Saturday, 27th July 2024

ಅಧಿಕಾರಿಗಳು ಹಾನಿ ಅಂದಾಜಿನ ಸಮೀಕ್ಷೆ ನಡೆಸಿ, ವರದಿ ನೀಡಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ಅತಿವೃಷ್ಟಿಯಿಂದಾಗಿ ಶಿರಸಿ ತಾಲೂಕಿನಲ್ಲಿ 30 ಕೋಟಿ ರೂಪಾಯಿಯಷ್ಟು ಹಾನಿ ಅಂದಾಜಿಸಲಾಗಿದ್ದು, ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸಿ, ವರದಿ ನೀಡಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶಿರಸಿಯ ಮಿನಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಬಾರಿ 2197 ಮಿಮೀ ಮಳೆಯಾಗಿದೆ‌. ಎರಡು ಜನ ಪ್ರಾಣ ಕಳೆದುಕೊಂಡಿದ್ದು, ಇಬ್ಬರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗಿದೆ. ತಾಲೂಕಿನಲ್ಲಿ 32 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಈಗಾಗಲೇ 95 ಸಾವಿರ ಪರಿಹಾರ ನೀಡಲಾಗಿದೆ. ತಾಲೂಕಿನಲ್ಲಿ ಮನೆ ಹಾನಿಗೆ ಸಂಬಂಧಿಸಿ 36 ಲಕ್ಷ ರು ಪರಿಹಾರ ಜಮಾ ಮಾಡಲಾಗಿದೆ. ಭತ್ತದ ಕೃಷಿ‌ 751 ಎಕರೆ ಕೊಚ್ಚಿಕೊಂಡು ಹೋಗಿದೆ. 20 ಕೆರೆಗಳು ಹಾನಿಯಾಗಿವೆ ಎಂದರು.

‌ಲೋಕೋಪಯೋಗಿಯ 65 ಕಿಮೀ ರಸ್ತದ ಹಾಳಾಗಿವೆ. ಜಿಲ್ಲಾ ಪಂಚಾಯ್ತಿಯ ರಸ್ತೆಗಳಿಗೆ ತುಂಬಾ ಡ್ಯಾಮೇಜ್ ಆಗಿದ್ದು, ತಕ್ಷಣ ಹೊಂಡ ಮುಚ್ಚಲು ಸೂಚನೆ ನೀಡಲಾಗಿದೆ ಎಂದ ಅವರು, ಹೆಸ್ಕಾಂ ವ್ಯಾಪ್ತಿಯಲ್ಲಿ 800 ಕಂಬ ಮುರಿದು ಬಿದಿದ್ದು, 3-4 ದಿನಗಳಲ್ಲಿ ಯುದ್ದೋಪಾದಿಯಲ್ಲಿ ಕೆಲಸ ಮಾಡಿ ವಿದ್ಯುತ್ ಸಂಪರ್ಕ ನೀಡಿ ಪ್ರಶಂಸೆಗೆ ಒಳಗಾಗಿದ್ದಾರೆ ಎಂದರು.‌

ಕುಮಟಾ-ತಡಸ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟ ಗುತ್ತಿಗೆ ಕಂಪನಿಯ ಮೇಲೆ ನಿಶ್ಚಿತವಾಗಿ ಕ್ರಮವಾಗಲಿದೆ ಎಂದ ಅವರು,ಅರಬೈಲ್, ಅಣಶಿ ಘಾಟ್ ಮುಚ್ಚಿದ್ದರಿಂದ ಅನಿರೀಕ್ಷಿತವಾಗಿ ಶಿರಸಿ-ಕುಮಟಾ ಮಾರ್ಗದ ಮೇಲೆ ಒತ್ತಡ ಹೆಚ್ಚಾಗಿ ರಸ್ತೆ ಹಾಳಾಗಿದೆ. ಭಾರಿ ವಾಹನ ಸಂಚಾರದಿಂದ ಕಾಮಾಗಾರಿಗೂ ಹಿನ್ನಡೆಯಾಗುತ್ತಿದೆ. ಈ ಹಿಂದೆ ಧಾರವಾಡ ಡಿವಿಷನ್ ವ್ಯಾಪ್ತಿಯಲ್ಲಿದ್ದ ರಸ್ತೆಯನ್ನು ಮಂಗಳೂರು ವಿಭಾಗಕ್ಕೆ ಸೇರಿಸಿದ್ದರಿಂದ ತಾಂತ್ರಿಕ ತೊಂದರೆಗಳಾಗಿದೆ. ಏನೇ ಇದ್ದರೂ ಶಿರಸಿ-ಕುಮಟಾ ರಸ್ತೆಯನ್ನು ಕಾಲಮಿತಿಯೊಳಗೆ ಗುತ್ತಿಗೆದಾರರು ಮುಗಿಸಬೇಕು. ನಿಗದಿಪಡಿಸಿದ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರ ಮೇಲೆ ನಿಶ್ಚಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಲ್ಲದೇ ಅತಿವೃಷ್ಟಿಯಿಂದ ಹಾನಿಯಾದ ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊಸದಾಗಿ ಕ್ರಿಯಾ ಯೋಜನೆ ಮಾಡಿಸಿ ವೈಯಕ್ತಿಕ ನೆಲೆಯಲ್ಲಿ ಹಾನಿಯಾಗಿರುವುದನ್ನು ಸರಿಪಡಿಸಿಕೊಳ್ಳಲು ಅವಕಾಶ ಮಾಡಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸ ಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ತಹಶೀಲ್ದಾರ ಎಂ.ಆರ್.ಕುಲಕರ್ಣಿ, ತಾಲೂಕಾ ಅರೋಗ್ಯಾಧಿಕಾರಿ ವಿನಾಯಕ ಭಟ್ಟ, ತಾಪಂ ಇಓ ಎಫ್.ಜಿ.ಚಿನ್ನಣ್ಣನವರ್‌ ಉಪಸ್ಥಿತರಿದ್ದರು.

***
ಕೋವಿಡ್ 3ನೇ ಅಲೆ ಎದುರಿಸಲು ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬೇಕಾದ ಸೌಲಭ್ಯಗಳ ಕುರಿತು ಮಾಹಿತಿ‌ ನೀಡುವಂತೆ ತಹಶೀಲ್ದಾರ ರಿಗೆ ಸೂಚಿಸಲಾಗಿದೆ. ತಾಲೂಕಿನ ೮ ಕಡೆ ಕೋವಿಡ್ ಕೇರ್ ಸೆಂಟರ್ ಗುರುತಿಸಲಾಗಿದೆ. ಮೂರನೆ ಅಲೆ ಕುರಿತು ಸಾರ್ವಜನಿಕರಲ್ಲಿ ಸದಾ ಜಾಗೃತಿ ಮೂಡಿಸ ಬೇಕು ಎಂದ ಕಾಗೇರಿ ಅವರು, ಶೀಘ್ರದಲ್ಲಿ ಶಿರಸಿಗೆ ಆರ್.ಟಿ.ಪಿ.ಸಿ.ಆರ್ ಯಂತ್ರ ಬರಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!