Saturday, 27th July 2024

ಅಪೂರ್ಣ ಕಾಮಗಾರಿ: ಉದ್ಘಾಟನೆಯಾಗಿ ಬಾಗಿಲು ಮುಚ್ಚಿದ ಬಸ್ ನಿಲ್ದಾಣ

ತುಮಕೂರು: ಅಪೂರ್ಣ ಕಾಮಗಾರಿಯಿಂದಾಗಿ ಜನವರಿ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದ ನಗರದ ದೇವರಾಜ ಅರಸು (ಕೆ ಎಸ್ ಆರ್ ಟಿ ಸಿ) ಬಸ್ ನಿಲ್ದಾಣ ಉದ್ಘಾಟನೆಯಾದ ದಿನವೇ ಕಾರ್ಯನಿರ್ವಹಿಸದೆ ಬಾಗಿಲು ಮುಚ್ಚಿದೆ.
ಲೋಕಸಭಾ ಚುನಾವಣೆ ಘೋಷಣೆಯಾಗುವ ಹಿನ್ನೆಲೆಯಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ತರಾತುರಿಯಿಂದಾಗಿ ಬಸ್ ನಿಲ್ದಾಣವನ್ನು ಉದ್ಘಾಟಿಸ ಲಾಗಿತ್ತು. ಆದರೆ ಉದ್ಘಾಟನೆಯಾದ ದಿನವೇ ಬಾಗಿಲು ಮುಚ್ಚಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಸ್ಮಾರ್ಟ್ ಸಿಟಿ ವತಿಯಿಂದ ಬಸ್ ನಿಲ್ದಾಣ ಕಾಮಗಾರಿ ಕೈಗೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಕಳೆದ ಡಿಸೆಂಬರ್ ಅಂತ್ಯಕ್ಕೆ ಸಂಪೂರ್ಣ ಕಾಮಗಾರಿಯನ್ನು ಮುಗಿಸುವಂತೆ ಗುತ್ತಿಗೆದಾರನಿಗೆ ಖಡಕ್ ಎಚ್ಚರಿಕೆ ನೀಡಲಾಗಿತ್ತು ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡದೆ ಬಾಗಿಲು ಮುಚ್ಚಿರುವುದು ಟೀಕೆಗೆ ಗುರಿಯಾಗಿದೆ.
 ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್, ಸಹಕಾರಿ ಸಚಿವ ಕೆ.ಎನ್ ರಾಜಣ್ಣ, ಶಾಸಕ ಜ್ಯೋತಿ ಗಣೇಶ್ ಸೇರಿದಂತೆ ಅನೇಕ ಮುಖಂಡರು   ನೂತನ ಕೆ.ಎಸ್.ಅರ್.ಟಿ.ಸಿ ಬಸ್ ನಿಲ್ದಾಣ ವನ್ನು ಉದ್ಘಾಟಿಸಿದ್ದರು. ಆದರೆ ಅದೇ ದಿನ ಸಂಜೆ ವೇಳೆಗೆ  ಬಸ್ ನಿಲ್ದಾಣದ ಬಾಗಿಲು ಮುಚ್ಚಲಾಗಿದೆ. ಈ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ಕೇಳಿಬಂದಿದೆ.

Leave a Reply

Your email address will not be published. Required fields are marked *

error: Content is protected !!