Thursday, 20th June 2024

ಬಿಜೆಪಿಯಿಂದ ಭಾವನಾತ್ಮಕವಾಗಿ ವಿಷಬೀಜ ಬಿತ್ತುವ ಕೆಲಸ: ಲಕ್ಷ್ಮಣ ಸವದಿ ಆರೋಪ

ಕೊಲ್ಹಾರ: ಬಿಜೆಪಿಯವರು ಜನರಲ್ಲಿ ಭಾವನಾತ್ಮಕವಾಗಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕ, ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ ತಾರಾ ಪ್ರಚಾರಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು ದೇಶಭಕ್ತಿ, ದೇಶಪ್ರೇಮ ಬಿಜೆಪಿಗೆ ಮಾತ್ರ ಸೀಮಿತವಲ್ಲ, ಕಾಂಗ್ರೆಸ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ, ನೈಜ ದೇಶಭಕ್ತರಿರುವುದು ಕಾಂಗ್ರೆಸ ಪಕ್ಷದಲ್ಲಿ ಮಾತ್ರ ಎಂದು ಅವರು ಹೇಳಿದರು.

ರೈತರ ಆದಾಯ ದ್ವಿಗುಣಗೊಳಿಸುತ್ತೆವೆ, ಉದ್ಯೋಗ ಸೃಷ್ಟಿ ಮಾಡುತ್ತೆವೆ, ಕಪ್ಪುಹಣ ತರುತ್ತೆವೆ, ಬುಲೆಟ್ ಟ್ರೇನ್ ತರುತ್ತೆವೆ, ಅಚ್ಚೆ ದಿನ್ ತರುತ್ತೆವೆ ಎಂದು ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಯಾವ ಭರವಸೆಗಳನ್ನು ಈಡೇರಿಸದೆ ಜನರ ಜೀವನ ದುಸ್ಥರಗೊಳಿಸಿದೆ ಹಾಗಾಗಿ ಈ ಬಾರಿ ದೇಶದ ಹಿತಕ್ಕಾಗಿ ಕಾಂಗ್ರೆಸ ಪಕ್ಷಕ್ಕೆ ಬೆಂಬಲಿಸಿ ಎಂದು ಅವರು ಮನವಿ ಮಾಡಿದರು.

ಸಚಿವ ಎಚ್.ಸಿ ಮಹಾದೇವಪ್ಪ ಮಾತನಾಡಿ ಪ್ರಸ್ತುತ ನಡೆಯುತ್ತಿರುವ ಚುನಾವಣೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಅಳಿವು, ಉಳಿವಿನ ಪ್ರಶ್ನೆ ಯಾಗಿದೆ ಎಂದರು.

ದೇಶದ ಪಾರದರ್ಶಕ ಆಡಳಿತಕ್ಕೆ, ಸಂಪನ್ಮೂಲ ರಕ್ಷಣೆಗೆ ಸಂವಿಧಾನದಲ್ಲಿ ಸಿ.ಬಿ.ಐ, ಇಡಿ, ಐಟಿ ಸಹಿತ ಕೆಲವು ಸ್ವಾಯತ್ತತೆಯ ಸಂಸ್ಥೆಗಳನ್ನ ರಚನೆ ಮಾಡಲಾಗಿದೆ, ಆ ಸಂಸ್ಥೆಗಳು ಯಾರ ಕೈ ಕೆಳಗೂ ಇರದೇ, ಯಾರ ಅಧಿನಕ್ಕೂ ಒಳಗಾಗದೆ, ಯಾವ ಪಕ್ಷದ ಪ್ರಭಾವಕ್ಕೂ ಒಳಗಾಗದೆ ಕಾರ್ಯ ನಿರ್ವಹಿಸ ಬೇಕು. ಅಂತಹ ಸ್ವಾಯತ್ತ ಸಂಸ್ಥೆಗಳನ್ನ ಕೇಂದ್ರ ಬಿಜೆಪಿ ಸರ್ಕಾರ ದುರ್ಬಳಕೆ ಮಾಡಿಕೊಂಡು ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಅಪಾಯ ಒಡ್ಡುತ್ತಿದೆ ದೇಶದ ಹಿತಕ್ಕಾಗಿ ಕಾಂಗ್ರೆಸ ಪಕ್ಷಕ್ಕೆ ಬೆಂಬಲಿಸಬೇಕು ಎಂದರು.

ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ ಮಾತನಾಡಿ ಜಿಲ್ಲೆಗೆ ಸಂಸದ ರಮೇಶ ಜಿಗಜಿಣಗಿಯವರ ಕೊಡುಗೆ ಶೂನ್ಯ ಎಂದು ಹರಿಹಾಯ್ದರು, ಜಿಗಜಿಣಗಿ ಲೋಕಸಭೆಯಲ್ಲಿ ಒಮ್ಮೆಯೂ ಕೂಡ ಮಾತನಾಡಿರುವುದು ಜಿಲ್ಲೆಯ ದುರಂತವೇ ಸರಿ, ಐತಿಹಾಸಿಕ ಗೋಲಗುಮ್ಮಟ ಒಮ್ಮೆ ಒದರಿದರೆ ಏಳು ಬಾರಿ ಪ್ರತಿಧ್ವನಿ ಹೊರಡಿಸುತ್ತದೆ ಆ ಕಟ್ಟಡಕ್ಕಿಂತ ಜಿಗಜಿಣಗಿಯವರು ಕಡೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ ಅಭ್ಯರ್ಥಿ ರಾಜು ಆಲಗೂರ ಮಾತನಾಡಿ ನಿಮ್ಮ ಸೇವೆಯ ಅವಕಾಶ ಕಲ್ಪಿಸಬೇಕು ಎಂದು ನೆರೆದ ಜನರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಸಿ.ಪಿ ಪಾಟೀಲ, ಉಸ್ಮಾನಪಟೇಲ ಖಾನ್, ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಆರ್.ಬಿ ಪಕಾಲಿ, ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ, ಬಿ.ಯು ಗಿಡ್ಡಪ್ಪಗೋಳ, ಮಹಿಳಾ ಬ್ಲಾಕ್‌ ಕಾಂಗ್ರೆಸ ಅಧ್ಯಕ್ಷೆ ರುಕ್ಮಿಣಿ ರಾಠೋಡ, ಮುಸ್ಕಾನ್ ಶಿರಬೂರ, ಎಸ್.ಬಿ ಪತಂಗಿ, ಸಿ.ಎಸ್ ಗಿಡ್ಡಪ್ಪಗೋಳ ಹಾಗೂ ಇನ್ನಿತರು ಇದ್ದರು.

Leave a Reply

Your email address will not be published. Required fields are marked *

error: Content is protected !!