Sunday, 10th November 2024

‘ಚಕ್ಕಾ ಜಾಮ್‌’: ಗಾಜಿಪುರ, ಟಿಕ್ರಿ ಹಾಗೂ ಸಿಂಘು ಗಡಿಗಳಲ್ಲಿ ಭದ್ರತೆ ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶ ಗಳಲ್ಲಿ ಠಿಕಾಣಿ ಹೂಡಿರುವ ರೈತರು ಶನಿವಾರ ದೇಶವ್ಯಾಪಿ ‘ಚಕ್ಕಾ ಜಾಮ್‌’ ಪ್ರತಿಭಟನೆಗೆ ಕರೆ ನೀಡಿದ್ದಾರೆ.

ಮಧ್ಯಾಹ್ನ 12 ರಿಂದ 3ರ ನಡುವೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ. ಜನವರಿ 26 ಗಣರಾಜ್ಯೋತ್ಸವ ದಿನ ರೈತರು ನಡೆಸಿದ್ದ ಟ್ರ್ಯಾಕ್ಟರ್ ಪೆರೇಡ್‌, ಹಿಂಸಾಚಾರಕ್ಕೆ ತಿರುಗಿತ್ತು. ಹೀಗಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.

ದೆಹಲಿಯಲ್ಲಿ ರೈತರ ಸಂಚಾರ ತಡೆಯಲು ರಸ್ತೆಗಳಲ್ಲಿ ಮೊಳೆ, ಕಾಂಕ್ರೀಟ್ ಬ್ಯಾರಿಕೇಡ್ ಹಾಗೂ ತಂತಿಗಳನ್ನು ಸ್ಥಾಪಿಸಲಾಗಿದೆ. ಗಾಜಿಪುರ, ಟಿಕ್ರಿ ಹಾಗೂ ಸಿಂಘು ಗಡಿಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ರಾಷ್ಟ್ರವ್ಯಾಪಿ ಚಕ್ಕಾ ಜಾಮ್‍ನಿಂದ ಹೊರಬರುವ ಯಾವುದೇ ಪರಿಸ್ಥ್ಥಿತಿಯನ್ನು ಎದುರಿಸಲು ಅರೆಸೈನಿಕ ಪಡೆಗಳೂ ಸೇರಿದಂತೆ ಸಾವಿರಾರು ಸಿಬ್ಬಂದಿಯನ್ನು ನಿಯೋಜಿಸಿರುವ ದೆಹಲಿ ಪೊಲೀಸರು ಎಲ್ಲಾ ಗಡಿ ಕೇಂದ್ರಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಿ ದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ ಚಕ್ಕಾ ಜಾಮ್ ಸಂದರ್ಭದಲ್ಲಿ ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿನ ರಸ್ತೆಗಳನ್ನು ನಿರ್ಬಂಸುವುದಿಲ್ಲ ಎಂದಿದೆ. ದೇಶದ ಇತರ ಭಾಗಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಮೂರು ಗಂಟೆಗಳ ಕಾಲ ನಿರ್ಬಂಸಲಾಗುತ್ತದೆ. ರೈತರು ಎಲ್ಲೆಡೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ರೈತರು ಪ್ರತಿಪಾದಿಸಿದ್ದಾರೆ.

ಕೆಂಪುಕೋಟೆ ಮತ್ತು ಐಟಿಒ ಸೇರಿದಂತೆ ರಾಷ್ಟ್ರ ರಾಜಧಾನಿಯ ಪ್ರಮುಖ ಜಂಕ್ಷನ್‍ಗಳಲ್ಲಿ ಬಿಗಿ ಭದ್ರತೆ ಇಡಲು ಪೊಲೀಸರು ಡ್ರೋನ್ ಕ್ಯಾಮೆರಾಗಳನ್ನು ಬಳಸುತ್ತಿದ್ದಾರೆ. ಪ್ರತಿಭಟನಾ ಸ್ಥಳಗಳಲ್ಲಿ ಬಹುಪದರದ ಬ್ಯಾರಿಕೇಡ್‍ಗಳು, ಮುಳ್ಳುತಂತಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾವಲು ಪಡೆಯನ್ನು ಅಳವಡಿಸಲಾಗಿದೆ. ಇದರ ಜತೆಯಲ್ಲಿ ಸಾಮಾಜಿಕ ಜಾಲ ತಾಣಗಳ ಮೇಲೂ ಹದ್ದಿನ ಕಣ್ಣು ನೆಟ್ಟಿದ್ದಾರೆ ಎಂದು ತಿಳಿದುಬಂದಿದೆ.