Saturday, 7th September 2024

ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಗರಣ ಪ್ರಕರಣ: ಕೇಂದ್ರ ಯೋಜನಾ ನಿರ್ದೇಶಕ ಅಮಾನತು

ಡುಪಿ: ಜಿಲ್ಲೆಯ ಪ್ರವಾಸಿ ತಾಣವಾಗಿ ಬೆಳೆಯುತ್ತಿದ್ದ ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಗರಣ ಪ್ರಕರಣದಲ್ಲಿ ಮೊದಲ ತಲೆದಂಡವಾಗಿದೆ.

ನಕಲಿ ಪರಶುರಾಮನ ಮೂರ್ತಿ ಸ್ಥಾಪನೆ ಆರೋಪದ ತನಿಖೆ ಹಿನ್ನೆಲೆಯಲ್ಲಿ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅಮಾನತು ಮಾಡಲಾಗಿದೆ.

ಕಳೆದ ಬಿಜೆಪಿ ಸರಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಕಾರ್ಕಳ ಶಾಸಕ‌ ಸುನೀಲ್ ಕುಮಾರ್ ನೇತೃತ್ವದಲ್ಲಿ ಉಮ್ಮಿಕಲ್ ಬೆಟ್ಟದ ಮೇಲೆ ಪರಶುರಾಮನ ಥೀಂ ಪಾರ್ಕ್ ನಿರ್ಮಾಣವಾಗಿತ್ತು. ಚುನಾವಣಾ ಪೂರ್ವದಲ್ಲಿ ಅಂದಿನ ಮುಖ್ಯ ಮಂತ್ರಿ ಬಸವರಾಜ‌ ಬೊಮ್ಮಾಯಿ ನೂತನ ಥೀಂ ಪಾರ್ಕ್ ಮತ್ತು ಪರಶುರಾಮನ‌ ಭವ್ಯ ಮೂರ್ತಿ ಲೋಕಾರ್ಪಣೆ ಮಾಡಿದ್ದರು. ನಂತರ ದಿನಗಳಲ್ಲಿ ಕಾಮಗಾರಿ ಬಾಕಿ ಇದೆ ಎನ್ನುವ ಕಾರಣಕ್ಕೆ ಥೀಂ ಪಾರ್ಕ್‌ಗೆ ಪ್ರವಾಸಿಗರ ನಿಷೇಧ ಹೇರಲಾಗಿತ್ತು.

ಇದು ಸ್ಥಳೀಯರಿಗೆ ಅನುಮಾನ ಮೂಡಿಸಿದ ಪರಿಣಾಮ ತನಿಖೆ ನಡೆಸಿದಾಗ ಮೂರ್ತಿ ಅಸಲಿಯತ್ತು ಹೊರಬಿದ್ದಿತ್ತು. ಹಿತ್ತಾಳೆ ಮೂರ್ತಿಯ ಬದಲು ಫೈಬರ್ ಮೂರ್ತಿ ಸ್ಥಾಪನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಬಳಿಕ ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನ ಪರಶುರಾಮ ಮೂರ್ತಿ ಏಕಾಏಕಿ ಕಾಣೆಯಾಗಿತ್ತು. ಈ ಕುರಿತು ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿ ತೀವ್ರ ಪ್ರತಿಭಟನೆ ನಡೆಸಿದ್ದರು.

ನಿರ್ಮಾಣದ ಗುಣಮಟ್ಟದ ಜೊತೆಗೆ ಧಾರ್ಮಿಕ ಭಾವನೆಗೆ ಅಪಚಾರ ಪ್ರಕರಣದ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿ ಸಿಒಡಿ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಅಡ್ಡಿ ಉಂಟು ಮಾಡುವ ಮತ್ತು ಹಸ್ತಕ್ಷೇಪ ಮಾಡುವ ಸಾಧ್ಯತೆ ಹಿನ್ನಲೆಯಲ್ಲಿ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅಮಾನತು ಮಾಡಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!