Saturday, 27th July 2024

ಮಾಧುಸ್ವಾಮಿ ಅಧಿಕಾರಿಗಳಿಗೆ ನೀಡಿದ ಎಚ್ಚರಿಕೆಗೆ ಸಾರ್ವಜನಿಕರು ಬಹುಪರಾಕ್

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಿ

ವಿಶೇಷ ವರದಿ: ಧನಂಜಯ

ಚಿಕ್ಕನಾಯಕನಹಳ್ಳಿ : ಗುರುವಾರ ತುಮಕೂರಿನಲ್ಲಿ ನೆಡೆದ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿಯವರು ಅಧಿಕಾರಿಗಳಿಗೆ ನೀಡಿದ ಖಡಕ್ ಎಚ್ಚರಿಕೆಗಳಿಗೆ ಬಹುತೇಕ ಸಾರ್ವಜನಿಕರು ಬಹುಪರಾಕ್ ಹೇಳಿದ್ದಾರೆ.

ತುಮಕೂರಿನಲ್ಲಿ ನೆಡೆದ ಕೆಡಿಪಿ ಸಭೆಯ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಸಚಿವರ ಈ ವರ್ತನೆಗೆ ಕೆಲವರು ಶಹಭಾಸ್‌ಗಿರಿ ನೀಡಿದರೆ, ಕೆಲವು ಮಂದಿ ಅವರ ವರ್ತನೆಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಮಾಧುಸ್ವಾಮಿಯವರು ಕೆಲಸಗಾರರಾಗಿದ್ದು, ಸೋಮಾರಿ ಅಧಿಕಾರಿಗಳಿಗೆ ಈ ರೀತಿ ಚಳಿ ಬಿಡಿಸುವುದು ಅವಶ್ಯಕವಾಗಿದೆ. ಸಭೆಯಲ್ಲಿ ಅವರು ಬಳಸಿದ ಪದವನ್ನು ಕೇವಲ ಒಂದು ದ್ಟೃ ಕೋನದಿಂದ ನೋಡದೆ ಆ ಅಧಿಕಾರಿಯ ಕಾರ್ಯ ವೈಖರಿಗೆ ಕ್ಷೇತ್ರದ ಜನ ಯಾವ ರೀತಿ ಬೇಸತ್ತಿರಬೇಕೆಂದು ತಿಳಿಯ ಬೇಕಾಗಿದೆ.

ಯಾವಾಗಲೂ ತನ್ನ ಬದ್ದತೆಗೆ ರಾಜಿ ಮಾಡಿಕೊಳ್ಳದೆ ಕಾರ್ಯ ನಿರ್ವ”ಸುವ ಇವರು ಬಹುತೇಕ ಅಧಿಕಾರಿಗಳಿಗೆ ಬೇಡವಾಗಿದ್ದಾರೆ. ಮುಂಗೋಪ, ದಾರ್ಷ್ಯಕ್ಕೆ ಕಟ್ಟು ಬೀಳದೆ ಇರುವುದು, ಉದ್ದಟತನ, ನೇರ ವ್ಯಕ್ತಿತ್ವ, ಇವುಗಳು ಇವರ ಅಲಂಕಾರವಾಗಿದೆ. ಇದು ವರೆಗೂ ಯಾವುದೇ ವ್ಯಕ್ತಿಯೊಂದಿಗೆ ರಾಜಿ ಮಾಡಿಕೊಂಡ ಉದಾಹರಣೆ ಇವರ ವ್ಯಕ್ತಿತ್ವದಲ್ಲಿ ಸಿಗುವುದಿಲ್ಲ ಎಂದು ಇವರನ್ನು ಹತ್ತಿರದಿಂದ ಬಲ್ಲ ವ್ಯಕ್ತಿಗಳ ನುಡಿಯಾಗಿದೆ.

ಕುಟುಂತ್ತಾ ಸಾಗುತ್ತಿದ್ದ ಹೇಮಾವತಿ ನೀರಿನ ಕಾಮಾಗಾರಿ, ಭದ್ರಾ ಮೇಲ್ದಂಡೆ, ಎತ್ತಿನಹೋಳೆ, ಯೋಜನೆಗಳಿಗೆ ವೇಗವನ್ನು ನೀಡಲು ಮಾಧುಸ್ವಾಮಿಯೇ ಬರಬೇಕಾಯಿತು. ತೀನಂಶ್ರೀ ಭವನ, ಹೊಸಹಳ್ಳಿ ಸಮೀಪ ಸಸ್ಯ ಭವನ ಉದ್ಘಾಟನೆ, ತಾಲ್ಲೂಕಿನ ವಿವಿಧ ಮೂಲೆಗಳಲ್ಲಿ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ, ಹೆದ್ದಾರಿಯ ಅಗಲೀಕರಣ, ತಿಪಟೂರು ರಸ್ತೆಯ ಕಾಮಾಗಾರಿ ಪೂರ್ಣಗೊಳಿಸಿದ್ದು, ಹೇಮಾವತಿ ನೀರನ್ನು ಜನವರಿಯವರೆಗೂ ಹರಿಸಿರುವುದು, ಪುರಸಭಾ ವ್ಯಾಪ್ತಿಯ 250 ನಿವೇಶನಗಳ ಹಂಚಿಕೆಗೆ ಕ್ರಮ ವಹಿಸಿರುವುದು, ಯುಜಿಡಿ ಕಾಮಗಾರಿಗೆ ಹಣ ಬಿಡುಗಡೆ, ನೀರಿನ ಸಂಗ್ರಹಕ್ಕೆ ಬೃಹತ್ ಟ್ಯಾಂಕ್ ನಿರ್ಮಾಣ, ಇವುಗಳು ಇವರ ಅಭಿವೃದ್ದಿ ಕಾರ್ಯಗಳಿಗೆ ಹಿಡಿದ ಕನ್ನಡಿಯಾಗಿದೆ.

ಕೆಲಸ, ಕೆಲಸ, ಕೆಲಸ, ಎಂಬುದೇ ಮಾಧುಸ್ವಾಮಿಯವರ ಮೂಲ ಮಂತ್ರವಾಗಿದೆ. ಅಭಿವೃದ್ದಿಗೆ ವೇಗವನ್ನು ನೀಡಲು ಕೆಲವು ಸಂದರ್ಭಗಳಲ್ಲಿ ಆ ಪದಗಳ ಬಳಕೆ ಅನಿವಾರ್ಯವಾಗಿದೆ. ಸಾವಿರಾರು ರೂಪಾಯಿ ಪಗಾರ ಪಡೆಯವ ಅಧಿಕಾರಿಗಳು ಅವರಿಗೆ ನೀಡಿದ ಕೆಲಸವನ್ನು ಮಾಡದೇ ಅಸಡ್ಡೆ ತೋರಿದಾಗ ಮತ್ತು ಸಚಿವರ ಆದೇಶಕ್ಕೂ ತಲೆ ಬಾಗದೆ ಇದ್ದಾಗ ಅವರಿಗೆ ಬೈಯದೇ ಸನ್ಮಾನ ಮಾಡಬೇಕೆ ಎಂಬುದು ಅವರ ಅಭಿಮಾನಿಗಳ ಅಭಿಪ್ರಾಯವಾಗಿದೆ.

ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡದೆ, ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ. ಇದರಿಂದ ಅಧಿಕಾರಿಗಳು ಸೊಂಪಾಗಿ ಮೇಯು ತ್ತಿದ್ದಾರೆ. ಮೊದಲು ಲೋಕಾಯುಕ್ತಕ್ಕೆ ಬಲ ತುಂಬಿ ಸಚಿವ ಸಂಪುಟದಲ್ಲಿ ಅದರ ವರದಿಯನ್ನು ಸಚಿವರು ಮಂಡಿಸಲಿ ಎಂದು ಲಂಚ ಮುಕ್ತ ವೇದಿಕೆಯ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಮಾಧುಸ್ವಾಮಿ ಯವರ ಈ ನಡೆಗೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!