Saturday, 27th July 2024

ಕಾಫಿ ತೋಟದಲ್ಲಿ ಶ್ವೇತಸುಂದರಿಯದ್ದೇ ಘಮ

ಅಕಾಲಿಕ ಮಳೆಯಿಂದಾಗಿ ಸಕಾಲದಲ್ಲಿ ಅರಳಿರುವ ಹೂ

ಅನೇಕ ವರ್ಷಗಳ ಬಳಿಕ ಕೊಡಗಿನ ಬೆಳೆಗಾರರಲ್ಲಿ ಮಂದಹಾ

ವಿಶೇಷ ವರದಿ: ಅನಿಲ್ ಎಚ್.ಟಿ.

ಮಡಿಕೇರಿ: ಕೊಡಗಿನಲ್ಲಿ ಎಲ್ಲೆಲ್ಲೂ ಕಾಫಿಯ ಹೂ ಅರಳಿದ್ದು, ಹೂವಿನ ಮಕರಂದ ಹೀರಲು ಜೇನುದುಂಬಿಗಳೂ ಕಾಫಿ ತೋಟಗಳಲ್ಲಿ ಹಾರಾಡುತ್ತಿವೆ. ಕಾಫಿ ಗಿಡಗಳಲ್ಲಿ ಮುಂದಿನ ಫಸಲಿನ ಪ್ರತೀಕವಾಗಿ ಹೂವು ಅರಳುವುದನ್ನು ನೋಡುವುದೇ ಬೆಳೆಗಾರರ ಪಾಲಿಗೆ ಹಿತಕರವಾದ ಅನುಭವವಾಗಿದೆ.

ಈ ದಿನಗಳಲ್ಲಿ ತೋಟಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಮಂಜು ಮುಸುಕಿದ ವಾತಾವರಣವಿರುತ್ತದೆ. ಇಂಥ ಆಹ್ಲಾದಕರ ಪರಿಸರ ದಲ್ಲಿ ಗಿಡಗಳಲ್ಲಿ ಅರಳಿ ಕಂಗೊಳಿಸುವ ಬೆಳ್ಳನೆ ಹೂವುಗಳು ತಾವು ಯಾವ ಬೆಡಗಿಯರಿಗೂ ಕಮ್ಮಿಯಿಲ್ಲ ಎಂಬಂತೆ ಹಮ್ಮು ಬಿಮ್ಮಿನಿಂದ ನಗುವಂತೆ ಕಾಣುತ್ತದೆ. ಕಾಫಿ ಹೂ ಅರಳಿದ ತೋಟಗಳಲ್ಲಿ ಹೂವಿನ ಘಮ ಕೂಡ ಹಿತಕರ ಹೂ ಕಂಡಾಗ ಬೆಳೆಗಾರನ ಮನದಲ್ಲಿಯೂ ಸಂಭ್ರಮ ಆ ಹೂವಿನಂತೆಯೇ ಅರಳುತ್ತದೆ.

ಮಳೆ, ಗಾಳಿ, ವಿಕೋಪಗಳಿಗೆ ಇಂಥ ಕಾಫಿ ತೋಟಗಳು, ತೋಟಗಳಲ್ಲಿನ ಉತ್ತಮ ಫಸಲು ನಾಶವಾಗದಿರಲಿ ಎಂಬುದೇ ಕಾಫಿ ನಾಡಿನ ಬೆಳೆಗಾರರ ಪ್ರಾರ್ಥನೆಯಾಗಿದೆ. ಈ ವರ್ಷ ಫೆಬ್ರವರಿ ಮಾಸಾಂತ್ಯದಲ್ಲಿ ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ನಿರೀಕ್ಷೆಗಿಂತ ಬೇಗ ಕಾಫಿ ಗಿಡಗಳಲ್ಲಿ ಕಾಫಿ ಫಸಲಿನ ಮೊಗ್ಗು ಕಂಡುಬಂದು ಹೂ ನಳನಳಿಸಿದೆ.

ಸತತ ಮೂರು ವರ್ಷಗಳಿಂದ ಉತ್ತಮ ಫಸಲು, ನಿರೀಕ್ಷಿತ ಬೆಲೆಯಿಲ್ಲದೇ ಕಂಗೆಟ್ಟು, ಮತ್ತೊಂದೆಡೆ ಪ್ರಾಕೃತಿಕ ವಿಕೋಪ ದಿಂದಲೂ ತಲ್ಲಣಿಸಿದ್ದ ಬೆಳೆಗಾರರು ಈ ವರ್ಷ ತೋಟದಲ್ಲಿ ಕಂಗೊಳಿಸಿರುವ ಹೂವು ಕಂಡು ಆಶಾಭಾವನೆ ತಳೆದಿದ್ದಾರೆ. ಮುಂದಿನ ವರ್ಷವಾದರೂ ಕಾಫಿ ಫಸಲು ಉತ್ತಮವಾಗಿ ದೊರಕೀತು ಎಂಬ ನಿರೀಕ್ಷೆ ಹೊಂದಿದ್ದಾರೆ.

ಮುಂದಿನ 15 ದಿನಗಳೊಳಗಾಗಿ ಮತ್ತೊಂದು ಮಳೆ ಲಭಿಸಿದರೆ ಕಾಫಿ ಹೂವಿಗೆ ಅಗತ್ಯವಾದ ನೀರಿನ ಪೋಷಣೆ ಸಿಕ್ಕಿ ಹೂವು ಬೀಜ ವಾಗಲು ಪುಪ್ಟಿ ನೀಡಿದಂತಾಗುತ್ತದೆ. ಇನ್ನೆರಡು ವಾರಗಳಲ್ಲಿ ಅಗತ್ಯವಾಗಿರುವ ಮಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಕೊಡಗಿನ ಕಾಫಿ ಬೆಳೆಗಾರರಿದ್ದು ಸದ್ಯಕ್ಕೆ ಹೂವು ಅರಳಿರುವ ತೋಟದ ಗಿಡಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.

ತಪ್ಪಿದ ಆರ್ಥಿಕ ಹೊರೆ
ಕೊಡಗಿನಲ್ಲಿಯೇ ಅಂದಾಜು 1.20 ಲಕ್ಷ ಹೆಕ್ಟೇರ್‌ಗಳಷ್ಟು ಕಾಫಿ ತೋಟವಿದ್ದು ಬಹುತೇಕ ತೋಟಗಳಲ್ಲಿ ಹೂ ಅರಳಿರುವು ದರಿಂದಾಗಿ ಕೊಡಗಿನಾದ್ಯಂತ ಸಂಚರಿಸಿದಾಗ ಬಿಳಿ ವರ್ಣದ ಹೂವು ನೋಡುತ್ತಲೇ ಅದರ ಸುವಾಸನೆ ಆಸ್ವಾದಿಸಬಹುದಾಗಿದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ಕಾಫಿಗೆ ಅಗತ್ಯವಾದ ಮಳೆ ಬಾರದೇ ಇದ್ದರೆ ಕೃತಕ ಹನಿ ನೀರಾವರಿ ವಿಧಾನದ ಮೂಲಕ ಕಾಫಿ ಗಿಡಗಳಿಗೆ ನೀರುಣಿಸಬೇಕಾಗಿತ್ತು. ಆದರೆ ಅನೇಕ ವರ್ಷಗಳ ಬಳಿಕ ಈ ವರ್ಷ ಸಕಾಲದಲ್ಲಿ ಮಳೆ ಬಿದ್ದಿರುವುದರಿಂದಾಗಿ ಸ್ಪಿಂಕ್ಲರ್ ಅಥವಾ ಹನಿ ನೀರಾವರಿ ವಿಧಾನದ ಮೂಲಕ ಗಿಡಗಳಿಗೆ ನೀರು ಸಿಂಪಡಿಸುವ ಸಮಸ್ಯೆ ತಪ್ಪಿದೆ. ಇದರಿಂದಾಗಿ ಬೆಳೆಗಾರರಿಗೆ ಆರ್ಥಿಕ ಹೊರೆಯೂ ತಪ್ಪಿದಂತಾಗಿದೆ ಎಂದು ವಿಶ್ವವಾಣಿಗೆ ಕಾಫಿ ಬೆಳೆಗಾರ ಕೆ.ಎಂ.ಉಮೇಶ್ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!