Saturday, 27th July 2024

45 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು ಯೋಜನೆಗೆ ಸಚಿವ ಸಂಪುಟ ಅಸ್ತು: ಡಿಸಿಎಂ ಸವದಿ

ಅಥಣಿಯ 9 ಗ್ರಾಮಗಳು

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಸತ್ತಿ ಮತ್ತು ಇತರೆ 08 ಗ್ರಾಮಗಳಿಗೆ 45.39 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೆ ರಾಜ್ಯ ಸಚಿವ ಸಂಪುಟವು ಅಂಕಿತ ನೀಡಿದೆ ಎಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಸಚಿವ ಸಂಪುಟ ಸಭೆಯ ಬಳಿಕ ಸೋಮವಾರ ವಿವರ ನೀಡಿ, ಅವರು, ಸತ್ತಿಯೂ ಸೇರಿದಂತೆ ಒಟ್ಟು 9 ಗ್ರಾಮಗಳಲ್ಲಿ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕೆಂಬ ಬೇಡಿಕೆ ಬಹುದಿನಗಳಿಂದ ಬಾಕಿ ಇತ್ತು. ಈ ಬಗ್ಗೆ ಮುಖ್ಯಮಂತ್ರಿಯವರಲ್ಲಿಯೂ ಮನವಿ ಮಾಡಿಕೊಂಡಿದ್ದೆವು. ಇಂದು ಯೋಜನೆಗೆ ಅನುಮೋದನೆ ನೀಡಿರುವುದರಿಂದ ಆ ಭಾಗದ ಸ್ಥಳೀಯರ ಬೇಡಿಕೆ ಈಡೇರಿಸಿ ದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಧನ್ಯವಾದಗಳನ್ನು ತಿಳಿಸಿದರು.

ಕೇಂದ್ರದ “ಜಲ ಜೀವನ್ ಮಿಷನ್” ಯೋಜನೆಯಡಿ 18.12 ಕೋಟಿ ರೂ.ಗಳನ್ನು, ಆರ್.ಐ.ಡಿ.ಎಫ್. (ನಬಾರ್ಡ್) ನಿಂದ 15.40 ಕೋಟಿ ರೂ.ಗಳನ್ನು ಮತ್ತು ನಮ್ಮ ರಾಜ್ಯ ಸರ್ಕಾರದಿಂದ 11.87 ಕೋಟಿ ರೂ.ಗಳ ಅನುದಾನದೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲು ಸಂಪುಟವು ಹಸಿರು ನಿಶಾನೆ ನೀಡಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಅಡಿಯಲ್ಲಿ ಜಾರಿ ಗೊಳಿಸಲಾಗುವ ಈ ಯೋಜನೆಯನ್ನು 15 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಅವರಖೋಡ, ನಾಗನೂರ ಪಿ.ಕೆ, ದೊಡವಾಡ, ನಂದೇಶ್ವರ, ಸವದಿ, ಹಲ್ಯಾಳ, ಹುಲಗಬಾಳ, ಸಂಕೋನಟ್ಟಿ ಗ್ರಾಮಗಳಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಪೂರೈಕೆ ಸಾಧ್ಯವಾಗಿ ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದು ಸವದಿ ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!