Saturday, 30th November 2024

Eknath Shinde: ಮಹಾರಾಷ್ಟ್ರ ಸಿಎಂ ಯಾರಾಗ್ತಾರೆ ಎನ್ನುವ ಕುತೂಹಲಕ್ಕೆ ಶೀಘ್ರದಲ್ಲೇ ಉತ್ತರ; ಇಂದೇ ಅಂತಿಮ ನಿರ್ಧಾರ ಪ್ರಕಟಿಸ್ತಾರ ಶಿಂಧೆ?

Eknath Shinde

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗಿ 1 ವಾರ ಆಗಿದೆ. ಇನ್ನೂ ಮುಖ್ಯಮಂತ್ರಿಯ ಘೋಷಣೆಯಾಗಿಲ್ಲ. ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಮರಳಿದ ಬಿಜೆಪಿ ನೇತೃತ್ವದ ಮಹಾಯುತಿ (Mahayuti) ಮೈತ್ರಿಕೂಟದಲ್ಲಿ ಗೊಂದಲ ಮುಂದುವರಿದಿದೆ. ಶುಕ್ರವಾರವೇ (ನ. 29) ಸಿಎಂ ಯಾರಾಗ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಸಿಗಬೇಕಿತ್ತು. ಆದರೆ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ (Eknath Shinde) ಹೊಸದಿಲ್ಲಿ ಅಯೋಜಿಸಿದ್ದ ಮಹಾಯುತಿ ಸಭೆಯಿಂದ ದಿಢೀರಾಗಿ ತಮ್ಮ ಹುಟ್ಟೂರಾದ ಮಹಾರಾಷ್ಟ್ರದ ಸತಾರಾದಲ್ಲಿರುವ ದರೆ(Dare) ಗ್ರಾಮಕ್ಕೆ ತೆರಳಿದ್ದರಿಂದ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಮುಖ್ಯಮಂತ್ರಿಯಾರಾಗಬೇಕು ಎನ್ನುವ ವಿಚಾರದಲ್ಲಿ ಅವರು ಇಂದು (ನ. 30) ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

ಏಕನಾಥ ಶಿಂಧೆ ಮರಳಿದ್ದೇಕೆ?

ಸಭೆ ಮೊಟಕುಗೊಳಿಸಿ ಏಕನಾಥ್ ಶಿಂಧೆ ತೆರಳಿದ್ದು ಅನುಮಾನಕ್ಕೆ ಕಾರಣವಾಗಿತ್ತು. ಇದೀಗ ಶಿವಸೇನೆ ಮುಖಂಡ ಉದಯ್ ಸಮಂತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ʼʼಏಕನಾಥ್ ಶಿಂಧೆ ಅವರು ಮೈತ್ರಿಕೂಟದ ವಿರುದ್ಧ ಅಸಮಾಧಾನಗೊಂಡಿಲ್ಲ. ಜ್ವರ ಮತ್ತು ಶೀತದಿಂದ ಬಳಲುತ್ತಿದ್ದರಿಂದ ಅವರು ಸತಾರಾ ಜಿಲ್ಲೆಯ ತಮ್ಮ ಸ್ವಂತ ಗ್ರಾಮಕ್ಕೆ ತೆರಳಿದ್ದಾರೆʼʼ ಎಂದು ಹೇಳಿದ್ದಾರೆ.

ಶೀಘ್ರದಲ್ಲೇ ಏಕನಾಥ ಶಿಂಧೆ ನಿರ್ಧಾರ ಪ್ರಕಟ

ʼʼಮುಂದಿನ 24 ಗಂಟೆಗಳಲ್ಲಿ ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಮುಖ್ಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆʼʼ ಎಂದು ಶಿವಸೇನೆಯ ಮತ್ತೊಬ್ಬ ಮುಖಂಡ ಸಂಜಯ್ ಶಿರ್ಸಾತ್ ಹೇಳಿದ್ದಾರೆ. ಅದಾಗ್ಯೂ ಏಕನಾಥ್ ಶಿಂಧೆ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಯಾವುದೇ ಸ್ಥಾನವನ್ನು ಪಡೆದುಕೊಳ್ಳುವುದಿಲ್ಲ. ಅವರು ರಾಜ್ಯ ರಾಜಕೀಯದಲ್ಲೇ ಸಕ್ರೀಯರಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ನ. 28ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದಾಗಲೇ ಏಕನಾಥ ಶಿಂಧೆ ಅವರು ಜ್ವರ, ನೆಗಡಿಯಿಂದ ಬಳಲುತ್ತಿದ್ದರು. ಹೀಗಾಗಿ ಸ್ವಗ್ರಾಮಕ್ಕೆ ಮರಳಿದ್ದಾರೆ ಎಂದು ತಿಳಿಸಿದ ಉದಯ್ ಸಮಂತ್ ಅವರು ಅಸಮಾಧಾನದ ವದಂತಿಯನ್ನು ತಳ್ಳಿ ಹಾಕಿದ್ದಾರೆ.

ಅಮಿತ್‌ ಸಾ ಅವರ ನಿವಾಸದಲ್ಲಿ ನಡೆದ ಮಹಾಯುತಿ ಮೈತ್ರಿಕೂಟದ ಸಭೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್‌, ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಮತ್ತು ಶಿವ ಸೇನೆಯ ಏಕನಾಥ ಶಿಂಧೆ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಏಕನಾಥ್ ಶಿಂಧೆ, ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ನಡುವಿನ ಸಭೆಯ ಬಗ್ಗೆ ಕೇಳಿದಾಗ ಉತ್ತರಿಸಿದ ಉದಯ್ ಸಮಂತ್, “ಸಭೆ ಭೌತಿಕವಾಗಿ ನಡೆಯದಿದ್ದರೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆಸಲಾಗುತ್ತದೆ” ಎಂದು ಹೇಳಿದ್ದಾರೆ.

ಡಿ. 2ರಂದು ಪ್ರಮಾಣ ವಚನ?

ಎಎನ್ಐ ಜತೆ ಶುಕ್ರವಾರ ಮಾತನಾಡಿದ ಸಂಜಯ್ ಶಿರ್ಸಾತ್, “ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನಿರ್ಧರಿಸಲಿದ್ದಾರೆ. ಇಂದು ಮುಖ್ಯಮಂತ್ರಿಯ ಹೆಸರು ಘೋಷಣೆಯಾಗಲಿದ್ದು, ಡಿ. 2ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆ ಇದೆʼʼ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಏಕನಾಥ ಶಿಂಧೆ ಅವರ ನಿರ್ಧಾರ ಇಂದು (ಶನಿವಾರ) ಸಂಜೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಈ ಸುದ್ದಿಯನ್ನೂ ಓದಿ: Eknath Shinde: ಮಹಾಯುತಿ ಸಭೆ ರದ್ದು… ಏಕಾಏಕಿ ಸ್ವಗ್ರಾಮಕ್ಕೆ ತೆರಳಿದ ಏಕನಾಥ್‌ ಶಿಂಧೆ