Saturday, 25th May 2024

ಉಪ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ 7 ಗಂಟೆಗೆ ತೆರೆ

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಅ.30ರ ಶನಿವಾರ ಮತದಾನ ಜರುಗಲಿದೆ.

ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಬಹಿರಂಗ ಪ್ರಚಾರಕ್ಕೆ ಅ.27ರ ಬುಧವಾರ ಸಂಜೆ 7 ಗಂಟೆಗೆ ತೆರೆ ಬಿಳಲಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾ ಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅಕ್ಟೋಬರ್ 30ರ ಬೆಳಿಗ್ಗೆ 6 ರಿಂದ ಸಂಜೆ 7ರವರೆಗೆ ಎಕ್ಸಿಟ್ ಪೋಲ್ ನಿರ್ಭಂದಿಸ ಲಾಗಿದೆ ಮತ್ತು ಮತದಾನ ಸಮೀಕ್ಷೆ ಯನ್ನು ಪ್ರಚುರ ಪಡಿಸುವಂತಿಲ್ಲ. ಮತದಾನ ಮುಕ್ತಾಯದ 48 ಗಂಟೆ ಪೂರ್ವದ ಅವಧಿ ಯಲ್ಲಿ ಮತದಾನ ಕುರಿತ ಅಭಿಪ್ರಾಯ ಸಮೀಕ್ಷೆ(ಒಪಿನಿಯನ್ ಪೋಲ್) ನಿರ್ಭಂಧಿಸ ಲಾಗಿದೆ ಎಂದು ತಿಳಿಸಿದರು.

ಈ ಅವಧಿಯಲ್ಲಿ ಚುನಾವಣಾ ಪ್ರಚಾರ, ಬಹಿರಂಗ ಸಭೆ-ಸಮಾರಂಭಗಳನ್ನು ನಿಷೇಧಿಸ ಲಾಗಿದೆ. ಆದರೆ ಮನೆ ಮನೆ ಪ್ರಚಾರಕ್ಕೆ ಯಾವುದೇ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ ಒಂದು ಗುಂಪಿನಲ್ಲಿ ಐದು ಜನರಿಗಿಂತ ಹೆಚ್ಚು ಜನರು ಒಟ್ಟಾಗಿ ಮನೆ ಮನೆ ಪ್ರಚಾರ ಮಾಡುವ ಹಾಗಿಲ್ಲ. ಈ ನಿಯಮ ಅಭ್ಯರ್ಥಿಗಳಿಗೂ ಅನ್ವಯಿಸುತ್ತದೆ. ಚುನಾವಣಾ ನಿಯಮಗಳ ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.

ತಾರಾ ಪ್ರಚಾರಕರು ಸೇರಿದಂತೆ ರಾಜಕೀಯ ಮುಖಂಡರು ಸೇರಿದಂತೆ ರಾಜಕೀಯ ಉದ್ದೇಶಕ್ಕಾಗಿ ಕ್ಷೇತ್ರಕ್ಕೆ ಆಗಮಿಸಿದ ಹೊರಗಿನವರು ಅ.27ರ ಸಂಜೆ 7 ಗಂಟೆಗೆ ಕ್ಷೇತ್ರದಲ್ಲಿ ಉಳಿದುಕೊಳ್ಳುವಂತಿಲ್ಲ.

ಓರ್ವ ಅಭ್ಯರ್ಥಿಗೆ ಎರಡು ವಾಹನಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ವಾಹನ ಚಾಲಕ ಸೇರಿದಂತೆ ಒಂದು ವಾಹನ ದಲ್ಲಿ ಮೂರು ಜನರಿಗೆ ಮಾತ್ರ ಓಡಾಡಲು ಅವಕಾಶವಿದೆ.

ಮತದಾನಕ್ಕಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ 239 ಮೂಲ ಹಾಗೂ 24 ಹೆಚ್ಚುವರಿ 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತ ಗಟ್ಟೆಗಳಲ್ಲಿ ರ್ಯಾಂಪ್, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ತಲಾ 263 ಬಿಯು, ಸಿಯು ಹಾಗೂ ವಿವಿಪ್ಯಾಟ್‍ಗಳನ್ನು ಸಿದ್ದಪಡಿಸಲಾಗಿದೆ. ಪ್ರತಿ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ನಾಲ್ಕು ಜನರನ್ನು ನೇಮಕ ಮಾಡಲಾಗಿದೆ. ಒಟ್ಟಾರೆ 263 ಮತಗಟ್ಟೆಗಳಿಗೆ 1155 ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ತರಬೇತಿ ನೀಡಲಾಗಿದೆ.

ಕ್ಷೇತ್ರದಲ್ಲಿ 1,05,525 ಪುರುಷ ಹಾಗೂ 98,953 ಮಹಿಳೆ ಹಾಗೂ ಮೂರು ಜನ ಇತರ ಮತದಾರರು ಸೇರಿದಂತೆ 2,04,481 ಮತದಾರರಿದ್ದಾರೆ. 83 ಸೇವಾ ಮತದಾರರಿದ್ದಾರೆ. ಇವರ ಮತದಾನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.

 

Leave a Reply

Your email address will not be published. Required fields are marked *

error: Content is protected !!