ಪುಣೆ: ಕಳೆದ ವರ್ಷ ಸ್ಪ್ಯಾನಿಷ್ ಮಹಿಳೆಯೊಬ್ಬರು ಟೂತ್ ಬ್ರಷ್ ನುಂಗಿ ಇಡೀ ವೈದ್ಯಲೋಕವೇ ಬೆರಗಾಗುವಂತೆ ಮಾಡಿದ್ದರು. ಇತ್ತೀಚೆಗೆ ಭಾರತದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಪುಣೆಯ ಮಹಿಳೆಯೊಬ್ಬರು ತಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ 20 ಸೆಂ.ಮೀ ಉದ್ದದ ಟೂತ್ ಬ್ರಷ್ ನುಂಗಿದ್ದಾರೆ. ಈ ರೀತಿಯ ಪ್ರಕರಣವು ಮಹಾರಾಷ್ಟ್ರದಲ್ಲಿ ಇದೇ ಮೊದಲನೆಯದಾಗಿದ್ದು, ವೈದ್ಯಕೀಯ ತಜ್ಞರು ಶಾಕ್ ಆಗಿದ್ದಾರಂತೆ. ಹಾಗೇ ಈ ಸುದ್ದಿ ಎಲ್ಲೆಡೆ ವೈರಲ್(Viral News) ಆಗಿದೆ.
ಮಹಿಳೆ ಬ್ರಷ್ನಿಂದ ನಾಲಿಗೆಯನ್ನು ಸ್ವಚ್ಛಮಾಡಿಕೊಳ್ಳುವಾಗ ಆಕಸ್ಮಿಕವಾಗಿ ಬ್ರಷ್ ನುಂಗಿದ್ದಾರಂತೆ. ತಕ್ಷಣ ಮಹಿಳೆಯನ್ನು ಪಿಂಪ್ರಿ-ಚಿಂಚ್ವಾಡ್ ಮುನ್ಸಿಪಲ್ ಕಾರ್ಪೊರೇಷನ್ನ ಡಿವೈ ಪಾಟೀಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಇದನ್ನು ಕಂಡು ಶಾಕ್ ಆಗಿದ್ದಾರೆ. ಟೂತ್ ಬ್ರಷ್ ನುಂಗುವುದು ಅಸಾಧಾರಣವಾದ ಘಟನೆಯಾಗಿದೆ. ಸ್ಕಿಜೋಫ್ರೇನಿಯಾ, ಬುಲಿಮಿಯಾ ಅಥವಾ ಅನೋರೆಕ್ಸಿಯಾದಿಂದ ಬಳಲುತ್ತಿರುವವರು ಸೇರಿದಂತೆ ಕೆಲವು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾದ ರೋಗಿಗಳು ಈ ರೀತಿ ಮಾಡುತ್ತಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಜನರು ನಾಣ್ಯಗಳಂತಹ ಸಣ್ಣ ವಸ್ತುಗಳನ್ನು ನುಂಗುವ ಪ್ರಕರಣಗಳು ಸರ್ವೇಸಾಮಾನ್ಯವಾಗಿದೆ. ಆದರೆ ಅಷ್ಟು ದೊಡ್ಡ ಟೂತ್ ಬ್ರಷ್ ನುಂಗುವುದು ಅಸಾಧ್ಯವೆಂದಿದ್ದಾರೆ.
ಇದೇ ರೀತಿಯ ಪ್ರಕರಣ 2013ರಲ್ಲಿ ನಡೆದಿತ್ತು. 35 ವರ್ಷದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಟೂತ್ ಬ್ರಷ್ ನುಂಗಿದ್ದ ಕಾರಣ ಆತನನ್ನು ಹರಿಯಾಣದ ಎಂಎಂ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ (ಎಂಎಂಐಎಂಎಸ್ಆರ್) ಗೆ ಕರೆದೊಯ್ಯಲಾಗಿತ್ತು. ಆಘಾತಕಾರಿ ಸಂಗತಿಯೆಂದರೆ, ಟೂತ್ ಬ್ರಷ್ ನುಂಗಿದ ಎರಡು ತಿಂಗಳ ನಂತರ ಆ ವ್ಯಕ್ತಿ ವೈದ್ಯರನ್ನು ಸಂಪರ್ಕಿಸಿದ್ದಾನೆ. ಅಲ್ಲಿ ಅವನಿಗೆ ಎಕ್ಸ್-ರೇ ಮಾಡಿದಾಗ ಅವನ ಹೊಟ್ಟೆಯಲ್ಲಿ ಟೂತ್ ಬ್ರಷ್ ಇರುವುದು ಕಂಡುಬಂದಿದೆ.
ಇದನ್ನೂ ಓದಿ:ಮಗುವಿನ ಜತೆ ನಡೆದುಕೊಂಡು ಹೋಗ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ; ಕೀಚಕನ ನೀಚ ಕೃತ್ಯ ಕ್ಯಾಮರಾದಲ್ಲಿ ಸೆರೆ
ಈ ನಡುವೆ ಮುಂಬೈನ ಸೇಠ್ ಜಿ.ಎಸ್ ವೈದ್ಯಕೀಯ ಕಾಲೇಜು ಮತ್ತು ಕೆಇಎಂ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ವೈದ್ಯರು 2019ರಲ್ಲಿ ಇಂತಹ ಪ್ರಕರಣಗಳು ನಡೆದಿರುವುದಾಗಿ ವರದಿ ಮಾಡಿದ್ದಾರೆ. ಅಲ್ಲಿನ ವೈದ್ಯರ ಬಳಿಗೆ ಆಕಸ್ಮಿಕವಾಗಿ ಟೂತ್ ಬ್ರಷ್ ನುಂಗಿದ ಮೂರು ಪ್ರಕರಣಗಳು ಬಂದಿದ್ದವು, ಈ ಪ್ರಕರಣಗಳು ಅಕ್ಟೋಬರ್ 2013-ಮೇ 2014 ರ ಅವಧಿಯಲ್ಲಿ ನಡೆದಿತ್ತು, 30 ವರ್ಷ ವಯಸ್ಸಿನ ಮೂವರು ಪುರುಷರು ಬ್ರಷ್ನ ಹಿಂಭಾಗದಿಂದ ನಾಲಿಗೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಟೂತ್ ಬ್ರಷ್ ನುಂಗಿದ್ದಾರೆ. ಅವರನ್ನು ತಕ್ಷಣ ಎಮರ್ಜೆನ್ಸಿ ವಾರ್ಡ್ಗೆ ದಾಖಲಿಸಲಾಗಿತ್ತು ಎಂಬುದಾಗಿ ತಿಳಿಸಿದ್ದಾರೆ.