Saturday, 27th July 2024

ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲು ಆಗ್ರಹಿಸಿ ಮನವಿ

ತುಮಕೂರು: ಸಿರಾ ತಾಲ್ಲೂಕಿನ ಮದಲೂರು ಕೆರೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೇಮಾವತಿ ನಾಲೆಯಿಂದ ನೀರು ಹರಿಸಬೇಕು ಎಂದು ಶಾಸಕ ಡಾ. ಸಿ.ಎಂ. ರಾಜೇಶ್‌ಗೌಡ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಶಾಸಕ ಡಾ. ಸಿ.ಎಂ. ರಾಜೇಶ್‌ಗೌಡ ಅವರು ಕುಡಿಯುವ ನೀರಿಗಾಗಿ ಮದಲೂರು ಕೆರೆ ನೀರು ಹರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ರಾಜೇಶ್‌ಗೌಡ ಅವರು, ಪಟ್ರಾವತನಹಳ್ಳಿ ಎಸ್ಕೇಪ್ ಚಾಲನ್ ಮೂಲಕ ಕಳ್ಳಂಬೆಳ್ಳ ಕೆರೆಗೆ ನೀರು ಹರಿಸುತ್ತಿರುವುದರಿಂದ ಕೆರೆ ಬಹುತೇಕ ತುಂಬುವ ಹಂತದಲ್ಲಿದೆ. ಈ ಬಾರಿ ಮಳೆ ಉತ್ತಮವಾಗಿ ಬಂದಿರುವುದರಿAದ ಪಿಕಪ್‌ಗಳಲ್ಲಿ ನೀರು ಶೇಖರಣೆಯಾಗಿರುವುದರಿಂದ ಕಳ್ಳಂಬೆಳ್ಳ ಮತ್ತು ಸಿರಾ ಕೆರೆ ಬಹುಬೇಗ ಭರ್ತಿಯಾಗುವ ಸಾಧ್ಯತೆ ಇದೆ. ಹಾಗಾಗಿ ಮದಲೂರು ಕೆರೆಗೂ ನೀರು ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮದಲೂರು ಕೆರೆಗೆ ನೀರು ಹರಿಸು ವಂತೆ ಮನವಿ ಮಾಡಲಾಗಿದೆ. ಈ ಇಬ್ಬರು ನಾಯಕರಿಂದ ಸಕಾರಾತ್ಮ ಸ್ಪಂದನೆ ದೊರೆತಿದ್ದು, ನೀರು ಹರಿಸುವ ಭರವಸೆ ನೀಡಿದರು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀರು ಹರಿಸುವಂತೆ ಮನವಿ ಮಾಡಲಾಗಿದೆ ಎಂದರು.

ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪನವರು ಕೊಟ್ಟ ಭರವಸೆಯಂತೆ ನೀರು ಹರಿಸಿದ್ದರು. ಅದೇ ರೀತಿ ಈ ಬಾರಿಯೂ ನೀರು ಹರಿಸುವಂತೆ ಮನವಿ ಮಾಡಲಾಗಿದೆ ಎಂದುತಿಳಿಸಿದರು. ಮದಲೂರು ಕೆರೆಗೆ ನೀರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಒಪ್ಪಿಗೆ ಸೂಚಿಸುವ ವಿಶ್ವಾಸ ಇದೆ ಎಂದ ಅವರು, ಮದಲೂರು ಚಿಕ್ಕಕೆರೆ, ಈ ಕೆರೆಗೆ ನೀರು ಹರಿಸಿದರೆ ಸುಮಾರು 40-50 ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಯಾಗಲಿದೆ ಎಂದರು.

ಕೃಷಿಗೆ ನೀರು ಹರಿಸಿದರೆ ತಾಂತ್ರಿಕ ಸಮಸ್ಯೆಗಳು ಎದುರಾಗಲಿವೆ. ಆದರೆ ಕುಡಿಯುವ ನೀರಿಗೆ ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಾಧೀಕರಣವೇ ಹೇಳಿದೆ. ಹಾಗಾಗಿ ನಾವು ಕೇಳುತ್ತಿರುವುದು ಕುಡಿಯಲು ಮಾತ್ರ ಎಂದರು.

ಈ ಸಂದರ್ಭದಲ್ಲಿ ಹೆಂಜಲಗೆರೆ ಮೂರ್ತಿ, ಹನುಮಂತನಾಯಕ್, ನಟರಾಜು, ನರೇಂದ್ರ, ಮದಲೂರು ಮೂರ್ತಿ ಮಾಸ್ಟರ್, ಮಾರುತೇಶ್, ಮಧು, ರಂಗಸ್ವಾಮಿ, ವಿಜಯರಾಜು, ಸಿ.ಎಲ್.ಗೌಡ, ಬಸವರಾಜು, ಗಿರಿಧರ್, ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!