Sunday, 8th September 2024

ಬುಗುಡನಹಳ್ಳಿ ಕೆರೆಗೆ ಹರಿದ ಹೇಮೆ:ಕಾಂಗ್ರೆಸ್ ಮುಖಂಡರಿಂದ ಗಂಗಾಪೂಜೆ

ತುಮಕೂರು: ಹೇಮಾವತಿ ನೀರು  ಬುಗುಡನಹಳ್ಳಿ ಕೆರೆಗೆ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಭಾನುವಾರ ಭೇಟಿ ನೀಡಿ ಗಂಗಾಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ , ತುಮಕೂರಿನ ಅಮಾ ನಿಕೆರೆ, ಗಂಗಸಂದ್ರ ಕೆರೆ, ಮರಳೂರು ಕೆರೆಗಳಲ್ಲಿ ಈಗಾಗಲೇ ಸಾಕಷ್ಟು ನೀರು ಸಂಗ್ರಹವಾಗಿದ್ದು, ವೀಕ್ಷಣೆ ಮಾಡಿಕೊಂಡು ಈಗ ಬುಗುಡನಹಳ್ಳಿ ಕೆರೆ ವೀಕ್ಷಿಸಿದ್ದು, ಇದು ತುಮಕೂರು ನಗರದ ಜನತೆಯ ಜೀವಾಳ. ಬುಗುಡನಹಳ್ಳಿ ಕೆರೆ ಸಾಮರ್ಥ್ಯ 250 ಎಂಸಿಎಫ್‌ಟಿ ಆಗಿದ್ದು, ತುಮಕೂರಿನ ಜನತೆಗೆ ಯಾವುದೇ ರೀತಿಯ ತೊಂದರೆಯಾಗ ಬಾರದು ಎಂದು ಜಿಲ್ಲೆಯ ಇಬ್ಬರು ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ಅವರು ಹೇಮಾವತಿ ನೀರು ಹರಿಸಲು ಶ್ರಮಿಸಿದ್ದಾರೆ. ಇಬ್ಬರೂ ಸಚಿವರಿಗೆ ತುಮಕೂರು ನಗರದ ಜನತೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಸಾರ್ವಜನಿಕರು ಕೂಡ ಎಚ್ಚರಿಕೆಯಿಂದ ನೀರನ್ನು ಮಿತವಾಗಿ ಬಳಸಬೇಕು ಎಂದರು.
ಈಗಾಗಲೇ ಮುಂಗಾರು ವಿಳಂಬವಾಗಿದ್ದು, ಇನ್ನೂ ಸ್ವಲ್ಪದಿನ ಕಾಯಬೇಕಾಗುತ್ತದೆ. ಮಳೆ ಬರುವ ಒಳ್ಳೆಯ ಮುನ್ಸೂಚನೆ ಇದ್ದು, ಹಾಗೇನಾದರೂ ಮಳೆ ಕೈಕೊಟ್ಟರೆ ಬಜೆಟ್ ಅಧಿವೇಶನಕ್ಕೂ ಮುನ್ನ ನೀರಿನ ಅಭಾವ ಕಂಡುಬಂದರೆ ನಾವೆಲ್ಲಾ  ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಸರ್ಕಾರವನ್ನು ಒತ್ತಾಯ ಮಾಡುತ್ತೇವೆ ಎಂದು  ಹೇಳಿದರು.
ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ, ಸಚಿವರುಗಳ ತುಮಕೂರು ನಗರದ ಬುಗುಡನಹಳ್ಳಿ ಕೆರೆಗೆ ಬಹುಬೇಗನೆ ಹೇಮಾವತಿ ನೀರು ಹರಿಯುವಂತಾಗಿದೆ. ನೀರು ಹರಿಯಲು ಸಹಕರಿಸಿದ ಹಿರಿಯ ಮುಖಂಡರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಕೆಪಿಸಿಸಿ ಒಬಿಸಿ ಘಟಕದ ಉಪಾಧ್ಯಕ್ಷ ರೇವಣ ಸಿದ್ಧಯ್ಯ ಮಾತನಾಡಿ, ತುಮಕೂರು ಜಿಲ್ಲೆಗೆ ಹೇಮಾವತಿ ಹರಿಸುವುದು ಕನಸು ಎಂದು ಈ ಹಿಂದೆ ದೊಡ್ಡ ದೊಡ್ಡ  ಪಕ್ಷಗಳು ವ್ಯಂಗ್ಯವಾಡುತ್ತಿದ್ದವು. ಆ ಕನಸನ್ನು ನನಸು ಮಾಡಲು ಸವಾಲಾಗಿ ಸ್ವೀಕರಿಸಿ ಇಂದು ತುಮಕೂರು ನಗರಕ್ಕೆ ಹೇಮಾವತಿ ನೀರು ಹರಿಸಿರುವುದೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಷಣ್ಮುಖಪ್ಪ, ಅತೀಕ್ ಅಹಮದ್, ಎಸ್ ಟಿ ಘಟಕದ ಅಧ್ಯಕ್ಷ ನರಸಿಂಹಯ್ಯ, ಎಸ್‌ಸಿ ಘಟಕದ ಲಿಂಗರಾಜು, ಕಾರ್ಮಿಕ ಘಟಕದ ರಹೀಂ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಕೆಂಪಣ್ಣ, ನರಸಿಂಹಮೂರ್ತಿ, ಕೈದಾಳ ರಮೇಶ್, ಟೂಡ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಮಹಿಳಾ ಬ್ಲಾಕ್ ಅಧ್ಯಕ್ಷೆ ಕವಿತ, ಮಂಗಳಮ್ಮ, ಮರಿಚೆನ್ನಮ್ಮ, ಮಂಜುನಾಥ್, ಗೋವಿಂದೇಗೌಡ, ರಾಜಪ್ಪ, ವಸುಂಧರ, ಯಶೋದಮ್ಮ, ವಿಜಯಲಕ್ಷ್ಮ, ಶಿವಾಜಿ, ನರಸಿಂಹಮೂರ್ತಿ, ಅಶ್ವತ್ಥಪ್ಪ, ಅಕಾಶ್, ಪಂಚಣ್ಣ, ಸುದರ್ಶನ್, ಕುಚ್ಚಂಗಿ ಶಿವರಾಜು, ಚಿಕ್ಕರಾಜು, ದೊಡ್ಡಹುಲಿಯಪ್ಪ  ಇದ್ದರು.

Leave a Reply

Your email address will not be published. Required fields are marked *

error: Content is protected !!