Friday, 21st June 2024

ಸುಧಾರಣೆ ಕಾರಣ ಸಂಚಾರ ವ್ಯವಸ್ಥೆ

ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತಲೆನೋವು

ಸಿಗ್ನಲ್‌ಗಳಿಗೂ ತಾಂತ್ರಿಕ ತೊಂದರೆ

ವಿಶೇಷ ವರದಿ: ಅರುಣಕುಮಾರ ಹಿರೇಮಠ

ಗದಗ: ಜಿಲ್ಲೆಯಾಗಿ ಎರಡು ದಶಕ ಕಳೆದರೂ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಚಾರ ವ್ಯವಸ್ಥೆ ಮಾತ್ರ ಸುಧಾರಣೆ ಕಂಡಿಲ್ಲ. ಪ್ರಮುಖ ರಸ್ತೆ, ಮಾರುಕಟ್ಟೆ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆೆ ಸರಿಯಿಲ್ಲದ ಕಾರಣ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು
ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ. ಅದರ ಜತೆ-ಜತೆಗೆ ವಾಹನಗಳ ಸಂಖ್ಯೆಯು ದ್ವಿಗುಣಗೊಳ್ಳುತ್ತಿದೆ. ಇದರಿಂದ ಸಂಚಾರ ದಟ್ಟಣೆಯಲ್ಲಿ ಏರಿಕೆ ಕಂಡು ಬರುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ತಲೆನೋವು
ಆರಂಭವಾಗಿದೆ. ಗದಗ ನಗರದಲ್ಲಿ ನಾಲ್ಕು ಸಂಚಾರಿ ಸಿಗ್ನಲ್‌ಗಳಿದ್ದು, ಅದರಲ್ಲಿ ಟಿಪ್ಪು ಸುಲ್ತಾನ್ ವೃತ್ತ, ಮುಳಗುಂದ ನಾಕಾ ಹಾಗೂ ಭೂಮರಡ್ಡಿ ವೃತ್ತದಲ್ಲಿ ಮಾತ್ರ ಸಂಚಾರಿ ಸಿಗ್ನಲ್‌ಗಳು ಕಾರ್ಯನಿರ್ವಹಿಸುತ್ತಿವೆ.

ಮಹಾತ್ಮಾ ಗಾಂಧಿ ವೃತ್ತದಲ್ಲಿ ಅಳವಡಿಸಿರುವ ಸಂಚಾರಿ ಸಿಗ್ನಲ್ ತಾಂತ್ರಿಕ ಕಾರಣಗಳಿಂದ ಕಳೆದ 5 ವರ್ಷಗಳಿಂದ ಬಂದ್
ಆಗಿದೆ. ಗದಗ ನಗರದ ಪ್ರಮುಖ ವೃತ್ತ ಎನಿಸಿಕೊಂಡಿರುವ ಮಹಾತ್ಮಾ ಗಾಂಧಿ ವೃತ್ತದ ಮೂಲಕ ಜಿಲ್ಲೆ ಹಾಗೂ ತಾಲೂಕಿನ
ವಿವಿಧ ಗ್ರಾಮಗಳಿಂದ ಮಾರುಕಟ್ಟೆಗೆ ಸಾರ್ವಜನಿಕರು ಆಗಮಿಸುವುದರಿಂದ ಸಂಚಾರ ದಟ್ಟನೆ ಹೆಚ್ಚಿದ್ದರೂ ಸಂಚಾರಿ ಸಿಗ್ನಲ್
ಸಮಸ್ಯೆ ಮಾತ್ರ ಮುಂದುವರಿದಿದೆ.

2018ರ ಏಪ್ರಿಲ್ 30ರ ವೇಳೆಗೆ ಜಿಲ್ಲೆಯಾದ್ಯಂತ ಬೈಕ್, ಕಾರು, ಟ್ರ್ಯಾಕ್ಟರ್, ಟ್ರಕ್ ಹಾಗೂ ಇತರ ಸೇರಿ 1,54,195 ವಾಹನಗಳಿದ್ದವು. 2021ರ ಫೆ. 28ರ ವರೆಗೆ ಜಿಲ್ಲೆಯಲ್ಲಿ 1,99,755 ವಾಹನಗಳು ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿದ್ದು, ಮೂರು ವರ್ಷಗಳ ಅಂತರದಲ್ಲಿ ಜಿಲ್ಲೆಯಲ್ಲಿ 45,560 ವಾಹನಗಳು ಹೆಚ್ಚಿವೆ. ಅವಳಿ ನಗರ ಸೇರಿ ತಾಲೂಕುವೊದರಲ್ಲಿ 2018ರ ಏಪ್ರಿಲ್ 30ರ ವೇಳೆಗೆ 71,322 ವಾಹನಗಳಿದ್ದರೆ, 2021ರ ಜ. 31ರವರೆಗೆ 99,102 ವಾಹನಗಳಿದ್ದು, ಮೂರು ವರ್ಷಗಳ ಅಂತರದಲ್ಲಿ 27,780 ವಾಹ
ಗಳು ನೋಂದಣಿಯಾಗಿವೆ.

ಜಿಲ್ಲೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಏರಿಕೆಯಾದ 45,560 ವಾಹನಗಳ ಪೈಕಿ ಗದಗ ನಗರ ಹಾಗೂ ತಾಲೂಕಿನೊಂದ ರಲ್ಲಿಯೇ 27,780 ವಾಹನಗಳು ಹೆಚ್ಚಿಕೆಯಾಗಿರುವುದು ಗದಗ-ಬೆಟಗೇರಿ ಅವಳಿ ನಗರದಲ್ಲಿ ರಸ್ತೆ ಸಂಚಾರಕ್ಕೂ ತೊಡಕುಂಟು ಮಾಡಿದೆ.

ತಪ್ಪದ ಸಂಚಾರ ದಟ್ಟಣೆ ಕಿರಿಕಿರಿ: ಜನದಟ್ಟಣೆಯ ಪ್ರದೇಶಗಳಾದ ಮಾರುಕಟ್ಟೆ, ಮಹಾತ್ಮಾ ಗಾಂಧಿ ವೃತ್ತ, ಬಸ್ ನಿಲ್ದಾಣ,
ಜೆಟಿ ಮಠದ ರಸ್ತೆ, ರೋಟರಿ ವೃತ್ತ ಹಾಗೂ ಹಳೆ ಜಿಲ್ಲಾಧಿಕಾರಿ ಕಚೇರಿ ವೃತ್ತದ ಬಳಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನಗರದ
ಪ್ರಮುಖ ಹೋಟೆಲ್‌ಗಳು, ದೊಡ್ಡ ದೊಡ್ಡ ಅಂಗಡಿಗಳ ಮುಂದೆ ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದ ಕಾರಣ ವಾಹನ ಗಳನ್ನು ರಸ್ತೆಯ ಮೇಲೆ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದು ಮಾಮೂಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೂ ತೊಂದರೆ ಉಂಟಾಗುತ್ತದೆ. ನಿತ್ಯ ಸಂಚರಿಸುವ ಸಾವಿರಾರು ಜನರು ಹರಸಾಹಸ ಪಡುವಂತಾಗಿದೆ.

ಆಮೆಗತಿಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿ: ನಗರದ ಭೂಮರಡ್ಡಿ ವೃತ್ತದಿಂದ ಬೆಟಗೇರಿ ಮಾರ್ಗವಾಗಿ ನರಸಾಪೂರ
ಗ್ರಾಮದ ವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ನಗರ ಅಭಿವೃದ್ಧಿ ಯೋಜನೆಯಡಿ ಅನುದಾನವು ಬಿಡುಗಡೆಯಾಗಿದೆ. ರಸ್ತೆ ಪಕ್ಕದಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿ ಚತುಷ್ಪಥ ರಸ್ತೆ
ನಿರ್ಮಾಣಕ್ಕೆ ಅಡಚಣೆ ಉಂಟಾಗುತ್ತಿದೆ. ಇದರಿಂದ ಸುಗಮ ಸಂಚಾರ ಕಷ್ಟವಾಗಿದೆ.

***

ಗದಗ ನಗರದಲ್ಲಿ ವಾಹನಗಳ ಸಂಖ್ಯೆೆ ಹೆಚ್ಚಿದ್ದು, ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಂಚಾರ ಮಾಡುವುದು ಕಷ್ಟಕರವಾಗಿದೆ.
ಸ್ವಲ್ಪ ಜಾಗೃತಿ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಆದ್ದರಿಂದ ಪೊಲೀಸ್ ಇಲಾಖೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸಿಬ್ಬಂದಿ ನೇಮಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು.
-ಅಶೋಕ ಹೊಸೂರ ಗದಗ ನಿವಾಸಿ

ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ರಸ್ತೆಗಳು ಕಿರಿದಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಸಮಸ್ಯೆ ಕಡಿತ ಗೊಳಿಸಲು ಸ್ಟೇಷನ್ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜತೆಗೆ ಮಾರುಕಟ್ಟೆ ಹಾಗೂ ಪ್ರಮುಖ ರಸ್ತೆಗಳಲ್ಲಿ
ಬೆಳಗ್ಗೆ 9 ರಿಂದ ರಾತ್ರಿ 8ರ ವರೆಗೆ ಬೃಹತ್ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನ ಸವಾರರಿಗೆ ಸಂಚಾರಿ ನಿಯಮಗಳನ್ನು ತಿಳಿಹೇಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತಿದೆ.
-ಕಮಲಾಬಾಯಿ ದೊಡ್ಡಮನಿ ಟ್ರಾಫಿಕ್ ಪಿಎಸ್‌ಐ

Leave a Reply

Your email address will not be published. Required fields are marked *

error: Content is protected !!