Saturday, 23rd November 2024

ವಿವಾದಿತ ಕೃಷಿ ಕಾಯ್ದೆ: ಅರ್ಜಿಗಳ ವಿಚಾರಣೆ ನಾಳೆ

ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳು ಮತ್ತು ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಕುರಿತು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ನಡೆಸಲಿದೆ.

ಕೃಷಿ ಕಾಯ್ದೆಗಳಿಂದ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಕೋರ್ಟ್‌ ನೇಮಿಸಿರುವ ನಾಲ್ವರು ಸದಸ್ಯರ ಸಮಿತಿಯಿಂದ ಹೊರ ಬರುವುದಾಗಿ ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ಭೂಪಿಂದರ್‌ ಸಿಂಗ್‌ ಮಾನ್‌ ಹೇಳಿದ್ದರು. ಈ ವಿಷಯವನ್ನು ಸಹ ನ್ಯಾಯಾಲಯ ಇದೇ ಸಂದರ್ಭದಲ್ಲಿ ವಿಚಾರಣೆಗೆ ಪರಿಗಣಿಸಲಿದೆ.

ಜ.26ರಂದು ರೈತ ಸಂಘಟನೆಗಳು ನಡೆಸಲಿರುವ ಟ್ರ್ಯಾಕ್ಟರ್‌ ರ‍್ಯಾಲಿ ಅಥವಾ ಯಾವುದೇ ರೀತಿಯ ಪ್ರತಿಭಟನೆಗೆ ತಡೆಯಾಜ್ಞೆ ನೀಡ ಬೇಕು ಎಂದು ದೆಹಲಿ ಪೊಲೀಸ್‌ ಮೂಲಕ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ.

ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ್ ರಾವ್‌ ಮತ್ತು ವಿನೀತ್‌ ಸರಣ್‌ ಅವರನ್ನೊಳಗೊಂಡ ಪೀಠವು ಈ ಅರ್ಜಿಗಳ ವಿಚಾ ರಣೆ ನಡೆಸಲಿದೆ. ಜತೆಗೆ, ಮಾನ್‌ ಅವರ ಬದಲಿಗೆ ಮತ್ತೊಬ್ಬ ಸದಸ್ಯರನ್ನು ನೇಮಿಸುವ ಸಾಧ್ಯತೆಯೂ ಇದೆ.

ಸುಪ್ರಿಂ ಕೋರ್ಟ್‌ ನೇಮಿಸಿರುವ ಸಮಿತಿಯ ಇತರ ಮೂವರು ಸದಸ್ಯರು ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದಾರೆ. ಹೀಗಾಗಿ, ಇವರನ್ನು ಸಮಿತಿಯಿಂದ ತೆಗೆದುಹಾಕಿ, ಪರಸ್ಪರ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವಂತಹ ತಜ್ಞರನ್ನು ನೇಮಿಸಬೇಕು ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಲೋಕಶಕ್ತಿ ಸಂಘಟನೆ ಶನಿವಾರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.