Sunday, 8th September 2024

ಜೀವನದಲ್ಲಿ ವಚನಗಳ ಅಳವಡಿಕೆ ಮುಖ್ಯ : ಬಲವಂತರಾವ್ ಪಾಟೀಲ್

ತುಮಕೂರು: ವಚನಗಳನ್ನು ಓದುವುದು, ಹಾಡುವುದಷ್ಟೇ ಅಳವಡಿಕೆಯೂ ಮುಖ್ಯ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಹೇಳಿದರು.
ತಾಲ್ಲೂಕಿನ ಹರಳೂರಿನ ಶ್ರೀ  ಶಿವಕುಮಾರ ಸ್ವಾಮೀಜಿ ಬಯಲು ಮಂಟಪದಲ್ಲಿ ವಚನ ಜ್ಯೋತಿ ಬಳಗ ಆಯೋಜಿಸಿದ್ದ ವಚನ ಮುಂಗಾರು ಉತ್ಸವವನ್ನು ಉದ್ಘಾಟಿಸಿ ಮಾತನಾ ಡಿದ ಅವರು, ಅನುಭವದ ನುಡಿಮುತ್ತುಗಳಾದ ವಚನಗಳ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸುಂದರವಾದ ಬದುಕು ನಮ್ಮದಾಗುತ್ತದೆ ಎಂದು ವಿಶ್ಲೇಷಿಸಿದರು.
ಬಸವಣ್ಣನವರ ಆಶಯದಂತೆ ಬದುಕಿ ಕೋಟ್ಯಾಂತರ ವಿದ್ಯಾರ್ಥಿಗಳ ಬದುಕನ್ನು ಬಂಗಾರಗೊಳಿಸಿದ ನಡೆದಾಡಿದ ದೇವರು ಶ್ರೀ ಶಿವಕುಮಾರಸ್ವಾಮಿಗಳನ್ನು ಸ್ಮರಿಸಿದ ಪಾಟೀಲರು, 1980ರಲ್ಲಿ ಹರಳೂರಿನಲ್ಲಿ ಆರಂಭಿಸಿದ ಶಾಲೆ ನೂರಕ್ಕೆ ನೂರು ಫಲಿತಾಂಶ ಪಡೆದಿರುವುದು ಪ್ರಶಂಸನೀಯ.  ಯಶಸ್ವಿ ವಚನ ಮುಂಗಾರಿಗಾಗಿ ವಚನಜ್ಯೋತಿ ಬಳಗ, ಜಯದೇವ ಬಳಗ ಮತ್ತು ಜ್ಞಾನ ಯೋಗ‌ ಲಯನ್ಸ್ ಕ್ಲಬ್ ಹಾಗೂ ತುಮಕೂರು ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆಯನ್ನು ಅಭಿನಂದಿಸಿದ ಪಾಟೀಲರು,  ವಿದ್ಯಾರ್ಥಿ ಗಳಿಗೆ 42 ಸಾವಿರ ನಗದು ಪುರಸ್ಕಾರ, ಒಳ್ಳೆಯ ಸ್ಕೂಲ್ ಬ್ಯಾಗ್, ಬಹುಪಯೋಗಿ ಕಿಟ್, ಪಂಚೆ ವಸ್ತ್ರಗಳನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಬಣ್ಣಿಸಿದರು.
ಆಶಯ ನುಡಿಗಳನ್ನಾಡಿದ ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ, ಗ್ರಾಮಾಂತರ ಪ್ರದೇಶದ ಮಕ್ಕಳು ವಿದ್ಯಾವಂತರಾಗ ಬೇಕೆನ್ನುವುದು ಪರಮಪೂಜ್ಯ ಸಿದ್ದಗಂಗಾ ಶಿವಯೋಗಿಗಳ ಬಯಕೆಯಾಗಿದ್ದು, ಹರಳೂರು ಶಾಲೆಯ ಶಿಕ್ಷಕರು, ಹಿರಿಯರಾದ ವಾಸಾ ಸೈಂಟಿಫಿಕ್ ಕಂಪನಿಯ ಬಿ.ಪಿ. ಪ್ರಕಾಶಣ್ಣನವರ ಮಾರ್ಗದರ್ಶನದಲ್ಲಿ ಮುಖ್ಯ ಶಿಕ್ಷಕರಾದ ಗುರುಮೂರ್ತಿಯವರ ನೇತೃತ್ವದಲ್ಲಿ ಶ್ರಮವಹಿಸುತ್ತಿದ್ದು, ಇಲ್ಲಿಯ ಮಕ್ಕಳು ಕೇವಲ ಬುದ್ದಿವಂತರಲ್ಲದೆ, ಗುಣವಂತರೂ ಆಗಿದ್ದಾರೆ ಎಂದು ಪ್ರಶಂಸಿ ದರು.
ಬೆಂಗಳೂರಿನ ಜ್ಞಾನಯೋಗ ಲಯನ್ಸ್ ಕ್ಲಬ್ಬಿನ ಬಂಧುಗಳು ವಿದ್ಯಾರ್ಥಿಗಳಿಗೆ ಉದಾರವಾಗಿ ನೆರವಾಗಿರುವುದಲ್ಲದೆ, ಸ್ಮಾರ್ಟ್ ತರಗತಿಗಾಗಿ ಟಿವಿ ಕೊಡಿಸುವುದಾಗಿ ಆಶ್ವಾಸನೆ ನೀಡಿರುವುದಕ್ಕಾಗಿ ತಮ್ಮ ಕೃತಜ್ಞತೆ ಅರ್ಪಿಸಿದರು.  ತಮ್ಮ ತಂದೆ ಡಿ.ಆರ್. ಜಯದೇವರ ನೆನಪಿನಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ಎಲ್ಲ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರದಂತೆ ಮೂವತ್ತೆರಡು ಸಾವಿರ ನಗದು ನೀಡಿದ ಯುವೋತ್ಸಾಹಿ ಸುಭಾಷ್ ಚಂದ್ರರನ್ನು ಅಭಿನಂದಿಸಿದ ಪಿನಾಕಪಾಣಿ, ಎಲ್ಲ ಚಟುವಟಿಕೆಗಳನ್ನು ಬೆಂಬಲಿಸುತ್ತಿರುವ ಉದ್ಯಮಿ ಪ್ರಕಾಶಣ್ಣರಿಗೆ ಕೃತಜ್ಞತೆ ಸಲ್ಲಿಸಿದರು.
ಸ್ಕೂಲ್ ಬ್ಯಾಗ್ ವಿತರಿಸಿ ಮಾತನಾಡಿದ ಜ್ಞಾನ ಯೋಗ ಲಯನ್ಸ್ ಕ್ಲಬ್ಬಿನ ಅಧ್ಯಕ್ಷೆ ಬಿ. ಚಂದ್ರಿಕ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಸ್ತು ಬಹಳ ಮುಖ್ಯವಾಗಿದ್ದು, ಬಾಲ್ಯದಲ್ಲಿಯೇ ಶಿಸ್ತನ್ನು ಪರಿಪಾಲಿಸಿದರೆ ಉತ್ತಮ ಪ್ರಜೆಗಳಾಗಬಹುದು ಎಂದು‌ ಹೇಳಿದರು.  ಜ್ಞಾನಯೋಗ ಲಯನ್ಸ್ ಕ್ಲಬ್ ಹರಳೂರು ಶಾಲೆಯ ಮಕ್ಕಳ ಜ್ಞಾನಾರ್ಚನೆಗೆ ಸಕಲ ನೆರವು ನೀಡುವುದಾಗಿ ಘೋಷಿಸಿದರು.
ವಾಸಾ ಸೈಂಟಿಫಿಕ್ ಸಂಸ್ಥೆಯ ಬಿ.ಪಿ. ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ವಚನಜ್ಯೋತಿ ‌ಬಳಗದ ಕಾರ್ಯಾಧ್ಯಕ್ಷ ಗುರುಪ್ರಸಾದ ಕುಚ್ಚಂಗಿ, ಪ್ರಧಾನ ಕಾರ್ಯದರ್ಶಿ ಪ್ರಭು ಇಸುವನಹಳ್ಳಿ, ಸಿಇಓ ರಾಜಾಗುರುಪ್ರಸಾದ್, ತುಮಕೂರು ಘಟಕದ ಅಧ್ಯಕ್ಷ ನಟರಾಜ್ ಇಸುವನಹಳ್ಳಿ, ಮಹಿಳಾ ಪದಾಧಿಕಾರಿಗಳಾದ ಗಾಯಿತ್ರಿ ಸದಾಶಿವಪ್ಪ, ಶಶಿ ವಿಶ್ವನಾಥ್, ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿ ಮಹೇಶ್ ಮಾದಯ್ಯ, ಜಯದೇವ ಬಳಗದ ಸು‌ಭಾಷಚಂದ್ರ, ಹರಳೂರು ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ಶಿವಪ್ರಸಾದ್, ಲಯನ್ಸ್ ಕ್ಲಬ್  ಪದಾಧಿಕಾರಿಗಳಾದ ಗಾನಾ ಮಹೇಶ್, ತ್ರಿವೇಣಿ ಕುಮಾರ್, ಮುಖ್ಯ ಶಿಕ್ಷಕ ಗುರುಮೂರ್ತಿ, ಸಮಾಜಸೇವಕರಾದ ಪ್ರಭು, ಅಮರಜ್ಯೋತಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!