Thursday, 19th September 2024

ಪ್ರಚಾರ ಬೇಕಾದರೆ ಒಳ್ಳೆಯ ಪ್ರಕರಣದಲ್ಲಿ ವಾದ ಮಾಡಿರಿ: ಸುಪ್ರೀಂ ಗರಂ

ನವದೆಹಲಿ: ಧೂಮಪಾನ ಮಾಡುವ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಸ್. ಕೆ. ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳ ಗೊಂಡ ದ್ವಿ-ಸದಸ್ಯ ಪೀಠವು ಇಬ್ಬರು ವಕೀಲರು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದೆ.

ಮನವಿಯಲ್ಲಿ ಧೂಮಪಾನ ಮಾಡುವ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸಲು ನಿರ್ದೇಶನ ನೀಡುವಂತೆ ಮತ್ತು ಚಿಲ್ಲರೆ ಸಿಗರೇಟ್ ಮಾರಾಟ ನಿಷೇಧಿಸುವಂತೆ ಕೋರಿ, ಮಾರ್ಗಸೂಚಿಗಳನ್ನು ನೀಡಬೇಕು ಎಂದು ವಕೀಲರಾದ ಶುಭಂ ಅವಸ್ತಿ ಮತ್ತು ಸಪ್ತ ಋಷಿ ಮಿಶ್ರಾ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ದ್ವಿ-ಸದಸ್ಯ ಪೀಠ ನಿಮಗೆ ಪ್ರಚಾರ ಬೇಕಾದರೆ ಒಳ್ಳೆಯ ಪ್ರಕರಣದಲ್ಲಿ ವಾದ ಮಾಡಿರಿ. ಪ್ರಚಾರ ಹಿತಾಸಕ್ತಿ ಮೊಕದ್ದಮೆ ಹೂಡಬೇಡಿ ಎಂದು ಅರ್ಜಿಯನ್ನು ವಜಾಗೊಳಿಸಿದೆ.