Saturday, 7th September 2024

ದುರ್ಗಾಪೂಜೆ ವೇಳೆ ಕಾಲ್ತುಳಿತ: ಮೂವರ ಸಾವು

ಗೋಪಾಲ್​ಗಂಜ್: ನವರಾತ್ರಿ ಹಿನ್ನೆಲೆ ದುರ್ಗಾ ಪೂಜೆ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಗು ಮತ್ತು ಇಬ್ಬರು ಮಹಿಳೆಯರು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರದ ಗೋಪಾಲ್​ಗಂಜ್​ನಲ್ಲಿ ನಡೆದಿದೆ.

ಮೃತರನ್ನು ಆಶ್​ಕುಮಾರ್​(5), ಊರ್ಮಿಳಾ ದೇವಿ, ಶಾಂತಿ ದೇವಿ ಎಂದು ಗುರುತಿಸಲಾಗಿದೆ.

ಗೋಪಾಲ್​ಗಂಜ್​ನಲ್ಲಿ ದುರ್ಗಾ ಪೂಜೆ ಹಮ್ಮಿಕೊಳ್ಳಲಾಗಿತ್ತು. ದುರ್ಗಾ ಪೂಜೆಗೆ ಅಪಾರ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ವೇಳೆ ಕಾಲ್ತುಳಿತ ಉಂಟಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಡಳಿತ ಮಂಡಳಿ ಸದಸ್ಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಜನರನ್ನು ಭೇಟಿ ಮಾಡಿ ಆರೋಗ್ಯವನ್ನು ವಿಚಾರಿಸಿ ದ್ದಾರೆ. ದುರ್ಗಾ ಪೂಜೆ ಹಿನ್ನೆಲೆ ಸ್ಥಳದಲ್ಲಿ ಯಾವುದೇ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿರಲಿಲ್ಲ. ಇದರಿಂದಾಗಿ ಕಾಲ್ತುಳಿತ ಉಂಟಾಗಿದೆ ಎಂದು ಆರೋಪಿಸಲಾಗಿದೆ.

ಗೋಪಾಲ್​ಗಂಜ್​ ಪೊಲೀಸ್​ ವರಿಷ್ಠಾಧಿಕಾರಿ ಪ್ರತಿಕ್ರಿಯಿಸಿ, ಇಲ್ಲಿನ ದುರ್ಗಾ ಪೂಜಾ ಸ್ಥಳದಲ್ಲಿ ಸೋಮವಾರ ಸುಮಾರು 8.30ಕ್ಕೆ ಕಾಲ್ತುಳಿತ ಸಂಭವಿಸಿದೆ. ಇಲ್ಲಿ ಹಮ್ಮಿಕೊಂಡಿದ್ದ ದುರ್ಗಾಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಈ ಸಂದರ್ಭ ಒಂದು ಮಗು ಜನಸಂದಣಿ ನಡುವೆ ನೆಲಕ್ಕೆ ಬಿದ್ದಿದೆ. ಈ ಮಗುವನ್ನು ರಕ್ಷಿಸಲು ಮುಂದಾದಾಗ ಜನಸಂದಣಿಯಲ್ಲಿ ನೂಕುನುಗ್ಗಲು ಉಂಟಾಗಿದೆ.

ಬಳಿಕ ಇಬ್ಬರು ಮಹಿಳೆಯರು ಮಗುವನ್ನು ರಕ್ಷಿಸಲು ಧಾವಿಸಿದ್ದು, ಈ ವೇಳೆ ಈ ಮಹಿಳೆಯರು ಜನರ ಕಾಲ್ತುಳಿತಕ್ಕೆ ಸಿಲುಕಿದರು. ತಕ್ಷಣ ಇವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಸ್ಥಳದಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​ ಮಾಡಲಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!