Saturday, 30th November 2024

Snake bite: ಇನ್ನುಮುಂದೆ ಹಾವು ಕಡಿತ ಒಂದು ಕಾಯಿಲೆ; ಕೇಂದ್ರ ಸರ್ಕಾರದ ಮಹತ್ವದ ಘೋಷಣೆ

Snake bite

ನವದೆಹಲಿ: ದೇಶದಲ್ಲಿ ಹಾವು ಕಡಿತ ಪ್ರಕರಣ (Snake bite) ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (The ministry of health and family welfare) ಹಾವು ಕಡಿತವನ್ನು ಕಾಯಿಲೆ ಎಂದು ಘೋಷಣೆ ಮಾಡಿದೆ. ಇನ್ನು ಮುಂದೆ ಎಲ್ಲ ಆರೋಗ್ಯ ಕೇಂದ್ರಗಳು ಹಾವು ಕಡಿತ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಯನ್ನು ನಮೂದಿಸಬೇಕು ಎಂದು ಆದೇಶ ಹೊರಡಿಸಿದೆ (Central Government).

ಕೇಂದ್ರ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ಎಲ್ಲ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಹಾವು ಕಡಿತ ಹಾಗೂ ಅದರಿಂದಾಗುವ ಸಾವಿನ ಬಗ್ಗೆ ಸಮಗ್ರ ಮಾಹಿತಿ ನೀಡಬೇಕೆಂದು ನಿರ್ದೇಶನ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾಸ್ತವ ಅವರು, ಹಾವು ಕಡಿತವು ಸಾರ್ವಜನಿಕ ಆರೋಗ್ಯದ ಕಾಳಜಿಯ ವಿಷಯವಾಗಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಅವು ಮರಣ, ರೋಗ ಮತ್ತು ಅಂಗವೈಕಲ್ಯಕ್ಕೆ ಕಾರಣವಾಗುತ್ತದೆ.  2030ರ ವೇಳೆಗೆ ಭಾರತದಲ್ಲಿ ಹಾವು ಕಡಿತದ ತಡೆಗಟ್ಟುವಿಕೆ ಮತ್ತು ಸೂಕ್ತ ಔಷಧ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರ (NAPSE) ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿದೆ. 2030ರ ವೇಳೆಗೆ ಹಾವು ಕಡಿತ ಸಂಬಂಧಿತ ಸಾವುಗಳನ್ನು ಅರ್ಧದಷ್ಟು ಕಡಿಮೆ ಮಾಡುವುದು ಕ್ರಿಯಾ ಯೋಜನೆಯ ಉದ್ದೇಶ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಹಾವು ಕಡಿತದ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದ್ದು, ಹಲವರು ಹಾವು ಕಡಿತಕ್ಕೊಳಗಾಗಿ ಮೃತ ಪಟ್ಟಿದ್ದಾರೆ. ಈಗಾಗಲೇ ಹಲವಾರು ರಾಜ್ಯಗಳು ಹಾವು ಕಡಿತವನ್ನು ಕಾಯಲೆ ಎಂದು ಘೋಷಿಸಿವೆ.

ಕರ್ನಾಟಕ ದೇಶದಲ್ಲಿಯೇ ಮೊದಲ ಬಾರಿಗೆ ಹಾವು ಕಡಿತವನ್ನು ಕಾಯಿಲೆ ಎಂದು ಘೋಷಿಸಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ಕರ್ನಾಟಕ ಸರ್ಕಾರ ಈ ಮಹತ್ವದ ಆದೇಶವನ್ನು ಹೊರಡಿಸಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಮತ್ತು ಮಾಹಿತಿಯ ಪ್ರಕಾರ 2023ರಲ್ಲಿ (ಜನವರಿ ಮತ್ತು ಅಕ್ಟೋಬರ್ ನಡುವೆ) ರಾಜ್ಯದಲ್ಲಿ 5,316 ಹಾವು ಕಡಿತಗಳು ದಾಖಲಾಗಿವೆ ಎಂದು ವರದಿಯಾಗಿತ್ತು. ನಂತರ ಹಾವು ಕಡಿತ ಪ್ರಕರಣವನ್ನು ಕಾಯಿಲೆ ಎಂದು ಘೋಷಿಸಲಾಯಿತು.

ಇತ್ತೀಚೆಗೆ ತಮಿಳುನಾಡು ಸರ್ಕಾರ ಕೂಡ ಇದನ್ನು ಕಾಯಿಲೆ ಎಂದು ಘೋಷಿಸಿದೆ. ಈ ವರ್ಷದ ಜೂನ್‌ವರೆಗೆ ತಮಿಳುನಾಡಿನಲ್ಲಿ 7,300 ಹಾವು ಕಡಿತ ಪ್ರಕರಣಗಳು ವರದಿಯಾಗಿದ್ದು, 13 ಜನರು ಮೃತಪಟ್ಟಿದ್ದಾರೆ. ಕಳೆದ ವರ್ಷ 19,795 ಹಾವು ಪ್ರಕರಣಗಳು ವರದಿಯಾಗಿ  43 ಜನ ಮೃತಪಟ್ಟಿದ್ದರು. ಇನ್ನು 2022ರಲ್ಲಿ 15,120 ಹಾವು ಕಡಿತ ಪ್ರಕರಣ ದಾಖಲಾದರೆ, 17 ಜನರು ಅಸುನೀಗಿದ್ದರು.

ಈ ಸುದ್ದಿಯನ್ನೂ ಓದಿ : Snake bite: ಹಾವು ಕಡಿತ ಇನ್ಮುಂದೆ ಕಾಯಿಲೆ; ತಮಿಳುನಾಡು ಸರ್ಕಾರದ ಮಹತ್ವದ ಘೋಷಣೆ