Saturday, 30th November 2024

ಟರ್ಮಿನಲ್ 2ನಿಂದ ಫೆ.15ರಿಂದ ಕಾರ್ಯಾಚರಣೆ ಆರಂಭ

ಏರ್‌ಏಷ್ಯಾ ಇಂಡಿಯಾ: ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

ಬೆಂಗಳೂರು: ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್‌) ಹೊಸದಾಗಿ ಪ್ರಾರಂಭಿಸಲಾಗಿರುವ ಟರ್ಮಿನಲ್ 2ನಿಂದ ಏರ್‌ಏಷ್ಯಾ ಇಂದಿನಿಂದ ತನ್ನ ಕಾರ್ಯಾಚರಣೆ ಪ್ರಾರಂಭಿಸಿತು. ಏರ್‌ಏಷ್ಯಾ ವಿಮಾನಯಾನ ಸಂಸ್ಥೆಗೆ ಬೆಂಗಳೂರು ಅತಿದೊಡ್ಡ ಕೇಂದ್ರವಾಗಿದೆ, ದೆಹಲಿ, ಗೋವಾ, ಮುಂಬೈ, ಹೈದರಾಬಾದ್, ಕೋಲ್ಕತ್ತಾ, ಭುವನೇಶ್ವರ, ಗುವಾಹಟಿ, ಪುಣೆ, ಬಾಗ್ಡೋಗ್ರಾ, ಲಖನೌ, ರಾಂಚಿ, ಕೊಚ್ಚಿ, ಚೆನ್ನೈ, ವಿಶಾಖಪಟ್ಟಣಂ, ಜೈಪುರ ಮತ್ತು ಸೂರತ್‌ ನಗರಗಳಿಗೆ ಪ್ರತಿ ದಿನ 43 ನಿಗದಿತ ಹಾರಾಟ ಸೇವೆಗಳನ್ನು ಸಂಪರ್ಕಿಸುತ್ತದೆ. ವಿಮಾನಯಾನ ಸಂಸ್ಥೆಯು ಬೆಂಗಳೂರಿನಿಂದ ಇಂಫಾಲ್ ಮತ್ತು ಶ್ರೀನಗರಕ್ಕೆ ಸಂಪರ್ಕ ವಿಮಾನ ಸೇವೆಗಳನ್ನು ಸಹ ನಿರ್ವಹಿಸುತ್ತಿದೆ.

ಏರ್‌ಏಷ್ಯಾ ಇಂಡಿಯಾ ಮತ್ತು ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ನ (ಬಿಐಎಎಲ್‌) ಅಧಿಕಾರಿಗಳು ಉದ್ಘಾಟನಾ ಸಮಾರಂಭವನ್ನು ಸಂಭ್ರಮದಿಂದ ನಡೆಸಿಕೊಟ್ಟರು. ಏರ್‌ಏಷ್ಯಾ ಇಂಡಿಯಾದ ಚೆಕ್-ಇನ್ ಕೌಂಟರ್‌ಗಳಲ್ಲಿ ದೀಪ ಬೆಳಗಿಸಿ, ರಿಬ್ಬನ್ ಕತ್ತರಿಸಲಾಯಿತು. ಏರ್‌ಏಷ್ಯಾ ಇಂಡಿಯಾದ ಪ್ರಮುಖ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ವಿಮಾನಯಾನ ಸಂಸ್ಥೆಗೆ ಹೊಸ ಟರ್ಮಿನಲ್‌ 2 ಹೊಸ ಮನೆಯಾಗುತ್ತಿರುವ ಸಂಭ್ರಮಾಚರಣೆಯಲ್ಲಿ ‘I5 in T2’ ಬರೆದ ದೊಡ್ಡ ಗಾತ್ರದ ಕೇಕ್ ಕತ್ತರಿಸಿ ಟರ್ಮಿನಲ್‌ 2ರಿಂದ ವಿಮಾನ ಏರಿದ ಅತಿಥಿಗಳಿಗೆ ವಿತರಿಸಲಾಯಿತು.

ಏರ್‌ಏಷ್ಯಾ ಇಂಡಿಯಾದ ಉದ್ಯೋಗಿಗಳು ‘I5 in T2’ ಸಂದೇಶ ಮುದ್ರಿತ ಟೀ-ಶರ್ಟ್‌ಗಳನ್ನು ಧರಿಸಿ ಮತ್ತು ಹೊಸ ಟರ್ಮಿನಲ್‌ನ ನಾಲ್ಕು ಆಧಾರ ಸ್ತಂಭಗಳಾದ ಉದ್ಯಾನದಲ್ಲಿ ಟರ್ಮಿನಲ್‌, ಸುಸ್ಥಿರತೆ, ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ ಪ್ರದರ್ಶಿಸುವ ಲಾಂಛನಗಳೊಂದಿಗೆ ಲ್ಯಾನ್ಯಾರ್ಡ್‌ಗಳನ್ನು ಧರಿಸಿದ್ದರು. ಟರ್ಮಿನಲ್‌ 2ನಿಂದ ತಮ್ಮ ಪಯಣ ಆರಂಭಿಸಿದ ಅತಿಥಿಗಳಲ್ಲಿ ತನ್ನ ಲಾಯಲ್ಟಿ ಪ್ರೋಗ್ರಾಂನ ಒಬ್ಬ ಪ್ರಯಾಣಿಕನಿಗೆ ವಿಮಾನಯಾನ ಸಂಸ್ಥೆಯು ಸ್ಮರಣಾರ್ಥದ ಬೋರ್ಡಿಂಗ್‌ ಪಾಸ್‌ ನೀಡಿತು. ಟರ್ಮಿನಲ್‌ 2ರಿಂದ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅನುಭವ ಹಂಚಿಕೊಂಡ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಯು ತನ್ನ ಉತ್ಪನ್ನ ಮತ್ತು ಉಡುಪುಗಳನ್ನು ವಿತರಿಸಿತು.

ವಿವಿಧ ಪಾಲುದಾರರ ನೆರವಿನಿಂದ ಟರ್ಮಿನಲ್ 2– ಪ್ರಯಾಣಿಕರಿಗೆ ಸಮಗ್ರ ಶಾಪಿಂಗ್ ಮತ್ತು ತಿಂಡಿತಿನಿಸು – ಭೋಜನದ ವಿಶೇಷ ಅನುಭವ ನೀಡಲಿದೆ. ಆದ್ಯತೆಯ ಸೇವೆಗಳನ್ನು ಕಾಯ್ದಿರಿಸಿದ ಅತಿಥಿಗಳಿಗೆ, ನಿಯಮಿತವಾಗಿ ಪ್ರಯಾಣಿಸುವವರಿಗೆ, ಟಾಟಾ ನ್ಯೂಪಾಸ್‌ ರಿವಾರ್ಡ್ಸ್‌ ಪ್ರೋಗ್ರಾಂನ ಹೈಫ್ಲೈಯರ್ ಶ್ರೇಣಿಯ ಸದಸ್ಯರಿಗೆ, ನಡೆದಾಡಲು ಕಷ್ಟಪಡುವವರಿಗೆ ಅಥವಾ ವಿಶೇಷ ನೆರವಿನ ಅಗತ್ಯ ಇರುವವರಿಗೆ ಆದ್ಯತೆಯ ಚೆಕ್-ಇನ್, ಬೋರ್ಡಿಂಗ್ ಮತ್ತು ಬ್ಯಾಗೇಜ್ ಸೌಲಭ್ಯಗಳನ್ನು ಏರ್‌ಏಷ್ಯಾ ಇಂಡಿಯಾ ಒದಗಿಸುತ್ತದೆ. ಹವಾನಿಯಂತ್ರಿತ ಷಟಲ್ ಬಸ್‌ ಸೇವೆಗಳು ನಗರದ ವಿವಿಧ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ದಿನದ 24 ಗಂಟೆಗಳ ಕಾಲ ಸಂಪರ್ಕ ಒದಗಿಸುತ್ತವೆ, ಎರಡೂ ಟರ್ಮಿನಲ್‌ಗಳ ನಡುವೆ ನಿಯಮಿತ ಮಧ್ಯಂತರಗಳಲ್ಲಿ ಷಟಲ್ ಬಸ್‌ಗಳ ಸೇವೆಯೂ ಲಭ್ಯ ಇರಲಿದೆ.

ವಿಮಾನಯಾನ ಸಂಸ್ಥೆಯು ಇತ್ತೀಚೆಗೆ ಗುಜರಾತ್‌ನ ಸೂರತ್ ನಗರಕ್ಕೆ ತನ್ನ ಸಂಪರ್ಕ ಜಾಲದ ಸೇವೆ ವಿಸ್ತರಿಸಿರುವುದಾಗಿ ಪ್ರಕಟಿಸಿದೆ. ಸೂರತ್‌ಗೆ ವಿಮಾನ ಸೇವೆಯು 2023ರ ಮಾರ್ಚ್‌ 3ರಿಂದ ಆರಂಭವಾಗಲಿದೆ. ಸೂರತ್‌ನಿಂದ ಬೆಂಗಳೂರು, ದೆಹಲಿ ಮತ್ತು ಕೋಲ್ಕತ್ತಾಗೆ ನೇರ ವಿಮಾನ ಸೇವೆ ಲಭ್ಯ ಇದೆ. ಇದರ ಜೊತೆಗೆ, ಭುವನೇಶ್ವರ್, ಕೊಚ್ಚಿ, ಗುವಾಹಟಿ, ಗೋವಾ, ಹೈದರಾಬಾದ್, ರಾಂಚಿ, ಬಾಗ್ಡೋಗ್ರಾ, ಲಖನೌ, ಚೆನ್ನೈ, ಜೈಪುರ, ವಿಶಾಖಪಟ್ಟಣಂ ಮತ್ತು ಶ್ರೀನಗರ ಸೇರಿದಂತೆ ಇತರ ಸ್ಥಳಗಳಿಗೆ ಅನುಕೂಲಕರವಾದ ಒಂದು-ನಿಲುಗಡೆ ಪ್ರಯಾಣ ಸೌಲಭ್ಯವನ್ನೂ ಹೊಂದಿದೆ. ತನ್ನ ಅತಿಥಿಗಳು ಮತ್ತು ಪೋಷಕರಿಗೆ ತಡೆರಹಿತ ಸಂಪರ್ಕ ಮತ್ತು ಸೇವೆ ಒದಗಿಸಲು ಏರ್‌ಏಷ್ಯಾ ಇಂಡಿಯಾ ವಿಮಾನಯಾನ ಸಂಸ್ಥೆಯು ತೋರುತ್ತಿರುವ ಬದ್ಧತೆಗೆ ಈ ವಿಸ್ತರಣೆಯು ಪೂರಕವಾಗಿದೆ.