Wednesday, 11th December 2024

ಬಾಕಿ ಸಾಲಕ್ಕೆ ಫಲಾನುಭವಿಗಳ ಬ್ಯಾಂಕ್ ಖಾತೆಗಳ ಹಣ ಹೊಂದಾಣಿಕೆ: ರೈತರ ಪ್ರತಿಭಟನೆ

ಮಂಡ್ಯ: ಸರ್ಕಾರದ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಬಾಕಿ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಖಾಸಗಿ ಬ್ಯಾಂಕ್ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಆಶ್ರಯದಲ್ಲಿ ನಗರದ ನೂರಡಿ ರಸ್ತೆಯಲ್ಲಿರುವ ಖಾಸಗಿ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿ ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಬ್ಯಾಂಕ್ ಶಾಖೆಗಳಲ್ಲಿ ರೈತರು ಪಡೆದಿರುವ ಸಾಲಗಳಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕಿಸಾನ್ ಸಮ್ಮನ್, ಹಾಲಿನ ಪ್ರೋತ್ಸಾಹಧನ, ವಿಧವಾ ವೇತನ, ವೃದ್ದಾಪ್ಯವೇತನ, ಅಂಗವಿಕಲರ ವೇತನ, ನರೇಗಾ ಕೂಲಿ, ಅನ್ನಭಾಗ್ಯ, ಸಾಮಾಜಿಕ ಭದ್ರತಾ ಯೋಜನೆ ಮೊಬಲಗನ್ನು ಬ್ಯಾಂಕ್ ಅಧಿ ಕಾರಿಗಳು ಬಾಕಿ ಇರುವ ಸಾಲಗಳಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ಹಣವನ್ನು ಫಲಾನುಭವಿಗಳ ಖಾತೆಗೆ ಮರು ಜಮಾಪಡಿಸಬೇಕು. ಫಲಾನು ಭವಿಗಳ ಒಪ್ಪಿಗೆ ಇಲ್ಲದೆ ಸಾಲಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಎಚ್ಚರಿಸಿದರು.

ಅಡಮಾನ ಇರಿಸಿರುವ ಚಿನ್ನಾಭರಣ ಬಿಡಿಸಿಕೊಳ್ಳಲು ಸಾಲಗಾರರು ಹೋದಾಗ ಹಣ ಪಾವತಿಸಿದ ನಂತರ ಸಾಲ ಬಾಕಿ ಇರುವುದರಿಂದ ಸಾಲ ಮರು ಪಾವತಿಸಿದ ಮೇಲೆ ಆಭರಣ ಕೊಡುವುದಾಗಿ ಅಧಿಕಾರಿಗಳ ಧೋರಣೆ ಖಂಡನೀಯ. ಒಂದು ಸಾಲಕ್ಕೂ, ಮತ್ತೊಂದು ಸಾಲಕ್ಕೂ ಜೋಡಣೆ ಮಾಡದೆ ಸಾಲ ಮರುಪಾವತಿಸಿದವರಿಗೆ ಆಭರಣಗಳನ್ನು ನೀಡುವಂತೆ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿ ದರು.

ಬಲವಂತದ ಸಾಲ ವಸೂಲಿ, ಹರಾಜು ಪ್ರಕ್ರಿಯೆ ಬ್ಯಾಂಕ್ ಶಾಖೆಗಳಲ್ಲಿ ಕಂಡುಬಂದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ತಗ್ಗಹಳ್ಳಿ ಪ್ರಸನ್ನ, ಲಿಂಗಪ್ಪಾಜಿ, ಟಿ.ಡಿ.ರಮೇಶ್, ಚಂದ್ರಶೇಖರ್, ಲತಾ ಶಂಕರ್, ವಿಜಯಕುಮಾರ್, ರವಿಕುಮಾರ್, ಬೊಮ್ಮೇಗೌಡ, ರಾಜೇಗೌಡ ವಂಸತ, ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.