Saturday, 27th July 2024

ನಾಳೆಯಿಂದ ಪದವಿ, ಸ್ನಾತಕೋತ್ತರ ತರಗತಿಗಳು ಆರಂಭ

ಬೆಂಗಳೂರು: ಎಲ್ಲ ಪದವಿ, ಸ್ನಾತಕೋತ್ತರ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಭೌತಿಕ ತರಗತಿಗಳು ನಾಳೆಯಿಂದ ಆರಂಭವಾಗಲಿವೆ.

ಉನ್ನತ ಶಿಕ್ಷಣ ಇಲಾಖೆ ಕಳೆದ 10 ತಿಂಗಳಿನಿಂದ ಸ್ಥಗಿತಗೊಂಡಿದ್ದ ಪದವಿ ಮತ್ತು ಸ್ನಾತಕೋತ್ತರ ತರಗತಿಗಳ ಪ್ರಾರಂಭಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ನೀಡಿದೆ. ಮಾರ್ಗಸೂಚಿಯಲ್ಲಿರುವ ಅಂಶ ಗಳನ್ನು ಶಿಕ್ಷಣ ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ಪಾಲಿಸಬೇಕು.

ನಾಳೆಯಿಂದ ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜಿನ ತರಗತಿಗಳಿಗೆ ನೇರವಾಗಿ ಹಾಜರಾಗಬಹುದು, ಅದೇ ರೀತಿ ಆನ್‍ಲೈನ್ ತರಗತಿಗೂ ಹಾಜರಾಗಬಹುದು. ಆಯ್ಕೆ ಮಾಡಿಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗಿದೆ. ಆದರೆ, ಎರಡರಲ್ಲಿ ಒಂದಕ್ಕೆ ಹಾಜರಾತಿ ಕಡ್ಡಾಯವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವತ್ಥ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.

ಆಫ್‍ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ನಿಗದಿತ ನಮೂನೆಯಲ್ಲಿ ಕಡ್ಡಾಯವಾಗಿ ಒಪ್ಪಿಗೆ ಪತ್ರ ತರಬೇಕು. ಮಾರ್ಗಸೂಚಿಯಂತೆ ಆಫ್‍ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯ ವಿರುವ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಕಲ್ಪಿಸಬೇಕು. ಆರೋಗ್ಯ ಇಲಾಖೆ ಹೊರಡಿ ಸಿರುವ ನಿಯಮಗಳನ್ನು ತಪ್ಪದೆ ಪಾಲಿಸಬೇಕು. ದೈಹಿಕ ಅಂತರ ಕಡ್ಡಾಯ.

ನೇರ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಗೆ ಹಾಜರಾಗಬಹುದು. ಇಂಥ ವಿದ್ಯಾರ್ಥಿ ಗಳಿಗೆ ಪಠ್ಯದ ಬಗ್ಗೆ ಇರುವ ಅನುಮಾನ, ಗೊಂದಲಗಳನ್ನು ನಿವಾರಿಸಲು ಪ್ರತಿದಿನ ಭೌತಿಕ ಸಂಪರ್ಕ ತರಗತಿಗಳನ್ನು ನಡೆಸ ಬಹುದು.

ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಅಧ್ಯಯನ ಸಾಮಗ್ರಿಯನ್ನು ವಾಟ್ಸಾಪ್, ಇ-ಮೇಲ್ ಅಥವಾ ಟೆಲಿಗ್ರಾಂ ಮೂಲಕ ಕಳುಹಿಸುವುದು ಕಡ್ಡಾಯ. ತರಗತಿಗಳ ಆರಂಭಕ್ಕೂ ಮುನ್ನ ಕಾಲೇಜಿನ ಕಟ್ಟಡ, ಮುಖ್ಯದ್ವಾರ, ಗ್ರಂಥಾಲಯ, ಶೌಚಾಲಯ, ಕೊಠಡಿ, ಪೀಠೋಪಕರಣ ಹಾಗೂ ಆಧ್ಯಯನ ಪುಸ್ತಕಗಳನ್ನು ಸ್ಯಾನಿಟೈಸ್ ಮಾಡಬೇಕು. ಜತೆಗೆ ದ್ವಾರದಲ್ಲಿಯೇ ಎಲ್ಲರ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು.

ವಿದ್ಯಾರ್ಥಿಗಳ ಹಾಜರಾತಿ ಪ್ರತಿ ಕೊಠಡಿಗೆ ಶೇ.50 ಮೀರುವಂತಿಲ್ಲ. ಒಂದು ಹಾಜರಾತಿ ಹೆಚ್ಚಿದರೆ ಹೆಚ್ಚುವರಿ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಬೇಕು.

Leave a Reply

Your email address will not be published. Required fields are marked *

error: Content is protected !!