Saturday, 27th July 2024

ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನ

ಶ್ರೀನಗರ: ಅನಾರೋಗ್ಯದಿಂದ ಬಳಲುತ್ತಿದ್ದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ (91) ಬುಧವಾರ ರಾತ್ರಿ ಶ್ರೀನಗರದ ನಿವಾಸದಲ್ಲಿ ನಿಧನರಾದರು. 2013ರಿಂದ ಹೆಚ್ಚಾಗಿ ಗೃಹಬಂಧನದಲ್ಲಿಯೇ ಇದ್ದ ಅವರ ಆರೋಗ್ಯ ಮೂರು ವರ್ಷಗಳಿಂದ ಹದಗೆಟ್ಟಿತ್ತು.

ಹಲವು ಬಾರಿ ಅವರ ಆರೋಗ್ಯದ ಬಗ್ಗೆ ವದಂತಿಗಳು ಹಬ್ಬಿ, ಕಣಿವೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು.

ಮೂರು ದಶಕಗಳಿಗೂ ಹೆಚ್ಚಿನ ಕಾಲ ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕ ರಾಜ್ಯವಾಗಬೇಕು ಎಂದು ಹೋರಾಟ ನಡೆಸಿದ್ದರು. 1990ರಿಂದ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳವಳಿ ಮುನ್ನಡೆಸಿದ್ದ ಗಿಲಾನಿ, ಹುರಿಯತ್​ನ ಆಜೀವ ಅಧ್ಯಕ್ಷರಾಗಿದ್ದರು. ಪ್ರಸಕ್ತ ಸನ್ನಿವೇಶಗಳಿಂದಾಗಿ 2020ರ ಜೂನ್‌ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು. ಮೂರು ಬಾರಿ ಸೋಪೋರ್ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

ನೂರಾರು ಕೋಟಿ ರೂಪಾಯಿಗಳ ಒಡೆಯ ಗಿಲಾನಿ ಹಾಗೂ ಅವರ ಮಕ್ಕಳಾದ ನಾಸೀಮ್, ನಯೀಮ್, ಅನಿಷಾ, ಫಾರ್ ಹಾತ್ ಸೇರಿ ಆರು ಜನರ ಮೇಲೆ ಎನ್‌ಐಎ ಅಧಿಕಾರಿಗಳು ಕಣ್ಣಿಟ್ಟಿದ್ದರು. ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ಬಳಕೆ ಮುಂತಾದ ಆರೋಪಗಳ ಕುರಿತ ತನಿಖೆ ಇನ್ನೂ ಜಾರಿಯಲ್ಲಿದೆ.

ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಗಿಲಾನಿ ನಿಧನಕ್ಕೆ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!