Saturday, 23rd November 2024

Controversial Book: ʻRSS ಅತಿದೊಡ್ಡ ಉಗ್ರ ಸಂಘಟನೆʼ- ಮದರಸಾದಲ್ಲಿ ವಿವಾದಾತ್ಮಕ ಪುಸ್ತಕ ಪತ್ತೆ

RSS

ಪ್ರಯಾಗರಾಜ್: ಖೋಟಾ ನೋಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ತನಿಖೆ ವೇಳೆ ಮದರಸಾವೊಂದರಲ್ಲಿ ಆರ್‌ಎಸ್‌ಎಸ್‌(RSS) ಅನ್ನು ಉಗ್ರ ಸಂಘಟನೆ(Terrorist organization) ಎಂದು ಬಿಂಬಿಸಿರುವ ಪುಸ್ತಕ(Controversial Book) ವೊಂದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮದರಸಾದಲ್ಲಿ ಮೌಲಾನಾಗಳು ವಿದ್ಯಾರ್ಥಿಗಳಲ್ಲಿ ಆರ್‌ಎಸ್‌ಎಸ್‌ ಮತ್ತು ಹಿಂದೂಗಳ ವಿರುದ್ಧ ದ್ವೇಷ ಭಾವನೆ ಬಿತ್ತುವ ಯತ್ನ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.

ಆಗಸ್ಟ್ 28 ರಂದು ಇಲ್ಲಿನ ಅತರ್ಸುಯಿಯಾ ಪ್ರದೇಶದ ಜಾಮಿಯಾ ಹಬೀಬಿಯಾ ಮಸೀದಿ ಅಜಮ್ ಮದರಸಾದಲ್ಲಿ ನಡೆದ ದಾಳಿಯಲ್ಲಿ ನಕಲಿ ನೋಟುಗಳ ಜೊತೆಗೆ, ಪೊಲೀಸರು ಹಲವು ಪುಸ್ತಕಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಯಾಗರಾಜ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಉರ್ದುವಿನಿಂದ ಹಿಂದಿಗೆ ಭಾಷಾಂತರಿಸಿರುವ ಈ ಪುಸ್ತಕವನ್ನು ಎಸ್. ಎಂ. ಮುಷರಫ್ ಅವರ  “ಆರ್‌ಎಸ್‌ಎಸ್: ದಿ ಬಿಗ್ಗೆಸ್ಟ್ ಟೆರರಿಸ್ಟ್ ಆರ್ಗನೈಸೇಶನ್ ಇನ್ ದಿ ಕಂಟ್ರಿ” ಎಂದು ಗುರುತಿಸಲಾಗಿದೆ. ಮದರಸಾದ ಧರ್ಮಗುರು ಮೊಹಮ್ಮದ್ ತಫ್ಸೀರುಲ್ ಆರಿಫೀನ್ ಈ ಪುಸ್ತಕವನ್ನು ಮಕ್ಕಳ ಮನಸ್ಸಿನಲ್ಲಿ ಆರ್‌ಎಸ್‌ಎಸ್ ವಿರೋಧಿ ಭಾವನೆಗಳನ್ನು ಮೂಡಿಸಲು ಬಳಸುತ್ತಿದ್ದಾರೆ ಎಂದು ಶಂಕಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳೀಯ ಗುಪ್ತಚರ ಘಟಕ (ಎಲ್‌ಐಯು) ಮತ್ತು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ತಂಡಗಳು ಮಂಗಳವಾರ ಮದ್ರಸಾ ಸಿಬ್ಬಂದಿಯನ್ನು ವಿಚಾರಣೆ ನಡೆಸಿವೆ. ಸ್ಥಳೀಯ ಗುಪ್ತಚರ ಘಟಕದ (LIU) ಅಧಿಕಾರಿಯೊಬ್ಬರು, “ಮಂಗಳವಾರ, ATS ಮತ್ತು LIU ತಂಡಗಳು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಪ್ರಶ್ನಿಸಲು ಜಾಮಿಯಾ ಹಬೀಬಿಯಾ ಮಸೀದಿ ಅಜಮ್ ಮದರಸಾಕ್ಕೆ ಭೇಟಿ ನೀಡಿದ್ದವು. ಆದರೆ, ವಿಚಾರಣೆಯಿಂದ ಯಾವುದೇ ಮಹತ್ವದ ಮಾಹಿತಿ ಹೊರಬಿದ್ದಿಲ್ಲ. ನಕಲಿ ನೋಟು ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ಕೋರಿ ಪೊಲೀಸರು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮದ್ರಸಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ನಕಲಿ ಕರೆನ್ಸಿ ಕಾರ್ಯಾಚರಣೆಯ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಆಗಸ್ಟ್ 28 ರಂದು, ಪ್ರಯಾಗರಾಜ್ ಪೊಲೀಸರು ನಕಲಿ ಕರೆನ್ಸಿ ಪ್ರಕರಣವನ್ನು ಬೇಧಿಸಿ ನಾಲ್ವರು ಶಂಕಿತರನ್ನು ಬಂಧಿಸಿತ್ತು. ಬಂದಿತರಿಂದ ಒಟ್ಟು 1,300 ನಕಲಿ 100 ರೂಪಾಯಿ ನೋಟುಗಳು, 234 ಮುದ್ರಿತ ಪುಟಗಳು, ಒಂದು ಲ್ಯಾಪ್‌ಟಾಪ್‌, ಒಂದು ಕಲರ್ ಪ್ರಿಂಟರ್, ಎರಡು ಬಂಡಲ್ ಬೌಂಡ್ ಪೇಪರ್ ಮತ್ತು ಒಂದು ಬಂಡಲ್ ಬಿಡಿ ಕಾಗದವನ್ನು ವಶಪಡಿಸಿಕೊಂಡರು.

ಖೋಟಾ ನೋಟ್‌ ಪ್ರಿಂಟಿಂಗ್‌ಗಾಗಿ ಪ್ರತ್ಯೇಕ ಕೋಣೆ

ಮದರಸಾದ ಮೌಲಾನಾ ಆರಿಫೀನ್ ಅವರು ನಕಲಿ ನೋಟು ತಯಾರಿಕೆಗೆಂದೇ ಮದರಸಾದಲ್ಲಿ ಪ್ರತ್ಯೇಕ ಕೊಠಡಿಯನ್ನು ಒದಗಿಸಿದ್ದ. ಈ ಕಾರ್ಯಕ್ಕೆ ಮೊಹಮ್ಮದ್ ಶಾಹಿದ್ ಎಂಬಾತನೂ ಸಹಾಯ ಮಾಡಿದ್ದ.

ಭುಕರ್ ಪ್ರಕಾರ, ಈ ಗ್ಯಾಂಗ್ ಕಳೆದ ಮೂರ್ನಾಲ್ಕು ತಿಂಗಳಿನಿಂದ ನಕಲಿ ನೋಟು ದಂಧೆಯಲ್ಲಿ ತೊಡಗಿದ್ದು, 15,000 ರೂಪಾಯಿಗಳ ಅಸಲಿ ನೋಟುಗಳಿಗೆ ಬದಲಾಗಿ Rs45,000 ಮುಖಬೆಲೆಯ ನಕಲಿ ನೋಟುಗಳನ್ನು ನೀಡುತ್ತಿದೆ.

ಬಂಧಿತ ಶಂಕಿತರ ವಿರುದ್ಧ ಪೊಲೀಸರು ಸೆಕ್ಷನ್ 178 (ನಕಲಿ ನಾಣ್ಯ, ಸರ್ಕಾರಿ ಅಂಚೆಚೀಟಿಗಳು, ಕರೆನ್ಸಿ ನೋಟುಗಳು ಅಥವಾ ಬ್ಯಾಂಕ್ ನೋಟುಗಳು), 179 (ಅಸಲಿ, ಖೋಟಾ ಅಥವಾ ನಕಲಿ ನಾಣ್ಯ, ಸರ್ಕಾರಿ ಮುದ್ರೆ, ಕರೆನ್ಸಿ ನೋಟುಗಳು ಅಥವಾ ಬ್ಯಾಂಕ್ ನೋಟುಗಳು) ಮತ್ತು 180( ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಖೋಟಾ ಅಥವಾ ನಕಲಿ ನಾಣ್ಯ, ಸರ್ಕಾರಿ ಸ್ಟಾಂಪ್, ಕರೆನ್ಸಿ-ನೋಟುಗಳು ಅಥವಾ ಬ್ಯಾಂಕ್-ನೋಟುಗಳನ್ನು ಹೊಂದಿರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ: ಬಾಂಬ್‌ ಸ್ಫೋಟದಲ್ಲಿ ಕೈ ಕಳೆದುಕೊಂಡ ಯುವಕ