Saturday, 23rd November 2024

Earthquake: ದೆಹಲಿ, ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿ ಹಲವೆಡೆ 5.8 ತೀವ್ರತೆಯ ಭೂಕಂಪ

Earthquake

ಹೊಸದಿಲ್ಲಿ: ಉತ್ತರ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಲವೆಡೆ ಬುಧವಾರ (ಸೆಪ್ಟೆಂಬರ್‌ 11) ಮಧ್ಯಾಹ್ನ ಭೂಕಂಪದ ಅನುಭವವಾಗಿದೆ (Earthquake). ಭಾರತದ ಹೊಸದಿಲ್ಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಪಾಕಿಸ್ತಾನದ ಪೇಶಾವರ, ಇಸ್ಲಾಮಾಬಾದ್ ಮತ್ತು ಲಾಹೋರ್ ಹಾಗೂ ಅಫ್ಘಾನಿಸ್ತಾನದಲ್ಲಿ ಭೂಕಂಪವಾಗಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದಲ್ಲಿ ರಿಕ್ಟರ್‌ ಮಾಪಕದಲ್ಲಿ 5.8 ತೀವ್ರತೆ ಸೂಚಿಸುವ ಭೂಕಂಪ ಸಂಭವಿಸಿದೆ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (GFZ) ತಿಳಿಸಿದೆ. ಭೂಕಂಪವು 10 ಕಿಲೋಮೀಟರ್ (6.21 ಮೈಲಿ) ಆಳದಲ್ಲಿತ್ತು ಎಂದು ಜಿಎಫ್‌ಝೆಡ್‌ ಹೇಳಿದೆ. ಯಾವುದೇ ಸಾವು ನೋವಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಭೂಕಂಪ ಬಾಧಿತ ಪ್ರದೇಶಗಳಲ್ಲಿ ಕಟ್ಟಡ ಅಲುಗಾಡಿದ ಅನುಭವವಾಗಿದೆ ಎಂದು ಹಲವರು ತಿಳಿಸಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಫೋಟೊ, ವೀಡಿಯೊ ಹಂಚಿಕೊಂಡಿದ್ದಾರೆ. ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಭೂಕಂಪದ ಕೇಂದ್ರ ಬಿಂದು ಪಾಕಿಸ್ತಾನದ ಕರೋರ್‌ (Karor)ನಿಂದ ನೈಋತ್ಯಕ್ಕೆ 25 ಕಿ.ಮೀ. ದೂರದಲ್ಲಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವರ್ಷ ಹಲವು ಬಾರಿ ಕಂಪಿಸಿದ ಭೂಮಿ

ಕೆಲವು ದಿನಗಳ ಹಿಂದೆಯಷ್ಟೇ (ಆಗಸ್ಟ್‌ 20) ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ 4.9 ತೀವ್ರತೆಯ ಮಧ್ಯಮ ಭೂಕಂಪ ಸಂಭವಿಸಿತ್ತು. ಅದಕ್ಕೂ ಮೊದಲು ಈ ವರ್ಷದ ಜುಲೈನಲ್ಲಿ ಬಾರಾಮುಲ್ಲಾದಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮಧ್ಯಾಹ್ನ 12.26ಕ್ಕೆ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತ್ತು. ಅಲ್ಲದೆ ಆಗಸ್ಟ್‌ ಆರಂಭದಲ್ಲಿ ಫರಿದಾಬಾದ್ ಜಿಲ್ಲೆಯನ್ನು ನಡುಗಿಸಿದ ಎರಡು ಭೂಕಂಪಗಳಿಂದ ಹರಿಯಾಣದ ನಿವಾಸಿಗಳು ಬೆಚ್ಚಿಬಿದ್ದಿದ್ದರು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಬೆಳಿಗ್ಗೆ 10:54ರ ಸುಮಾರಿಗೆ ಮೊದಲ ಭೂಕಂಪನದ ಅನುಭವವಾಗಿತ್ತು. ನಂತರ ಬೆಳಿಗ್ಗೆ 11:43ಕ್ಕೆ ಎರಡನೇ ಭೂಕಂಪ ಸಂಭವಿಸಿತ್ತು. ದೆಹಲಿ-ಎನ್‌ಸಿಅರ್‌ ಪ್ರದೇಶದಾದ್ಯಂತ ಹಲವು ಪ್ರದೇಶಗಳಲ್ಲಿ ಭೂಕಂಪವಾದ ವರದಿಯಾಗಿತ್ತು. ಆದರೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ.

ಈ ಸುದ್ದಿಯನ್ನೂ ಓದಿ: ಬಾರಾಮುಲ್ಲಾದಲ್ಲಿ 4.9 ತೀವ್ರತೆಯ ಮಧ್ಯಮ ಭೂಕಂಪ