Friday, 18th October 2024

2022ರಲ್ಲಿ ನಡೆಯುವ ಚುನಾವಣೆ ಮುಂದೂಡುವುದಿಲ್ಲ: ಸುಶೀಲ್ ಚಂದ್ರ

ನವದೆಹಲಿ: ಮತದಾರ(80 ವರ್ಷ ಮೇಲ್ಪಟ್ಟ) ಹಾಗೂ ಡಯಾಬಿಟಿಸ್, ಕೊವಿಡ್ ಸೋಂಕು ತಗುಲಿರುವ ಮತದಾರರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ ಮತ್ತು ಪಂಜಾಬ್‌ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಸುದ್ದಿಗೋಷ್ಠಿ ನಡೆಸಿದ್ದಾರೆ.

ಒಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗುವುದು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಸುಶೀಲ್ ಚಂದ್ರ, 2022ರಲ್ಲಿ ನಡೆಯಲಿರುವ ಚುನಾವಣೆಯನ್ನು ಮುಂದೂಡುವುದಿಲ್ಲ. ಎಲ್ಲ ರೀತಿಯ ಕೊವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅಳವಡಿಸುವ ಮೂಲಕ ಚುನಾವಣೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕೊವಿಡ್ ನಿಯಮಾವಳಿಗಳನ್ನು ಅನುಸರಿಸಿ ಈಗಾಗಲೇ ನಿಗದಿಯಾಗಿರುವ ಸಮಯದಲ್ಲೇ ಚುನಾವಣೆಯನ್ನು ನಡೆಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶಕ್ಕೆ ಮೂರು ದಿನಗಳ ಪ್ರವಾಸದಲ್ಲಿದ್ದ ಚುನಾವಣಾ ಆಯೋಗದ ನಿಯೋಗವು ಮುಂದಿನ ವರ್ಷದ ರಾಜ್ಯ ವಿಧಾನಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಲು ಜಿಲ್ಲಾ ಮತ್ತು ವಿಭಾಗ ಮಟ್ಟದ ಅಧಿಕಾರಿಗಳನ್ನು ನಿನ್ನೆ ಭೇಟಿ ಮಾಡಿತ್ತು. ಚುನಾವಣಾ ಆಯೋಗದ ನಿಯೋಗವು ಜಿಲ್ಲಾಧಿಕಾರಿಗಳು, ಪೊಲೀಸ್ ಮುಖ್ಯಸ್ಥರು, ಕಮಿಷನರ್‌ಗಳು, ಐಜಿಗಳು, ಡಿಐಜಿಗಳು ಮತ್ತು ಇತರ ಅಧಿಕಾರಿ ಗಳನ್ನು ಭೇಟಿ ಮಾಡಿತು. ಹಾಗೇ, ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಮುಂಬರುವ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಿತು” ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಆಯೋಗವು ಚುನಾವಣೆ ನಡೆಯುವ ಇತರ ರಾಜ್ಯಗಳಾದ ಪಂಜಾಬ್, ಗೋವಾ ಮತ್ತು ಉತ್ತರಾಖಂಡಕ್ಕೆ ಈಗಾಗಲೇ ಭೇಟಿ ನೀಡಿದೆ.