್‌ನಿಂದ ಬಡ್ಡಿ ದರ ಇಳಿಕೆ ಸಾಧ್ಯತೆ ಕ್ಷೀಣಿಸಿದೆ. ವಿದೇಶಿ ಹೂಡಿಕೆಯ ಹೊರ ಹರಿವು ಹೆಚ್ಚಿದೆ. ವಿದೇಶಿ ವಿನಿಯ ಮಾರುಕಟ್ಟೆಯಲ್ಲಿ ಡಾಲರ್‌ ಪ್ರಾಬಲ್ಯ ಮುಂದುವರಿದಿದೆ. ಇದೆಲ್ಲವೂ ಮಾರುಕಟ್ಟೆ ಸೂಚ್ಯಂಕ ಕುಸಿತಕ್ಕೆ ಕಾರಣವಾಗಿದೆ.

ಐಸಿಐಸಿಐ ಪ್ರುಡೆನ್ಷಿಯಲ್‌ ಮ್ಯೂಚುವಲ್‌ ಫಂಡ್‌ನ ಹೆಸರಾಂತ ಫಂಡ್‌ ಮ್ಯಾನೇಜರ್‌ ಎಸ್.‌ ನರೇನ್‌ ಅವರ ಪ್ರಕಾರ, ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸ್ಟಾಕ್ಸ್‌ಗಳಲ್ಲಿ ಸಿಪ್‌ ಮೂಲಕ ಹೂಡಿಕೆ ಮಾಡಿರುವವರು ಎಚ್ಚರಿಕೆ ವಹಿಸಬೇಕು. ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳಿಗೆ 2008ರ ಬಳಿಕ 2025 ಅತ್ಯಂತ ಅಪಾಯಕಾರಿ ವರ್ಷ ಆಗಬಹುದು. ಆದ್ದರಿಂದ ಹೈಬ್ರಿಡ್‌ ಮ್ಯೂಚುವಲ್‌ ಫಂಡ್‌ ಸಿಪ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ನರೇನ್‌ ಅವರು.

ಹಾಗಾದ್ರೆ ಏನಿದು ಹೈಬ್ರಿಡ್‌ ಫಂಡ್?‌ ಹೈಬ್ರಿಡ್‌ ಫಂಡ್‌ ಎಂದರೆ ಈಕ್ವಿಟಿ, ಡೆಟ್‌ ಮತ್ತು ಇತರ ಅಸೆಟ್‌ಗಳಲ್ಲಿ ವೈವಿಧ್ಯಮಯ ಹೂಡಿಕೆಯನ್ನು ಮಾಡುವ ಮ್ಯೂಚುವಲ್‌ ಫಂಡ್‌ಗಳು.

ಬಿಎಸ್‌ಇನಲ್ಲಿರುವ 4,000ಕ್ಕೂ ಹೆಚ್ಚು ಷೇರುಗಳಲ್ಲಿ 1,058 ಷೇರುಗಳ ದರದಲ್ಲಿ 30% ಇಳಿಕೆಯಾಗಿದೆ. ನೆನಪಿಡಿ, ಈ ಕಂಪನಿಗಳ ಕನಿಷ್ಠ ಮಾರುಕಟ್ಟೆ ಮೌಲ್ಯ 500 ಕೋಟಿ ರುಪಾಯಿ. ಹೀಗಾಗಿ ಫಂಡಮೆಂಟಲ್‌ ಆಗಿ ಉತ್ತಮವಾಗಿರುವ ಷೇರುಗಳೂ ಈಗ ಡಿಸ್ಕೌಂಟ್‌ ದರದಲ್ಲಿ ಸಿಗುತ್ತಿವೆ.

ಕಳೆದ 52 ವಾರಗಳ ಗರಿಷ್ಠ ದರಕ್ಕೆ ಹೋಲಿಸಿದರೆ, ವಾರಿ ರಿನವೆಬಲ್‌ ಟೆಕ್ನಾಲಜೀಸ್‌ ಷೇರು ದರ 70% ಇಳಿಕೆಯಾಗಿದೆ. ಹೊನ್ಸಾ ಕನ್‌ ಸ್ಯೂಮರ್‌ ಷೇರು ದರ 63% ಇಳಿದಿದೆ. ಓಲಾ ಎಲೆಕ್ಟ್ರಿಕ್‌, ಜ್ಯುಪಿಟರ್‌ ವಾಗೋನ್ಸ್‌, ಬಿಎಲ್‌ಎಸ್‌ ಇ- ಸರ್ವೀಸ್‌, ಅದಾನಿ ಗ್ರೀನ್‌, ಕೊಚ್ಚಿನ್‌ ಶಿಪ್‌ಯಾರ್ಡ್‌, ಈಸೀ ಟ್ರಿಪ್‌ ಪ್ಲಾನರ್ಸ್‌, ವೊಡಾಫೋನ್‌ ಐಡಿಯಾ, ಅದಾನಿ ಟೋಟಲ್‌ ಗ್ಯಾಸ್‌, ವನ್‌ ಮೊಬಿವಿಕ್‌ ಷೇರು ದರಗಳು 50% ಇಳಿದಿವೆ.

ನಿಫ್ಟಿ ಫಿಫ್ಟಿಯಲ್ಲಿರುವ ಬ್ಲೂ ಚಿಪ್‌ ಷೇರುಗಳು 2024ರ ಸೆಪ್ಟೆಂಬರ್‌ನಲ್ಲಿದ್ದ ಉನ್ನತ ಮಟ್ಟಕ್ಕೆ ಹೋಲಿಸಿದರೆ ಈಗ 12% ಇಳಿಕೆಯಾಗಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಆರಂಭಿಸಿರುವ ಟ್ರೇಡ್‌ ವಾರ್‌ ಷೇರು ಮಾರುಕಟ್ಟೆಯನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬುದನ್ನು ಗ್ರಹಿಸಲು ಸಾಧ್ಯವಿಲ್ಲ. ಆದರೆ ಚಾರಿತ್ರಿಕ ಅಂಕಿ ಅಂಶಗಳನ್ನು ಗಮನಿಸಿದ್ರೆ ಸ್ಟಾಕ್‌ ಮಾರ್ಕೆಟ್‌ನಲ್ಲಿ 10-12% ಕರೆಕ್ಷನ್‌ ಸಾಮಾನ್ಯ. ಈಗ ಅದೇ ಆಗಿದೆ. ದೀರ್ಘಕಾಲೀನವಾಗಿ ಈಕ್ವಿಟಿ ಇನ್ವೆಸ್ಟ್‌ ಮೆಂಟ್‌ ಲಾಭ ತಂದಿರುವುದನ್ನು ಗಮನಿಸಬಹುದು. ಫ್ಯೂಚರ್‌ ಆಂಡ್‌ ಆಪ್ಷನ್‌ ಟ್ರೇಡಿಂಗ್‌ ಮಾತ್ರ ಅಪಾಯಕಾರಿ. ಅರಿತುಕೊಳ್ಳದೆ ಟ್ರೇಡಿಂಗ್‌ಗೆ ಕೈ ಹಾಕಬಾರದು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ವರ್ಷ 10 ಶತಕೋಟಿ ಡಾಲರ್‌ ಈಕ್ವಿಟಿಗಳನ್ನು ಮಾರಿದ್ದಾರೆ. ಅಂದರೆ ಸುಮಾರು 86 ಸಾವಿರ ಕೋಟಿ ರುಪಾಯಿ ಆಗುತ್ತದೆ. ಈ ಹಂತದಲ್ಲಿ ಹೂಡಿಕೆದಾರರು ಎಚ್ಚರಿಕೆಯಿಂದ ಇರಬೇಕು. ಅವಸರದಲ್ಲಿ ಷೇರುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಬೇಕಿಲ್ಲ.

ಈ ಸುದ್ದಿಯನ್ನೂ ಓದಿ: Post Office Monthly Income Scheme: ಪ್ರತಿ ತಿಂಗಳು 9,250 ರೂ. ಆದಾಯ ಪಡೆಯಲು ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ಎಚ್‌ಎಸ್‌ಬಿಸಿಯ ತಜ್ಞರ ಪ್ರಕಾರ, ಸಾಫ್ಟ್‌ವೇರ್‌ ವಲಯದ ಪ್ರಮುಖ ಕಂಪನಿಗಳ ಆದಾಯ ಮುಂಬರುವ ದಿನಗಳಲ್ಲಿ ಏರಿಕೆಯಾಗಬಹುದು. ಡಾಲರ್‌ ಎದುರು ರುಪಾಯಿ ಮೌಲ್ಯ ಇಳಿಕೆಯ ಲಾಭವನ್ನೂ ಈ ಕಂಪನಿಗಳು ಪಡೆಯಬಹುದು. ಜತೆಗೆ ಗ್ರಾಮೀಣ ಭಾಗದಲ್ಲಿ ಡಿಮಾಂಡ್‌ ಉಂಟಾಗಿರುವುದರಿಂದ ಎಫ್‌ಎಂಸಿಜಿ ವಲಯದ ಕಂಪನಿಗಳೂ ಲಾಭ ಗಳಿಸಬಹುದು.