ಸೊಳ್ಳೆಗಳು (Mosquitoes) ಸಾಮಾನ್ಯವಾಗಿ ನಮ್ಮ ಕಿವಿಯ (Mosquitoes near Ear) ಬಳಿಯೇ ಬಂದು ಗುಂಯ್‌ಗುಡುತ್ತವೆ. ಎಷ್ಟೇ ಓಡಿಸಿದರೂ ಮತ್ತೆ ಮತ್ತೆ ಬರುತ್ತವೆ. ಯಾಕೆ ಹೀಗೆ ಎಂಬ ಅನುಮಾನ ಯಾವತ್ತಾದರೂ ನಿಮ್ಮನ್ನು ಕಾಡಿದೆಯೇ?
ಬೇಸಿಗಯಲ್ಲಿ ಬಹುತೇಕ ಮೌನವಾಗಿರುವ ಸೊಳ್ಳೆಗಳು ಮಳೆಗಾಲ, ಚಳಿಗಾಲದಲ್ಲಿ ಹೆಚ್ಚಿನ ತೊಂದರೆ ಕೊಡುತ್ತವೆ. ಈ ರಕ್ತ ಹೀರುವ ಕೀಟಗಳು ಹೆಚ್ಚಾಗಿ ನಮ್ಮ ಕಿವಿಯ ಸುತ್ತಲೂ ಸುಳಿದಾಡುವುದು ಏಕೆ, ಪದೇಪದೇ ಓಡಿಸಿದರೂ ಕಿರಿಕಿರಿಗೊಳಿಸಲು ಅವು ಕಿವಿಯ ಸಮೀಪವೇ ಬರುವುದು ಏಕೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.
ಕಿವಿಯ ಸಮೀಪ ಬಂದು ಝೇಂಕರಿಸುವ ಸೊಳ್ಳೆಗಳ ಧ್ವನಿ ರೆಕ್ಕೆಗಳನ್ನು ಬಡಿಯುವಾಗ ಬರುವ ಸದ್ದಾಗಿದೆ. ಇದು ಹೆಚ್ಚು ದೂರದವರೆಗೆ ಕೇಳಿಸುವುದಿಲ್ಲ. ಹೀಗಾಗಿ ಅವುಗಳು ಕಿವಿಯ ಸುತ್ತ ಹಾರುವಾಗ ಮಾತ್ರ ಈ ಸದ್ದು ಕೇಳುತ್ತದೆ ಎಂದು ಅರಿಜೋನಾ ವಿಶ್ವವಿದ್ಯಾಲಯದ ಕೀಟಶಾಸ್ತ್ರದ ಪ್ರಾಧ್ಯಾಪಕ ಮೈಕೆಲ್ ರೈಹ್ಲೆ ತಿಳಿಸಿದ್ದಾರೆ.
ಹೆಣ್ಣು ಸೊಳ್ಳೆಗಳು ಮಾತ್ರ ಈ ರೀತಿ ಸದ್ದು ಮಾಡುತ್ತವೆ. ಯಾಕೆಂದರೆ ಗಂಡು ಮತ್ತು ಹೆಣ್ಣು ಸೊಳ್ಳೆಗಳು ವಿಭಿನ್ನ ಜೀವನವನ್ನು ನಡೆಸುತ್ತವೆ. ಗಂಡು ಸೊಳ್ಳೆಗಳು ಕೆಲವೊಂದು ಮರ, ಹೂವುಗಳಿಂದ ಬರುವ ಮಕರಂದವನ್ನು ಕುಡಿದು ಜೀವಿಸುತ್ತವೆ. ಆದರೆ ಹೆಣ್ಣು ಸೂಳ್ಳೆಗಳಿಗೆ ಮೊಟ್ಟೆ ಇಡಲು ಸಾಕಷ್ಟು ಶಕ್ತಿ ಬೇಕಾಗುತ್ತದೆ. ಹೀಗಾಗಿ ಅದನ್ನು ಪಡೆಯಲು ಅದು ಮನುಷ್ಯರ ರಕ್ತವನ್ನು ಹೀರುತ್ತವೆ.
ನಮ್ಮ ದೇಹದಿಂದ ಹೊರಸೂಸುವ ಇಂಗಾಲದ ಡೈ ಆಕ್ಸೈಡ್ ನಿಂದ ಅವುಗಳು ನಮ್ಮ ಹತ್ತಿರ ಬರುತ್ತವೆ. ಸೊಳ್ಳೆಗಳು ಹೆಚ್ಚಾಗಿ ನಮ್ಮ ತಲೆಯ ಸುತ್ತಲೂ ಝೇಂಕರಿಸುತ್ತವೆ. ಯಾಕೆಂದರೆ ತಲೆಯ ಭಾಗದಲ್ಲೇ ನಾವು ಹೆಚ್ಚು ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕುತ್ತೇವೆ. ಸೊಳ್ಳೆಗಳು ಇಂಗಾಲದ ಡೈ ಆಕ್ಸೈಡ್ ಅನ್ನು ಸುಮಾರು 50 ಮೀಟರ್ ದೂರದಿಂದಲೇ ಗ್ರಹಿಸುತ್ತವೆ. ಅಲ್ಲದೇ ಹೆಚ್ಚಾಗಿ ದೇಹದ ಗಾಢ ಬಣ್ಣವು ಅವುಗಳನ್ನು ಆಕರ್ಷಿಸುತ್ತವೆ ಎನ್ನುವುದು ಕೂಡ ಅಧ್ಯಯನದಿಂದ ತಿಳಿದು ಬಂದಿದೆ.
Dark Circle: ಕಣ್ಣುಗಳ ಡಾರ್ಕ್ ಸರ್ಕಲ್ ನಿವಾರಿಸಲು ಇಲ್ಲಿದೆ ಸುಲಭ ಉಪಾಯ!
ಹೆಣ್ಣು ಸೊಳ್ಳೆಯು ಪ್ರತಿ ಸೆಕೆಂಡಿಗೆ ಸರಿಸುಮಾರು 500 ಬಾರಿ ರೆಕ್ಕೆಯನ್ನು ಹೊಡೆಯುತ್ತವೆ. ಹೀಗಾಗಿ ಅವುಗಳ ರೆಕ್ಕೆ ಹೊಡೆಯುವ ಆವರ್ತನವು ಸಂಗೀತದ ಲಯದಂತೆ ಕೇಳುತ್ತದೆ. ಗಂಡು ಸೊಳ್ಳೆಗಳು ಹೆಣ್ಣು ಸೊಳ್ಳೆಗಳಿಗಿಂತ ಹೆಚ್ಚು ಬಾರಿ ರೆಕ್ಕೆ ಬಾರಿಸುತ್ತವೆ. ಗಂಡು ಸೊಳ್ಳೆಗಳು ನಮ್ಮ ತಲೆಯ ಭಾಗದತ್ತ ಆಕರ್ಷಿತವಾಗುವುದಿಲ್ಲ. ಅವುಗಳು ಹೆಚ್ಚಾಗಿ ಪಾದಗಳತ್ತ ಆಕರ್ಷಿಸಲ್ಪಡುತ್ತವೆ. ಯಾಕೆಂದರೆ ಇವುಗಳನ್ನು ಬ್ಯಾಕ್ಟೀರಿಯಾಗಳು ಸೆಳೆಯುತ್ತವೆ ಎನ್ನುತ್ತಾರೆ ಮೈಕೆಲ್ ರೈಹ್ಲೆ.