Saturday, 27th July 2024

ಜನಪ್ರತಿನಿಧಿಗಳು ಜನರ ಕಷ್ಟಕ್ಕೆ ಜತೆಯಾಗಿ ನಿಲ್ಲಬೇಕು: ನಿಖಿಲ್ ಕುಮಾರಸ್ವಾಮಿ

ತುಮಕೂರು: ಗ್ರಾಮಾಂತರ ಜನರ ಕಷ್ಟದಲ್ಲಿ ಜೊತೆಯಾಗಿರುವ ಶಾಸಕ ಡಿ.ಸಿ.ಗೌರಿಶಂಕರ್ ಅವರಂತೆ ಉಳಿದ ಜನಪ್ರತಿನಿಧಿ ಗಳು ಕಾರ್ಯನಿರ್ವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಗ್ರಾಮಾಂತರ ಕ್ಷೇತ್ರದ ಬಳ್ಳಗೆರೆಯಲ್ಲಿ ಬಡವರಿಗೆ ಹಾಗೂ ಕರೋನಾ ವಾರಿಯರ್ಸ್ ಗೆ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕ್ಷೇತ್ರದ ಜನರ ನೆರವಿಗೆ ನಿಲ್ಲಬೇಕಿರುವುದು ಜನಪ್ರತಿನಿಧಿಗಳ ಕೆಲಸ, ಕೊರೋನಾ ಸಂಕಷ್ಟದ ಸಮಯದಲ್ಲಿ ಜನರಿಗೆ ಅವಶ್ಯಕವಿರುವ, ಪಡಿತರ, ಔಷಧವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಿರುವ ಗೌರಿಶಂಕರ್ ಅವರ ಕಾರ್ಯ ಮಾದರಿ ಯಾದದ್ದು ಎಂದರು.

ಸರ್ಕಾರ ಕೋವಿಡ್ ಕೇರ್ ಗಳನ್ನು ಮಾತ್ರ ಮಾಡುತ್ತದೆ, ಅದೆಷ್ಟೋ ಕೋವಿಡ್ ಕೇಂದ್ರಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ ಗೌರಿಶಂಕರ್ ಅವರು ಕೋವಿಡ್ ಕೇಂದ್ರವನ್ನು ಸ್ವಂತ ಹಣದಲ್ಲಿ ಆಕ್ಸಿಜನ್ ಸಹಿತ ಕೇಂದ್ರವನ್ನಾಗಿ ಮಾರ್ಪಡಿ ಸಿರುವುದಲ್ಲದೇ, ಉತ್ತಮವಾಗಿ ನಿರ್ವಹಣೆ ಮಾಡುವ ಮೂಲಕ ಕ್ಷೇತ್ರದ ಜನರಿಗೆ ಆರೋಗ್ಯ ಸೇವೆ ಒದಗಿಸಿರುವುದು ಶ್ಲಾಘನೀಯ ಎಂದರು.

ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ ಕೊರೋನಾ ಅಲೆ ಆಘಾತಕಾರಿಯಾಗಿದ್ದು, ಸಾಕಷ್ಟು ಜನ ಸಾವನ್ನಪ್ಪಿ ದ್ದಾರೆ, ಗ್ರಾಮಾಂತರ ಜನರ ಆರೋಗ್ಯಕ್ಕಾಗಿ ಸರ್ಕಾರದ ಸಹಕಾರದೊಂದಿಗೆ ಕೋವಿಡ್ ಕೇಂದ್ರವನ್ನು ಸ್ಥಾಪಿಸಿ, ವೈಯಕ್ತಿಕ ಹಣದಿಂದ ಅಲ್ಲಿ 32 ಆಕ್ಸಿಜನ್ ಬೆಡ್ ಸ್ಥಾಪಿಸಿ, ಕೋವಿಡ್ ಕೇಂದ್ರದ ನಿರ್ವಹಣೆ ಮಾಡುತ್ತಿದ್ದು, ಕರೋನಾ ಮುಗಿಯುವವರೆಗೆ ಅದನ್ನು ಮುಂದುವರೆಸುವುದಾಗಿ ಹೇಳಿದರು.

ಎರಡನೇ ಅಲೆಗಿಂತ ಮೂರನೇ ಅಲೆ ಭೀಕರವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು ಈ ನಿಟ್ಟಿನಲ್ಲಿ ಬಳ್ಳಗೆರೆಯ ಅತಿಥಿಗೃಹವನ್ನೇ ಸರ್ಕಾರ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ, ಆಕ್ಸಿಜನ್ ಮತ್ತು ಐಸಿಯು ಬೆಡ್ ಮಾಡಲಾಗುವುದು, ಕೊರೋನಾ ಮೂರನೇ ಅಲೆ ಎದುರಿಸಲು ಗ್ರಾಮಾಂತರ ಕ್ಷೇತ್ರದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.

ಕಳೆದ ಸುಮಾರು ತೊಂಭತ್ತು ಸಾವಿರ ಕುಟುಂಬಗಳಿಗೆ ಪಡಿತರವನ್ನು ವಿತರಿಸುವ ಕೆಲಸವನ್ನು ಮಾಡಲಾಗಿತ್ತು, ಈ ಬಾರಿ ಮೂವತ್ತು ಸಾವಿರ ಕುಟುಂಬಗಳಿಗೆ ಪಡಿತರ ನೀಡುವ ಉದ್ದೇಶವನ್ನು ಹೊಂದಿದ್ದು, ನಮ್ಮ ನಾಯಕ ಕುಮಾರಸ್ವಾಮಿ ಅವರ ಪ್ರೇರಣೆಯೊಂದಿಗೆ ಅವರ ಮಾರ್ಗದರ್ಶನದಲ್ಲಿಯೇ ಸೇವೆ ಮಾಡುತ್ತಿರುವುದಾಗಿ ಹೇಳಿದರು.

ಈ ವೇಳೆ ಮುಖಂಡರಾದ ಪಾಲನೇತ್ರಯ್ಯ, ನರುಗನಹಳ್ಳಿ ವಿಜಯಕುಮಾರ್, ಹೆಗ್ಗರೆ ಆಜಂ, ಸಿರಾಕ್ ರವಿ, ವಿಷ್ಣುವರ್ಧನ್, ಬೈರೇಗೌಡ, ತಿಮ್ಮಪ್ಪಗೌಡ, ಬಳ್ಳಗೆರೆ ರಾಜು, ಬೆಳಗುಂಬ ವೆಂಕಟೇಶ್, ಹರಳೂರು ಸುರೇಶ್, ಯೋಗೀಶ್, ಜಯಂತ್, ಕರೇರಂಗಪ್ಪ, ತನ್ವೀರ್, ಹೆತ್ತೇನಹಳ್ಳಿ ಮಂಜುನಾಥ್, ವೆಂಕಟೇಶ್ ಗೌಡ, ಸೇರಿದಂತೆ ಜೆಡಿಎಸ್ ಕಾರ್ಯಕರ್ತರು ಮುಖಂಡರು ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!