ದೇಶದ ಸರಾಸರಿ ಕಾರ್ಮಿಕನೊಬ್ಬ ತನ್ನ ಆದಾಯದಲ್ಲಿ, ಉತ್ತಮ ಗುಣಮಟ್ಟದ ಊಟವನ್ನು ಖರೀದಿ ಮಾಡುವ ಕ್ಷಮತೆಯಲ್ಲಿ ಸುಧಾರಣೆಗಳಾಗಿವೆ ಎಂದು ಆರ್ಥಿಕ ಸಮೀಕ್ಷೆಯ ವಿಶಿಷ್ಟ ಅಧ್ಯಯನವೊಂದು ತಿಳಿಸುತ್ತದೆ.
ದೇಶದ ಸಾಮಾನ್ಯ ನಾಗರಿಕನ ದಿನನಿತ್ಯದ ಬದುಕಿನ ಮೇಲೆ ಆರ್ಥಿಕತೆಯ ಬೆಳವಣಿಗೆಗಳು ಯಾವೆಲ್ಲಾ ರೀತಿ ಪರಿಣಾಮ ಬೀರಬಲ್ಲವು ಎಂಬ ಕುರಿತಂತೆ ಒಂದೊಳ್ಳೆಯ ವಾಸ್ತವಿಕ ತುಲನೆಯನ್ನು ಆರ್ಥಿಕ ಸಮೀಕ್ಷೆಯಲ್ಲಿ ಮಾಡಲಾಗಿದೆ.
’ಥಾಲಿನಾಮಿಕ್ಸ್: ಭಾರತದ ಆಹಾರದ ತಟ್ಟೆಯ ಮೇಲಿನ ಆರ್ಥಿಕತೆ’ ಎಂಬ ಕಂಪ್ಯಾರಿಷನ್ ಒಂದನ್ನು ಮಾಡುವ ಮೂಲಕ, ಇಂದಿನ ಹಣದುಬ್ಬರಕ್ಕೆ ತಕ್ಕಂತೆ ದೇಶಾದ್ಯಂತ ಹೊಟೇಲ್/ರೆಸ್ಟಾರಂಟ್‌ಗಳಲ್ಲಿ ಥಾಲಿಯ (ಫುಲ್ ಮೀಲ್ಸ್/ಭೋಜನ/ಊಟ) ಬೆಲೆ ಎಷ್ಟಿದೆ ಎಂಬ ತುಲನಾತ್ಮಕ ವಿವರಣೆಯೊಂದನ್ನು ಸಮೀಕ್ಷೆಯಲ್ಲಿ ನಮೂದಿಸಲಾಗಿದೆ.
ದೇಶದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ವಿ ಸುಬ್ರಹ್ಮಣಿಯನ್ ಈ ’ಥಾಲಿನಾಮಿಕ್ಸ್’ ಹಿಂದಿನ ಮೆದುಳಾಗಿದ್ದಾರೆ. ದೇಶದ 25 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿನ — ಧವಸ/ಧಾನ್ಯಗಳು, ತರಕಾರಿ ಹಾಗೂ ಇಂಧನದ ಬೆಲೆಯನ್ನು ಪರಿಗಣನೆಗೆ ತೆಗೆದುಕೊಂಡು, ಆಯಾ ರಾಜ್ಯಗಳಲ್ಲಿ ಒಂದು ಊಟದ ಬೆಲೆ ಏನಿದೆ ಎಂಬ ಅಂದಾಜನ್ನು ಕೊಡಮಾಡುವ ಯತ್ನವನ್ನು ’ಥಾಲಿನಾಮಿಕ್ಸ್’ನಲ್ಲಿ ಮಾಡಲಾಗಿದೆ.
ಏಪ್ರಿಲ್ 2006 – ಅಕ್ಟೋಬರ್ 2019ರವರೆಗಿನ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡು ಮಾಡಲಾದ ಈ ಸಮೀಕ್ಷೆಯಲ್ಲಿ, ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು ಮಾಡಲಾದ ಲೆಕ್ಕಾಚಾರದ ಪ್ರಕಾರ ದೇಶಾದ್ಯಂತ, ಶಾಖಾಹಾರಿ ಥಾಲಿಯ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ ಎನ್ನಲಾಗುತ್ತಿದೆ. 2019-20ರಲ್ಲಿ ಬೆಲೆಗಳಲ್ಲಿ ಏರಿಕೆಯಾದರೂ ಸಹ, ಹಣದುಬ್ಬರದ ವೃದ್ಧಿಯ ದರದ ಆಧಾರದಲ್ಲಿ, ಪ್ರಭಾವೀ ಬೆಲೆಯಲ್ಲಿ ಇಳಿಕೆಯಾಗಿದೆ.
2014-15ರಿಂದ ಸಾಕಷ್ಟು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಇವುಗಳ ಫಲವಾಗಿ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಏರಿಕೆ ಕಂಡಿದ್ದು, ಕೃಷಿ ಮಾರುಕಟ್ಟೆಗಳನ್ನು ಸಮರ್ಪಕವಾಗಿ ನಿಭಾಯಿಸಲು ತೆಗೆದುಕೊಂಡ ಕ್ರಮಗಳೂ ಸಹ ಸಾಕಷ್ಟು ಸಕಾರಾತ್ಮಕವಾಗಿ ಕೆಲಸ ಮಾಡಿವೆ ಎಂದು ತಿಳಿದುಬಂದಿದೆ.
2015-16ರಿಂದ ಆಚೆಗೆ, ದೇಶದ ಸರಾಸರಿ ಕುಟುಂಬವೊಂದು ಶಾಖಾಹಾರಿ ಥಾಲಿಯ ಮೇಲಿನ ಬೆಲೆಗಳಲ್ಲಿ ಪ್ರಭಾವೀ ಇಳಿಕೆ ಕಂಡುಬಂದ ಕಾರಣ, ವರ್ಷವೊಂದರಲ್ಲಿ 10,887 ರೂಗಳ ಉಳಿತಾಯ ಮಾಡಿದರೆ, ಮಾಂಸಾಹಾರಿ ಥಾಲಿಗಳ ಮೇಲೆ ವಾರ್ಷಿಕ 11,787ರೂಗಳನ್ನು ಉಳಿಸಿಕೊಂಡು ಬಂದಿದೆ.
ದೇಶದ ಸರಾಸರಿ ಕೈಗಾರಿಕಾ ಕಾರ್ಮಿಕನೊಬ್ಬನ ಆದಾಯವನ್ನು ಪರಿಗಣನೆಗೆ ತೆಗೆದುಕೊಂಡ ವೇಳೆ, 2006-07ರಲ್ಲಿ ಇದ್ದದ್ದಕ್ಕಿಂತಲೂ 2019-20ರ ಅವಧಿಯಲ್ಲಿ ಶಾಖಾಹಾರಿ ಊಟವೊಂದರ ಬೆಲೆಯು ಕೈಗೆಟುಕುವ ಸಾಧ್ಯತೆಗಳು 29% ವೃದ್ಧಿಯಾಗಿದೆ. ಇದೇ ಅವಧಿಯಲ್ಲಿ ಮಾಂಸಾಹಾರಿ ಊಟಗಳ ಬೆಲೆಗಳು 18% ಹೆಚ್ಚು ಕೈಗೆಟುಕುವಂತಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
2019-20ರ ಆರ್ಥಿಕ ಸಮೀಕ್ಷಾ ವರದಿಯಲ್ಲಿ ವಿತ್ತೀಯ ವರ್ಷದಲ್ಲಿ ದೇಶದ ಆರ್ಥಿಕತೆಯ ಓಘವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಸಾಕಷ್ಟು ವಾಸ್ತವಿಕ ನಿದರ್ಶನಗಳ ಉಲ್ಲೇಖ ಮಾಡಲಾಗಿದೆ. 2020-21ರ ವಿತ್ತೀಯ ವರ್ಷದಲ್ಲಿ ದೇಶದ ಜಿಡಿಪಿ ಪ್ರಗತಿಯು 6 – 6.5% ಇರಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.