Donald Trump: ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್; ಪ್ರತೀಕಾರ ತೀರಿಸಿಕೊಂಡರೆ ಮತ್ತಷ್ಟು ಏರಿಕೆಯ ಎಚ್ಚರಿಕೆ
ಮುಂದಿನ ತಿಂಗಳು ಕೆನಡಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡಾ 35 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಹೇಳಿದ್ದಾರೆ ಮತ್ತು ಇತರ ಹೆಚ್ಚಿನ ವ್ಯಾಪಾರ ಪಾಲುದಾರರ ಮೇಲೆ ಶೇಕಡಾ 15 ರಿಂದ 20 ರಷ್ಟು ಸಂಪೂರ್ಣ ಸುಂಕ ವಿಧಿಸಲು ಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.


ವಾಷಿಂಗ್ಟನ್: ಮುಂದಿನ ತಿಂಗಳು ಕೆನಡಾದಿಂದ (Canada) ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡಾ 35 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಗುರುವಾರ ಹೇಳಿದ್ದಾರೆ ಮತ್ತು ಇತರ ಹೆಚ್ಚಿನ ವ್ಯಾಪಾರ ಪಾಲುದಾರರ ಮೇಲೆ ಶೇಕಡಾ 15 ರಿಂದ 20 ರಷ್ಟು ಸಂಪೂರ್ಣ ಸುಂಕ ವಿಧಿಸಲು ಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬಿಡುಗಡೆ ಮಾಡಿದ ಪತ್ರದಲ್ಲಿ, ಟ್ರಂಪ್ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರಿಗೆ ಹೊಸ ದರ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 1, 2025 ರಿಂದ ಜಾರಿಗೆ ಬರಲಿರುವ ಹೊಸ ಸುಂಕವು ಅಮೆರಿಕಕ್ಕೆ ಪ್ರವೇಶಿಸುವ ಕೆನಡಾದ ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಉಳಿದ ವ್ಯಾಪಾರ ಪಾಲುದಾರರ ಮೇಲೆ ಶೇ.15 ಅಥವಾ ಶೇ.20 ರಷ್ಟು ಸಂಪೂರ್ಣ ಸುಂಕ ವಿಧಿಸಲು ಯೋಜಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ. ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಲಾದ ಅಧಿಕೃತ ಪತ್ರದಲ್ಲಿ, ಟ್ರಂಪ್ ಅವರು ಸುಂಕ ಏರಿಕೆಗೆ ಕಾರಣಗಳನ್ನು ವಿವರಿಸಿದ್ದಾರೆ , ಕೆನಡಾ ಪ್ರಮುಖ ವಿಷಯಗಳಲ್ಲಿ ಸಹಕರಿಸಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ, ವಿಶೇಷವಾಗಿ ಅಮೆರಿಕಕ್ಕೆ ಫೆಂಟನಿಲ್ ಹರಿವು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳು ಎಂದು ಅವರು ವಿವರಿಸಿದ್ದಾರೆ.
ಇಲ್ಲಿಯವರೆಗೆ, ಟ್ರಂಪ್ 22 ದೇಶಗಳಿಗೆ ಹೊಸ ಸುಂಕ ದರಗಳನ್ನು ವಿವರಿಸುವ ಪತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಜಪಾನ್, ಸೌತ್ ಕೊರಿಯಾ, ಮಯನ್ಮಾರ್, ಲಾವೋಸ್, ಥಾಯ್ಲೆಂಡ್, ಸೌತ್ ಆಫ್ರಿಕಾ, ಬಾಂಗ್ಲಾದೇಶ, ಕಜಕಸ್ತಾನ್, ಇಂಡೋನೇಷ್ಯಾ, ಟುನಿಶಿಯಾ, ಮಲೇಷ್ಯಾ, ಸರ್ಬಿಯಾ, ಕಾಂಬೋಡಿಯಾ, ಬೋಸ್ನಿಯಾ ಹರ್ಜೆಗೊವಿನಾ ದೇಶಗಳಿಗೆ ಅಮೆರಿಕ ಹೊಸ ಆಮದು ಸುಂಕಗಳನ್ನು ಪ್ರಕಟಿಸಿದೆ. ಆಗಸ್ಟ್ 1ರಿಂದ ಇದು ಚಾಲನೆಗೆ ಬರುತ್ತದೆ.
ಈ ಸುದ್ದಿಯನ್ನೂ ಓದಿ: Donald Trump: ಟ್ರಂಪ್ ಶಾಂತಿ ದೂತ; ಅಮೆರಿಕ ಅಧ್ಯಕ್ಷರನ್ನು ನೊಬೆಲ್ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದ ನೆತನ್ಯಾಹು
ಸದ್ಯಕ್ಕೆ ಭಾರತವು ಕಳೆದ ಕೆಲ ವಾರಗಳಿಂದ ಅಮೆರಿಕದ ಜೊತೆ ವ್ಯಾಪಾರ ಒಪ್ಪಂದ ಕುದುರಿಸಲು ನಿರಂತರ ಮಾತುಕತೆಯಲ್ಲಿ ತೊಡಗಿದೆ. ಇತ್ತೀಚೆಗಷ್ಟೇ ಭಾರತದಿಂದ ನಿಯೋಗವೊಂದು ಅಮೆರಿಕಕ್ಕೆ ಹೋಗಿ ಬಂದಿತ್ತು. ಒಪ್ಪಂದದ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಭಾರತ ಹೇಳಿತ್ತು. ಡೊನಾಲ್ಡ್ ಟ್ರಂಪ್ ಕೂಡ ಇದನ್ನು ಪುನರುಚ್ಚರಿಸಿದ್ದಾರೆ.