Tuesday, 25th June 2024

ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸ್ಥಳೀಯ ಆಡಳಿತ ಬಹು ಮುಖ್ಯ: ಡಾ.ಸಿ.ಎನ್.ಅಶ್ವತ್ಥನಾರಾಯಣ

ರಾಮನಗರ : ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸ್ಥಳೀಯ ಆಡಳಿತ ಬಹು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾ ಯಿತಿ ಚುನಾವಣೆಯಲ್ಲಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕರೆ ನೀಡಿದರು.

ಬಿಡದಿಯ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಮತ ಯಾಚನೆ ನಡೆಸಿದ ನಂತರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರವು ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಗ್ರಾಪಂಗಳಿಗೆ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

ದೊಡ್ಡ ದೊಡ್ಡ ನಾಯಕರಿದ್ದರೂ ಕೂಡ ಈ ಜಿಲ್ಲೆಯು ಅಭಿವೃದ್ಧಿಯಿಂದ ವಂಚಿತವಾಗಿದೆ. ಹೆಸರುಗಳು ದೊಡ್ಡದಿದ್ದರೆ ಸಾಲದು, ನಾವು ಮಾಡುವ ಕೆಲಸ ದೊಡ್ಡದಿರಬೇಕು. ಯಾರೋ ನಾಲ್ಕು ಮಂದಿ ಅಭಿವೃದ್ಧಿ ಹೊಂದಿದರೆ ಸಲದು ಇಡೀ ಜಿಲ್ಲೆ ಅಭಿವೃದ್ಧಿ ಹೊಂದಬೇಕು. ಆ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದೆ ಟೀಕಿಸಿದರು.

150 ಕೋಟಿ ವೆಚ್ಚದಲ್ಲಿ ದೊಡ್ಡಬೆಲೆಯಿಂದ ಏತ ನೀರಾವರಿ ಮೂಲಕ ಶುದ್ದೀಕರಿಸಿದ ಬಿಡದಿ ಭಾಗದ 60-70 ಕೆರೆಗಳನ್ನು ತುಂಬಿಸುವ ಯೋಜನೆ. 250 ಕೋಟಿ ವೆಚ್ಚದಲ್ಲಿ ಬೈರಮಂಗಲ ಕೆರೆ ಅಭಿವೃದ್ಧಿ ಯೋಜನೆ ಜತೆಗೆ ಎಡ ಹಾಗೂ ಬಲದಂಡ ನಾಲೆಗಳ ಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಬಿಡದಿ ಪಟ್ಟಣಕ್ಕೆ ಮಂಚನಬೆಲೆ ಜಲಾಶಯದಿಂದ ಕುಡಿಯುವ ನೀರು ಪೂರೈಸುವ ಯೋಜನೆ. ಒಳ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೃಷಿಕರಿಗೆ ಅನುಕೂಲ ಕಲ್ಪಿಸುವುದು. ಜತೆಗೆ ನರೇಗಾ ಯೋಜನೆ ಮೂಲಕ ಸಮು ದಾಯದ ಜತೆಗೆ ವೈಯಕ್ತಿಕ ಕಾಮಗಾರಿಗಳಾದ ಬದು ನಿರ್ಮಾಣ, ಕುಂಟೆಗಳ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಒಟ್ಟಾರೆ ಈ ವರ್ಷ 50 ಲಕ್ಷ ಮಾನವ ದಿನಗಳ ಸೃಜಿಸುವ ಗುರಿ ಹೊಂದಿದ್ದು, ಈಗಾಗಲೇ 45 ಲಕ್ಷ ಮಾನವ ದಿನಗಳ ಗುರಿ ಪೂರೈಸಲಾಗಿದೆ ಎಂದರು.

ಈಲ್ಲೆಯಲ್ಲಿ ನರೇಗಾ ಕಾಮಗಾರಿಯಲ್ಲಿ ಗ್ರಾಪಂಗಳಿಗೆ 2018-19ರಲ್ಲಿ 714 ಲಕ್ಷ, 2019-20ರಲ್ಲಿ 890 ಲಕ್ಷ ಮಾತ್ರ ಖರ್ಚಾಗಿತ್ತು. ಆದರೆ, ಈ ವರ್ಷ 1756 ಲಕ್ಷ ಈಗಾಗಲೇ ಬಿಡುಗಡೆಯಾಗಿದೆ. ರೈತರ ಆರ್ಥಿಕ ಮಟ್ಟವನ್ನು ಸುಧಾರಿಸಿ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಯಲು ಗ್ರಾಮಗಳಿಗೇ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಅ.ದೇವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಮಂಡಲ ಅಧ್ಯಕ್ಷ ಧನಂಜಯ, ಮುಖಂಡ ಜೇಡರಹಳ್ಳಿ ಕೃಷ್ಣಮೂರ್ತಿ, ಮಾಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಜಾಲಮಂಗಲ ನಾಗರಾಜು ಮತ್ತಿತರರು ಇದ್ದರು.

ಘಟಕ ನಿರ್ಮಾಣ ಯೋಜನೆ ಕಾಂಗ್ರೆಸ್‌ನದ್ದು

ಬಿಡದಿ ಬಳಿಯಲ್ಲಿ ಬೆಂಗಳೂರಿನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಯೋಜನೆಯು ಹಿಂದಿನ ಸರ್ಕಾರಗಳ ಕಾಲದಲ್ಲಿ ಅನುಮೋದನೆಗೊಂಡಿರುವ ಯೋಜನೆಯಾಗಿದ್ದು, ಅದಕ್ಕೆ ಇದೀಗ ಚಾಲನೆ ನಿಡಲಾಗಿದೆ ಎಂದು ಸ್ಪಷ್ಟ ಪಡಿಸಿದರು.

ಸದರಿ ಘಟಕದಿಂದ ಪರಿಸರಕ್ಕೆ ಯಾವುದೇ ಹಾನಿ ಆಗುವುದಿಲ್ಲ. ಈ ಘಟಕದಿಂದ ಒಂದು ಕಾರಿನಿಂದ ಬರುವ ಹೊಗೆಯಷ್ಟೂ ಮಾಲಿನ್ಯ ಆಗುವುದಿಲ್ಲ. ತ್ಯಾಜ್ಯ ವಿಲೇವಾರಿ ಘಟಕ ಎಂದಾಕ್ಷಣ ಜನರ ಮನಸ್ಸಿನಲ್ಲಿ ಒಂದು ರೀತಿಯ ಭಯ ಉಂಟಾಗುತ್ತದೆ. ಅದಕ್ಕೆ ರಾಜ್ಯದ ಬೇರೆ ವಿಲೇವಾರಿ ಘಟಕಗಳಿಂದ ಆಗಿರುವ ತೊಂದರೆಯೇ ಕಾರಣವಾಗಿದೆ ಎಂದರು.

ಇದುವರೆಗೆ ಖಾಸಗಿ ಕಂಪೆನಿಗಳಿಗೆ ಯೋಜನೆ ಜಾರಿಗೆ ಅನುಮತಿ ನೀಡಲಾಗುತ್ತಿತ್ತು. ಆದರೆ, ಅವರು ಅರ್ಧಕ್ಕೇ ಕಾಮಗಾರಿ ನಿಲ್ಲಿಸುತ್ತಿದ್ದ ಕಾರಣ ಇದೀಗ ನೇರವಾಗಿ ಸರ್ಕಾರವೇ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ. ಪರಿಸರಕ್ಕೆ ಯಾವುದೇ ಹಾನಿ ಮಾಡದೆ ತ್ಯಾಜ್ಯ ವಿಲೇವಾರಿ ಮಾಡುವ ಜತೆಗೆ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಹೇಳಿದರು.

ವಿದೇಶಗಳಲ್ಲಿ 30-40 ವರ್ಷದಿಂದ ಈ ರೀತಿಯ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಪರಿಸರಕ್ಕೆ ಕಿಂಚಿತ್ತೂ ಹಾನಿಯಾಗಿಲ್ಲ. ಅದೇ ತಂತ್ರಜ್ಞಾನದ ಮೂಲಕ ಇಲ್ಲಿ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಸ್ಥಳೀಯರೊಂದಿಗೆ ಚರ್ಚಿಸಿ ಅವರಿಗೆ ಮನವರಿಕೆ ಮಾಡಿಕೊಟ್ಟ ನಂತರವೇ ಘಟಕ ನಿರ್ಮಾಣ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಅವರು ಅಧಿಕಾರದಲ್ಲಿದ್ದಾಗ ಪ್ರಾರಂಭಗೊAಡಿದ್ದ ಯೋಜನೆಗೆ ಇದೀಗ ಅವರೇ ವಿರೋಧ ವ್ಯಕ್ತಪಡಿಸುತ್ತಿರುವುದು ಚುನಾವಣೆಯಲ್ಲಿ ಮತ ಗಳಿಸುವ ತಂತ್ರವಾಗಿದೆ ಎಂದು ಟೀಕಿಸಿದರು.

ಬಿಕಟ್ಟು ಮುಂದುವರಿಯಲು ಅಧ್ಯಕ್ಷನ ಅಸಹಕಾರ ಕಾರಣ

ಟೊಯೋಟಾ ಕಿರ್ಲೋಸ್ಕರ್ ರಾಜ್ಯದಲ್ಲಿ ಅತೀ ದೊಡ್ಡ ವಾಹನ ತಯಾರಿಕಾ ಕಂಪೆನಿಯಾಗಿದೆ. ನೇರವಾಗಿ 6 ಸಾವಿರ ಹಾಗೂ ಪರೋಕ್ಷವಾಗಿ ಸುಮಾರು 20 ಸಾವಿರ ಮಂದಿಗೆ ಉದ್ಯೋಗದಾತ ಕಂಪೆನಿಯಾಗಿದೆ. ಟೊಯೋಟಾ ಕಂಪೆನಿಯಲ್ಲಿ ಅಳವಡಿಸಿ ಕೊಂಡಿರುವ ದುಡಿಮೆ ಪರಿಕಲ್ಪನೆ ವಿಶ್ವದರ್ಜೆಯ ಗುಣಮಟ್ಟದಿಂದ ಕೂಡಿದೆ. ಬೇರೆ ದೇಶಗಳಲ್ಲಿ ಒಂದು ಅವಧಿಯಲ್ಲಿ ಎರಡು ವಾಹನಗಳು ಉತ್ಪಾದನೆಯಾದರೆ ಇಲ್ಲಿ ಕೇವಲ ಒಂದು ವಾಹನವನ್ನು ಉತ್ಪಾದಿಸಲಾಗುತ್ತಿದೆ ಎಂದರು.

ನೌಕರರ ವಿನಂತಿಯ ಮೇರೆಗೆ ಬೆಂಗಳೂರಿನಲ್ಲಿ ಸಭೆ ಆಯೋಜಿಸಲಾಗಿತ್ತು. ಸದರಿ ಸಭೆಗೆ ನೌಕರರ ಸಂಘದ ಅಧ್ಯಕ್ಷರು ಭಾಗವಹಿಸದೆ ಪ್ರಧಾನ ಕಾರ್ಯದರ್ಶಿ ಅವರನ್ನು ಕಳುಹಿಸಿದ್ದರು. ಸಭೆ ನಡೆಯುವ ಸ್ಥಳದಿಂದ ಅನತಿ ದೂರದಲ್ಲಿಯೇ ಅಧ್ಯಕ್ಷ ಇದ್ದರೂ ಸಭೆಗೆ ಗೈರಾಗಿದ್ದುದು ಅನುಮಾನ ಮೂಡಿಸುವ ವಿಚಾರವಾಗಿದೆ. ಬಿಕ್ಕಟ್ಟು ಇನ್ನೂ ಮುಂದುವರಿಯಲು ನೌಕರರ ಸಂಘದ ಅಧ್ಯಕ್ಷರ ಅಸಹಕಾರವೇ ಕಾರಣವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಒಂದು ವೇಳೆ ನೌಕರರಿಗೆ ಅನ್ಯಾಯವಾಗಿದ್ದರೆ, ಅವರ ಹಕ್ಕುಗಳು ಮೊಟಕುಗೊಂಡಿದ್ದರೆ ಕಾರ್ಮಿಕ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬಹುದು. ಕಾರ್ಮಿಕರು ಪ್ರತಿಭಟನೆ ಕೈಬಿಟ್ಟು ಕೂಡಲೇ ಕೆಲಸಕ್ಕೆ ಹಾಜರಾಗಬೇಕು, ಕಾರ್ಖಾನೆ ಪುನರಾ ರಂಭಿಸಲು ಅನುವು ಮಾಡಿಕೊಡಬೇಕು. ನಮ್ಮ ಬದುಕನ್ನು ನಾವೇ ಹಾಳುಮಾಡಿಕೊಳ್ಳುವ ಕೆಲಸ ಮಾಡಿಕೊಳ್ಳಬಾರದು ಎಂದರು.

ಯಾವುದೇ ಸಮಸ್ಯೆ ಬಗೆಹರಿಯಲು ಒಂದು ವಿದಾನ ಇರುತ್ತದೆ. ಕಾನೂನು ಚೌಕಟ್ಟು, ಪ್ರಕ್ರಿಯೆಗಳನ್ನು ಮೀರಿ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಶಕ್ತಿ ಪ್ರದರ್ಶನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕೈಗಾರಿಕಾ ಉತ್ಪಾದನೆಯಲ್ಲಿ ಚೈನಾ ದೇಶಕ್ಕೆ ಹೋಲಿಸಿದರೆ ನಾವೂ ಏನೂ ಇಲ್ಲ. ಅವರಿಗೆ ಸರಿಸಮವಾಗಿ ಬೆಳೆಯಬೇಕಾದರೆ ನಾವೂ ಕೂಡ ಅವರ ರೀತಿ ದುಡಿಮೆ ಮಾಡಬೇಕು ಎಂದರು.

ಸAಸದರಿಗೆ ಪ್ರಜಾಪ್ರಭುತ್ವದ ಅರ್ಥ ಗೊತ್ತಿಲ್ಲ

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನರೇಗಾ ಯೋಜನೆಯಲ್ಲಿ ಏನೆಲ್ಲಾ ಯಡವಟ್ಟುಗಳಾಗಿವೆ. ಅವರ ಪಟಾಲಂ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ ತಿಳಿಸಿದರು.

ಉಪ ಮುಖ್ಯಮಂತ್ರಿ ಅವರಿಗೆ ಗ್ರಾಪಂ ಅಂದರೆ ಏನು ಎಂದು ಗೊತ್ತಿಲ್ಲ ಎಂಬ ಸಂಸದ ಡಿ.ಕೆ.ಸುರೇಶ್ ಅವರ ಹೇಳಿಕೆಗೆ ಪ್ರತಿಕ್ರಿ ಯಿಸಿದ ಅವರು, ದಬ್ಬಾಳಿಕೆ, ದೌರ್ಜನ್ಯ, ಕಿರುಕುಳ ನೀಡುವ ಅವರಿಗೆ ಪ್ರಜಾಪ್ರಭುತ್ವ ಎಂದರೆ ಏನು ಎಂದು ಗೊತ್ತಿದೆಯೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಶಕ್ತಿ ತುಂಬಬೇಕೇ ಹೊರತು ದೌರ್ಜನ್ಯ ಎಸಗಬಾರದು. ಇನ್ನು ಮುಂದೆ ಅದು ನಡೆ ಯುವುದಿಲ್ಲ ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *

error: Content is protected !!