Saturday, 27th July 2024

‘ರನ್ ವಿಜಯಪುರ ರನ್’ ಯಶಸ್ವಿ

ವಿಜಯಪುರ: ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗೌರವಾರ್ಥ ವೃಕ್ಷಥಾನ್ ಹೆರಿಟೇಜ್ ರನ್ ‘ರನ್ ವಿಜಯ ಪುರ ರನ್’ ಭಾನುವಾರ ಯಶಸ್ವಿಯಾಗಿ ನಡೆಯಿತು. ಸುಮಾರು 10 ಸಾವಿರ ಮಂದಿ ಈ ವೃಕ್ಷಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಒಟ್ಟು 21 ಕಿಲೋ ಮೀಟರ್, 10 ಕಿ.ಮೀ, 5 ಕಿ.ಮೀ, 3.50 ಕಿಮೀ ಮತ್ತು 800 ಮೀಟರ್ ವಿಭಾಗಗಳಲ್ಲಿ ನಡೆದ ವೃಕ್ಷಥಾನ್ ಹೆರಿಟೇಜ್ ಓಟಗಳು ನಡೆದವು.
‘ಬರಿಗಾಲ ಓಟಗಾರ್ತಿ’ ಖ್ಯಾತಿಯ ಪ್ರೀತಿ ಮನೀಶ್, ನಟರಾದ ಮಾಸ್ಟರ್ ಕಿಶನ್ ಮತ್ತು ಗುರುನಂದನ್, ಪುಣೆಯ ಶರದ್ ಚವಾಣ್, ಕಟಪಾಡಿ ಸುಲತಾ ಕಮಾತ್, ಪ್ರಶಾಂತ್ ಹಿಪ್ಪರಗಿ, ರಾಜಿಂದರ್ ಕೌರ್, ವೆಂಕಟೇಶ ಅಡಿಗ, ಸಮೀರ್ ಜೋಶಿ, ಅನಂತರಾಮು ಮುಂತಾದವರು ಇದ್ದರು.
ಉದ್ಘಾಟನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ ಅವರು ಗೋಳಗುಮ್ಮಟದ ಬಳಿ ಮ್ಯಾರಥಾನ್ ಓಟಗಾರರನ್ನು ಸೇರಿಕೊಂಡು ಸುಮಾರು 3 ಕಿ.ಮೀ. ಓಡಿ ನೆರೆದವರನ್ನು ಹುರಿದುಂಬಿಸಿದರು. ಪ್ರತಿವರ್ಷ ಹೆರಿಟೇಜ್ ಕಾರ್ಯಕ್ರಮ ಭಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ವಿಜಯಪುರದ ಹಸುರೀಕರಣದ ಗುರಿಯೊಂದಿಗೆ ಪ್ರತೀವರ್ಷವೂ ಹೆರಿಟೇಜ್ ರನ್ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ವಿಜಯಪುರಕ್ಕೆ ಒಂದು ಬ್ರ್ಯಾಂಡ್ ಮೌಲ್ಯ ಸೃಷ್ಟಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ.
ವಿಜಯಪುರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾವೆದ್ ನಾಗಠಾಣ ಮತ್ತು ಈಶ್ವರ ಕಲಾಲ ಅವರು ಡ್ರೋನ್ ಕ್ಯಾಮರಾ ಬಳಸಿ ಸೃಷ್ಟಿಸಿದ್ದ ವಿಜಯಪುರದ ಪ್ರಾಚೀನ ಸ್ಮಾರಕಗಳು, ದೇವಸ್ಥಾನಗಳು, ವಿಡಿಯೋಗಳನ್ನು ಪ್ರದರ್ಶಿಸಲಾಯಿತು. ಜತೆಗೆ, ನಾನಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದವು. ಹೊರಾಂಗಣದಲ್ಲಿ 15ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಸ್ತು ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!