Saturday, 27th July 2024

ಪ್ರತಿಭಾವಂತರಾಗಿ, ಹೆತ್ತವರನ್ನು ಮರೆಯದಿರಿ: ಎಂ.ನರಸಿಂಹಮೂರ್ತಿ

ತುಮಕೂರು: ಬದಲಾಗಿರುವ ಇಂದಿನ ಸಾಮಾಜಿಕ ಸಂದರ್ಭದಲ್ಲಿ ನೀವು ಪ್ರತಿಭಾವಂತರಾಗಿ ಮುಂದಕ್ಕೆ ಬರಬೇಕು. ಅದೇ ಹೊತ್ತಿಗೆ ನಿಮ್ಮನ್ನು ಹೆತ್ತವರನ್ನು ಮರೆಯದೆ ಅವರನ್ನು ಸಲಹಬೇಕು–ಇದು ಬೆಂಗಳೂರಿನ ಪ್ರಸಿದ್ಧ ಕೈಗಾರಿಕೋದ್ಯಮಿ ಹಾಗೂ ಉಲುಚುಕಮ್ಮೆ ಬ್ರಾಹ್ಮಣ ಸಭಾದ ರಾಜ್ಯ ಉಪಾಧ್ಯಕ್ಷ ಎಂ.ನರಸಿಂಹಮೂರ್ತಿ ಕರೆ ನೀಡಿದರು.

ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಜಿಲ್ಲಾ ಉಲುಚುಕಮ್ಮೆ ಬ್ರಾಹ್ಮಣ ಸಭಾ ಆಶ್ರಯದಲ್ಲಿ  ಏರ್ಪಟ್ಟಿದ್ದ ಸಮಾರಂಭದಲ್ಲಿ ಬೆಂಗಳೂರಿನ ಶ್ರೀ ಗಣೇಶ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದರು. ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಚೆನ್ನಾಗಿ ಓದಿ ವಿದ್ಯಾವಂತರಾಗಬೇಕು. ಪ್ರತಿಭೆ ಗಳಿಸಿಕೊಳ್ಳಬೇಕು. ಒಳ್ಳೆಯ ಉದ್ಯೋಗ ಪಡೆದುಕೊಳ್ಳಬೇಕು. ಆದರೆ ಅವೆಲ್ಲದರ ಜೊತೆಜೊತೆಯಲ್ಲೇ ತಮ್ಮನ್ನು ಹೆತ್ತು ಸಲಹಿದ ತಂದೆ-ತಾಯಿಯರನ್ನು ಮರೆಯದೆ, ಅವರ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಇದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಅವರು ಕಳಕಳಿಯಿಂದ ನುಡಿದರು.

ನೀವು ಪ್ರತಿಭಾವಂತರಾಗಿ ಜೀವನದಲ್ಲಿ ಯಶಸ್ಸು ಗಳಿಸಬೇಕು. ಆ ರೀತಿ ಯಶಸ್ಸು ಪಡೆಯುವಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಅನೇಕ ಜನರ ಸಹಾಯ-ಸಹಕಾರ ಇರುತ್ತದೆಂಬುದನ್ನು ಯಾವತ್ತೂ ಮರೆಯಬಾರದು. ನೀವು ಯಶಸ್ಸು ಗಳಿಸಿದಂತೆಯೇ ಇತರರೂ ಯಶಸ್ಸು ಗಳಿಸಲು ನೀವು ಕೂಡಾ ಕೊಡುಗೆ ನೀಡಬೇಕೆಂಬುದನ್ನು ಸದಾ ನೆನಪಿನಲ್ಲಿಟ್ಟುಕೊಂಡು ಕಾರ್ಯೋನ್ಮುಖರಾಗಬೇಕು ಎಂದು ಎಂ.ನರಸಿಂಹಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಲ್ಯಾಪ್‌ಟಾಪ್ ವಿತರಣೆ: ಇದೇ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ತುಮಕೂರಿನ ಅನುಷಾ ಮತ್ತು ತಿಪಟೂರಿನ ರಾಹುಲ್ ಭಾರದ್ವಾಜ್ ಅವರಿಗೆ ನರಸಿಂಹಮೂರ್ತಿ ಅವರು ಗಣೇಶ ಚಾರಿಟಬಲ್ ಟ್ರಸ್ಟ್ ವತಿಯಿಂದ ಲ್ಯಾಪ್‌ಟಾಪ್ ಅನ್ನು ಕೊಡುಗೆಯಾಗಿ ವಿತರಿಸಿದರು. ಪಿಯುಸಿ ಮತ್ತು ಪದವಿ ವ್ಯಾಸಂಗದ ಹತ್ತು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯಧನ ಮತ್ತು ನೋಟ್‌ಬುಕ್‌ಗಳನ್ನು ವಿತರಿಸಿದರು.

ನಗರದ 10 ಜನ ಅರ್ಚಕರಿಗೆ, ಅಡುಗೆ ಕೆಲಸಗಾರರಿಗೆ ಆರ್ಥಿಕ ಸಹಾಯಧನದ ಜೊತೆಗೆ ದಿನಸಿ ಕಿಟ್‌ಗಳನ್ನು ನರಸಿಂಹಮೂರ್ತಿ ವಿತರಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!