ಬೆಳಗಾವಿ: ಕನ್ನಡ ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆಯವರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಭಾನುವಾರ ಪ್ರತಿಭಟನಾ ಸಭೆ ನಡೆಸಿದರು.
ಜಿಲ್ಲಾಡಳಿತದಿಂದ ಅನುಮತಿ ನೀಡಿಲ್ಲದಿದ್ದರೂ ಸಭೆ ನಡೆಸಿ, ‘ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು’, ‘ರಹೆಂಗೇ ತೋ ಮಹಾರಾಷ್ಟ್ರ ಮೇ, ನಹೀ ತೋ ಜೈಲ್ ಮೇ’ ಮೊದಲಾದ ಘೋಷಣೆಗಳನ್ನು ಕೂಗಿದರು.
ಎಂಇಎಸ್ಗೆ ಧಿಕ್ಕಾರ ಕೂಗುತ್ತಾ ಸಭೆಗೆ ನುಗ್ಗಲು ಯತ್ನಿಸಿದ ಕನ್ನಡ ಅಭಿಮಾನಿ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದರು. ಇದೇ ವೇಳೆ ಬಂದ ಎಂಇಎಸ್ ನಾಯಕಿ, ಮಾಜಿ ಉಪ ಮೇಯರ್ ರೇಣು ಕಿಲ್ಲೇಕರ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಗಡಿ ಭಾಗದ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಆರೋಪಿಸಿದರು. ಎಂಇಎಸ್ ಸಭೆಗೆ ಮುತ್ತಿಗೆ ಹಾಕಲು ಬರುತ್ತಿದ್ದ ಕರವೇ ಕಾರ್ಯಕರ್ತರನ್ನು ಪೊಲೀಸರು ರೈಲ್ವೆ ಮೇಲ್ಸೇತುವೆ ಬಳಿಯಲ್ಲೇ ತಡೆ ದರು. ಪೊಲೀಸರ ವಿರುದ್ಧ ಕಾರ್ಯಕರ್ತರು ಧರಣಿ ನಡೆಸಿದರು.
‘ಕೋವಿಡ್ ನೆಪವೊಡ್ಡಿ ರಾಜ್ಯೋತ್ಸವ ಮೆರವಣಿಗೆ ನಡೆಸಲು ಅವಕಾಶ ಕೊಡಲಿಲ್ಲ. ಆದರೆ, ಎಂಇಎಸ್ ಸಭೆಗೆ ಅವಕಾಶ ಕೊಟ್ಟಿ ದ್ದೇಕೆ’ ಎಂದು ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಪೊಲೀಸರನ್ನು ಪ್ರಶ್ನಿಸಿದರು. ‘ಬೆಳಗಾವಿಯಲ್ಲೇ ಇದ್ದುಕೊಂಡು ಕರಾಳ ದಿನ ಆಚರಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.