Tuesday, 25th June 2024

ತಾಕತ್ತಿದ್ದರೆ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿಸು: ಜಿಟಿಡಿ, ಅಂತಹ ತಾಕತ್ತೇ ನನಗೆ ಬೇಡ: ಸಂಸದರ ತಿರುಗೇಟು

ಮೈಸೂರು: ‘ತಾಕತ್ತಿದ್ದರೆ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿಸು. ಹಾದಿ ಬೀದಿಯಲ್ಲಿ ನಿಂತು ಮಾತನಾಡಬೇಡ’ ಎಂದು ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ ಸಿಂಹ ಅವರಿಗೆ ಶುಕ್ರವಾರ ಸವಾಲು ಹಾಕಿದ್ದು, ಸಂಸದರೂ ಕೂಡ ತಿರುಗೇಟು ನೀಡಿದ್ದಾರೆ.

‘ಮಾಧ್ಯಮಗಳ ಮುಂದೆ ಹೇಳಿಕೆ‌ ನೀಡಿದರೆ ಹುಲಿ ಆಗಲ್ಲ. ಜಿಲ್ಲೆಯ ಶಾಸಕರು ನಿಮಗಿಂತಲೂ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಸ್ವಂತ ಹಣ ವೆಚ್ಚ ಮಾಡಿದ್ದಾರೆ. ಸಂಸದರಾಗಿ ನೀನೆಷ್ಟು ಸ್ವಂತ ದುಡ್ಡು ಖರ್ಚು ಮಾಡಿದ್ದೀಯಾ’ ಎಂದು ಹರಿಹಾಯ್ದರು.

ತಾಕತ್ತಿದ್ದರೆ ವರ್ಗಾವಣೆ ಮಾಡಿ ತೋರಿಸು. ನಿಮ್ಮ ಆರೋಪ, ಹೇಳಿಕೆ ಹಿಂದೆ ವೈಯಕ್ತಿಕ ಸಮಸ್ಯೆ ಇದೆ. ಇದು ಜನರಲ್ಲಿ ಅನುಮಾನ ಸೃಷ್ಟಿಸಿದೆ’ ಎಂದು ಜಿ.ಟಿ.ಡಿ ವಾಗ್ದಾಳಿ ನಡೆಸಿದರು.

‘ಜಿಲ್ಲಾಧಿಕಾರಿ ರಕ್ಷಣೆಗೆ ಮೊದಲು ನಿಲ್ಲುತ್ತಿದ್ದವನೇ ನೀನು. ಇದೀಗ ವಿರೋಧಿಸುತ್ತಿರೋದು ಏಕೆ?’ ಎಂದು ಗರಂ ಆದರು.

ಶಾಸಕ ಜಿ.ಟಿ.ದೇವೇಗೌಡ ಸವಾಲಿಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಸಂಸದ ಪ್ರತಾಪ್ ಸಿಂಹ, ‘ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದೇ ತಾಕತ್ತು ಎನ್ನುವುದಾದರೆ, ಅಂತಹ ತಾಕತ್ತೇ ನನಗೆ ಬೇಡ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಸಂಸದನಾಗಿ ನನ್ನ ಕೆಲಸದಲ್ಲಿ ತಾಕತ್ತು ತೋರಿಸಿರುವೆ. ಅದಕ್ಕೆ ಜನ ಉತ್ತರ ನೀಡಿದ್ದಾರೆ. ಮೈಸೂರಿಗೆ ಹೊರಗಿನವನಾದರೂ ಎರಡು ಬಾರಿ ಗೆಲ್ಲಿಸಿದ್ದಾರೆ’ ಎಂದು ಟಾಂಗ್‌ ಕೊಟ್ಟರು. ‘ವರ್ಗಾವಣೆ ರಾಜಕಾರಣಿಗಳಿಗೆ ಸಹಜ. ನನಗೆ ಅದು ಅತ್ಯಂತ ಸಣ್ಣ ಕೆಲಸ. ಈ ಸಣ್ಣ ಕೆಲಸವನ್ನು ನಾನು ಎಂದಿಗೂ ಮಾಡಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!