Sunday, 1st December 2024

World AIDS Day: ಎಚ್‌‌ಐವಿ ಪ್ರಕರಣಗಳಲ್ಲಿ ಶೇ.35ರಷ್ಟು ಇಳಿಕೆ; ಆದರೂ ಏಡ್ಸ್ ಬಗ್ಗೆ ಇರಲಿ ಎಚ್ಚರ

World AIDS Day

ಹೊಸ ಶತಮಾನದ 24ನೇ ವರ್ಷ ಕಳೆಯುವಷ್ಟರಲ್ಲಿ ವಿಶ್ವದಲ್ಲಿ ಸುಮಾರು 5 ಕೋಟಿಗೂ ಹೆಚ್ಚಿನ ಎಚ್‌ಐವಿ (World AIDS Day) ಸೋಂಕಿಗೆ ಒಳಗಾಗಿರುತ್ತಾರೆ. ಇವರಲ್ಲಿ 17 ಲಕ್ಷ ಮಂದಿ ಹದಿಹರೆಯ ದಾಟದವರು. ಮಾತ್ರವಲ್ಲ ಈ ಎಲ್ಲರ ಪೈಕಿ 7ರಲ್ಲಿ ಒಬ್ಬರಿಗೆ ತಮಗೆ ಈ ಸೋಂಕು ಅಂಟಿದೆ ಎಂಬುದೇ ತಿಳಿದಿಲ್ಲದಿರುವುದು ಸಮಸ್ಯೆಯ ತೊಡಕನ್ನು ಹೆಚ್ಚಿಸಿದೆ.

ಇವರಲ್ಲಿ ಶೇ. 25ಕ್ಕಿಂತ ಹೆಚ್ಚಿನ ಮಂದಿಗೆ ಜೀವನಕ್ಕೆ ಅಗತ್ಯವಾಗಿ ದೊರೆಯಬೇಕಾದ ಚಿಕಿತ್ಸೆ ಲಭ್ಯವಿಲ್ಲ. ಈ ಎಲ್ಲವುಗಳ ಹಿನ್ನೆಲೆಯಲ್ಲಿ, ಡಿಸೆಂಬರ್‌ ತಿಂಗಳ ಮೊದಲ ದಿನ ಅಂದರೆ ಡಿಸೆಂಬರ್‌ 1ರಂದು ವಿಶ್ವದೆಲ್ಲೆಡೆ ಆಚರಿಸಲಾಗುವ ಏಡ್ಸ್‌ ಜಾಗೃತಿ ದಿನ ಮಹತ್ವ ಪಡೆದಿದೆ.

ಎಲ್ಲರಿಗೂ ಏಡ್ಸ್‌ ರೋಗ ಮತ್ತು ಎಚ್‌ಐವಿ ಸೋಂಕಿನ ಬಗ್ಗೆ ಗೊತ್ತಿದೆ. ಆದರೂ ಇದರ ಕುರಿತು ಅರಿವಿನ ದಿನ ಏಕೆ ಬೇಕು?

ಅರಿವಿನ ದಿನವೇಕೆ?

ಹಿಂದೆ ಮಾತ್ರವಲ್ಲ ಇಂದಿಗೂ ಎಚ್‌ಐವಿ ಸೋಂಕನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಈ ಕುರಿತು ನಡೆಯುತ್ತಿರುವ ಅಗಣಿತ ಸಂಶೋಧನೆಗಳಿಂದಾಗಿ ಇದನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಆರೋಗ್ಯಕರ ಬದುಕನ್ನು ನಡೆಸಲು ಸಾಧ್ಯವಿದೆ. ಹಾಗಾಗಿ ಏಡ್ಸ್‌ ಬರುತ್ತಿದ್ದಂತೆ ಸತ್ತೇ ಹೋಗುತ್ತೇವೆಂಬ ಭೀತಿಯನ್ನು ಬಿಟ್ಟು ಸರಿಯಾದ ಚಿಕಿತ್ಸೆ ಮತ್ತು ನಿರ್ವಹಣೆಯಿಂದ ಹೆಚ್ಚಿನ ಕಾಲ ಬದುಕಲು ಸಾಧ್ಯವಿದೆ. ಆದರೆ ಈ ಎಲ್ಲ ವಿಷಯಗಳ ಕುರಿತಾಗಿ ಸಾಮಾನ್ಯರಲ್ಲಿ ಅರಿವಿನ ಕೊರತೆಯಿದೆ.

ಕಳೆದ 2023ರ ಸಾಲಿನಲ್ಲಿ ಭಾರತದಲ್ಲಿ 66 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾದರೆ, ಜಾಗತಿಕವಾಗಿ 10 ಲಕ್ಷಕ್ಕೂ ಹೆಚ್ಚು ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ 2010ಕ್ಕೆ ಹೋಲಿಸಿದರೆ ಇಂದು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 35ರಷ್ಟು ಇಳಿಕೆ ದಾಖಲಾಗಿದೆ.

2030ರ ವೇಳೆಗೆ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಶೇ. 90ರಷ್ಟು ಇಳಿಕೆ ಮಾಡುವ ಜಾಗತಿಕ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಇದು ಸರಿಯಾಗ ಜಾಗೃತಿಯಿಂದ ಮಾತ್ರವೇ ಸಾಧ್ಯ. ಇದೊಂದು ಮಾನವ ಹಕ್ಕುಗಳ ಸಮಸ್ಯೆಯೂ ಹೌದು ಎನ್ನುವ ದೃಷ್ಟಿಯಿಂದ ಈ ಬಾರಿ “ಹಕ್ಕಿನ ಮಾರ್ಗವನ್ನು ಆಯ್ದುಕೊಳ್ಳಿ: ನನ್ನ ಆರೋಗ್ಯ, ನನ್ನ ಹಕ್ಕು!” ಎನ್ನುವ ಧ್ಯೇಯದೊಂದಿಗೆ ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ.

ಎಚ್‌ಐವಿ ಸೋಂಕು ತಗಲದಂತೆ ಎಚ್ಚರಿಕೆ ತೆಗೆದುಕೊಳ್ಳುವುದು ಎಲ್ಲಕ್ಕಿಂತ ಮಹತ್ವದ್ದು. ಮಾತ್ರವಲ್ಲ ರೋಗ ತಡೆಯ ಜೊತೆಗೆ ಚಿಕಿತ್ಸೆ ಮತ್ತು ನಿರ್ವಹಣೆಗೂ ಹೆಚ್ಚಿನ ಒತ್ತು ನೀಡುತ್ತಿರುವುದು, ಒಟ್ಟಾರೆಯಾಗಿ ಅರಿವಿನ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಆದರೆ ಕೆಳ ಮತ್ತು ಮಧ್ಯಮ ಆದಾಯವುಳ್ಳ ದೇಶಗಳಲ್ಲಿ ಮತ್ತು ವೈದ್ಯಕೀಯ ಸೌಲಭ್ಯ ದುರ್ಲಭವಾಗಿರುವ ಸ್ಥಳಗಳಲ್ಲಿ ಇವು ಹರಡುತ್ತಿರುವ ಪ್ರಮಾಣ ಹೆಚ್ಚಿರುವುದು ಸಮಸ್ಯೆಯನ್ನು ಜಟಿಲವಾಗಿಸಿದೆ.

World AIDS Day

ರೆಡ್‌ ರಿಬ್ಬನ್‌

ಏಡ್ಸ್‌ ಜೊತೆಗೆ ಬದುಕುತ್ತಿರುವವರಿಗೆ ಬೆಂಬಲ ನೀಡಲು ಮತ್ತು ಈ ರೋಗದಿಂದ ಮೃತಪಟ್ಟವರ ನೆನಪಿಗಾಗಿ ಕೆಂಪು ರಿಬ್ಬನ್‌ ಬಳಸಲಾಗುತ್ತದೆ. ಇದೊಂದು ಅಂತಾರಾಷ್ಟ್ರೀಯವಾಗಿ ಬಳಸಲಾಗುತ್ತಿರುವ ಚಿಹ್ನೆ. ಸ್ತನ ಕ್ಯಾನ್ಸರ್‌ ಜಾಗೃತಿಗಾಗಿ ಗುಲಾಬಿ ರಿಬ್ಬನ್‌ ಬಳಕೆಯಾಗುತ್ತಿರುವಂತೆಯೇ ಇದೂ ಸಹ ಬಳಕೆಯಲ್ಲಿದೆ.

ಅಮೆರಿಕದಲ್ಲಿ ಕೆಲವು ಕಲಾವಿದರು 1988ರಲ್ಲಿ ವಿಶುವಲ್‌ ಏಡ್ಸ್‌ (Visual AIDS) ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಕಲಾವಿದ ವರ್ಗವನ್ನು ಏಡ್ಸ್‌ ಬಾಧಿಸುತ್ತಿರುವ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಅವರ ಉದ್ದೇಶವಾಗಿತ್ತು.

ಇದೇ ಮುಂದುವರಿದು ಕಲಾವಿದರು ಮಾತ್ರವಲ್ಲದೆ ಏಡ್ಸ್‌ ರೋಗಿಗಳು ಮತ್ತು ಅವರ ಶುಶ್ರೂಷಕರನ್ನು ಬೆಂಬಲಿಸುವ ಬಗ್ಗೆ ಒಂದು ಚಿಹ್ನೆಯನ್ನು ರೂಪಿಸಬೇಕೆಂದು 1991ರಲ್ಲಿ ಈ ಸಂಸ್ಥೆಯ ಕಲಾವಿದರು ಉದ್ದೇಶಿಸಿದರು. ಕೊಲ್ಲಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಯೋಧರ ಬೆಂಬಲವಾಗಿ ರೂಪಿಸಿದ್ದ ಹಳದಿ ರಿಬ್ಬನ್‌ ಮಾದರಿಯಲ್ಲೇ ಇದನ್ನೂ ರೂಪಿಸಲು ನಿರ್ಧರಿಸಲಾಯಿತು.

Heart attack: ಮಕ್ಕಳಲ್ಲಿ ಹೆಚ್ಚುತ್ತಿದೆ ಹೃದಯಾಘಾತ; 4ನೇ ತರಗತಿ ವಿದ್ಯಾರ್ಥಿನಿ ಸಾವು!

ರಕ್ತ, ಪ್ರೀತಿ, ಪ್ರೇಮ ಎಂಬಂಥ ವಿಷಯಗಳನ್ನು ಮುಖ್ಯವಾಗಿ ಇರಿಸಿಕೊಂಡು ಈ ರಿಬ್ಬನ್‌ ಗೆ ಕೆಂಪು ಬಣ್ಣವನ್ನು ನೀಡಲಾಯಿತು. ಇದೇ ಹಿನ್ನೆಲೆಯಲ್ಲಿ ಇಡೀ ಯೋಜನೆಗೆ ರೆಡ್‌ ರಿಬ್ಬನ್‌ ಪ್ರೊಜೆಕ್ಟ್‌ ಎಂದು ಹೆಸರಿಸಲಾಯಿತು]. ಇದೀಗ ಎಲ್ಲೆಡೆ ಏಡ್ಸ್‌ ಕುರಿತ ಅರಿವು ಮತ್ತು ಜಾಗೃತಿ ಕೆಲಸಗಳಿಗೆ ಕೆಂಪು ರಿಬ್ಬನ್‌ ವ್ಯಾಪಕವಾಗಿ ಬಳಕೆಯಾಗುತ್ತಿದೆ.