Saturday, 27th July 2024

ಸಶಸ್ತ್ರ ಬಣಗಳ ನಡುವೆ ಘರ್ಷಣೆ: 27 ಮಂದಿ ಸಾವು

ಟ್ರಿಪೋಲಿ: ಲಿಬಿಯಾದ ರಾಜಧಾನಿ ಟ್ರಿಪೋಲಿಯಲ್ಲಿ ಎರಡು ಸಶಸ್ತ್ರ ಬಣಗಳ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸಂಘರ್ಷದಲ್ಲಿ ಒಟ್ಟು 106 ಜನ ಗಾಯಗೊಂಡಿದ್ದಾರೆ ಎಂದು ತುರ್ತು ಸೇವೆಗಳ ವಿಭಾಗ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಟ್ರಿಪೋಲಿಯ ಪ್ರಮುಖ ವಿಮಾನ ನಿಲ್ದಾಣವಾದ ಮಿಟಿಗಾ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಲು ಪ್ರಯತ್ನಿಸುತ್ತಿದ್ದ 444 ಬ್ರಿಗೇಡ್​ನ ಕಮಾಂಡರ್ ಮಹಮೂದ್ ಹಮ್ಜಾ ಅವರನ್ನು ಬಂಧಿಸಿದ ನಂತರ ಸೋಮವಾರ ಘರ್ಷಣೆ ಪ್ರಾರಂಭವಾಗಿದೆ. ವಿಮಾನ ನಿಲ್ದಾಣವನ್ನು ನಿಯಂತ್ರಿಸುವ 444 ಬ್ರಿಗೇಡ್​ನ ಮುಖ್ಯ ಪ್ರತಿಸ್ಪರ್ಧಿಯಾದ ಮತ್ತೊಂದು ವಿಶೇಷ ಭದ್ರತಾ ಪಡೆ ಹಮ್ಜಾನ ನ್ನು ಬಂಧಿಸಿದೆ.

ಹಮ್ಜಾ ಅವರನ್ನು ತಟಸ್ಥ ಗುಂಪಿಗೆ ವರ್ಗಾಯಿಸಲು ಯುಎನ್ ಮಾನ್ಯತೆ ಪಡೆದ ರಾಷ್ಟ್ರೀಯ ಏಕತಾ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಮಂಗಳವಾರ ತಡರಾತ್ರಿ ಘರ್ಷಣೆಗಳು ಕೊನೆಗೊಂಡಿವೆ.

ಟ್ರಿಪೋಲಿಯಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಅದರಿಂದ ನಾಗರಿಕರ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಲಿಬಿಯಾದಲ್ಲಿನ ವಿಶ್ವಸಂಸ್ಥೆಯ ಬೆಂಬಲ ಮಿಷನ್ ಹೇಳಿದೆ.

2011ರಲ್ಲಿ ನ್ಯಾಟೊ ಬೆಂಬಲಿತ ಕ್ರಾಂತಿಯ ನಂತರ ಲಿಬಿಯಾದಲ್ಲಿ ಶಾಂತಿ ಮತ್ತು ನೆಮ್ಮದಿ ಮರೀಚಿಕೆಯಾಗಿವೆ. 2014ರಲ್ಲಿ ಸಂಘರ್ಷ ನಿರತ ಗುಂಪುಗಳು ಪೂರ್ವ ಮತ್ತು ಪಶ್ಚಿಮ ಲಿಬಿಯಾ ಎಂದು ದೇಶವನ್ನು ಇಬ್ಬಾಗ ಮಾಡಿವೆ.

Leave a Reply

Your email address will not be published. Required fields are marked *

error: Content is protected !!