Donald Trump: ಟ್ರಂಪ್ ಶಾಂತಿ ದೂತ; ಅಮೆರಿಕ ಅಧ್ಯಕ್ಷರನ್ನು ನೊಬೆಲ್ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದ ನೆತನ್ಯಾಹು
ಸೋಮವಾರ ಮೂರನೇ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ. ಉಭಯ ನಾಯಕರ ಭೇಟಿಯ ಸಮಯದಲ್ಲಿ, ಗಾಜಾ ಯುದ್ಧವನ್ನು ಕೊನೆಗೊಳಿಸುವಂತೆ ಟ್ರಂಪ್ ನೆತನ್ಯಾಹು ಅವರನ್ನು ಒತ್ತಾಯಿಸುವ ಸಾಧ್ಯತೆಯಿದೆ.


ವಾಷಿಂಗ್ಟನ್: ಸೋಮವಾರ ಮೂರನೇ ಸಭೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ. ನೆತನ್ಯಾಹು ಟ್ರಂಪ್ ಅವರನ್ನು ಅರ್ಹ ಎಂದು ಕರೆದಿದ್ದಾರೆ. ನೊಬೆಲ್ ಪ್ರಶಸ್ತಿ ಸಮಿತಿಗೆ ಕಳುಹಿಸಿದ ಪತ್ರವನ್ನು ಟ್ರಂಪ್‌ಗೆ ಹಸ್ತಾಂತರಿಸಿದ ಇಸ್ರೇಲಿ ಪ್ರಧಾನಿ, "ನೀವು ಅದನ್ನು ಪಡೆಯಬೇಕು" ಎಂದು ಹೇಳಿದರು.
ಅಧ್ಯಕ್ಷರೇ, ನಾನು ನೊಬೆಲ್ ಪ್ರಶಸ್ತಿ ಸಮಿತಿಗೆ ಕಳುಹಿಸಿದ ಪತ್ರವನ್ನು ನಿಮ್ಮ ಮುಂದೆ ಪ್ರಸ್ತುತಪಡಿಸಲು ಬಯಸುತ್ತೇನೆ. ಇದು ನಿಮ್ಮನ್ನು ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತಿದೆ, ಅದು ಅರ್ಹವಾಗಿದೆ, ಮತ್ತು ನೀವು ಅದನ್ನು ಪಡೆಯಬೇಕು" ಎಂದು ಅವರು ಹೇಳಿದ್ದಾರೆ. ಉಭಯ ನಾಯಕರ ಭೇಟಿಯ ಸಮಯದಲ್ಲಿ, ಗಾಜಾ ಯುದ್ಧವನ್ನು ಕೊನೆಗೊಳಿಸುವಂತೆ ಟ್ರಂಪ್ ನೆತನ್ಯಾಹು ಅವರನ್ನು ಒತ್ತಾಯಿಸುವ ಸಾಧ್ಯತೆಯಿದೆ. ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮದ ಕುರಿತು ಕತಾರ್‌ನಲ್ಲಿ ಪರೋಕ್ಷ ಮಾತುಕತೆ ನಡೆಸಿದ ನಂತರ ಈ ಬೆಳವಣಿಗೆ ನಡೆದಿದೆ.
ಇತ್ತ ಇರಾನ್ ಹಾಗೂ ಇಸ್ರೇಲ್ ನಡುವೆ ಕದನ ವಿರಾಮ ಏರ್ಪಟ್ಟಿದೆ. ನಿಯಮವನ್ನು ಉಲ್ಲಂಘಿಸಿ ಪರಮಾಣು ನೆಲೆಗಳ ಸ್ಥಾಪನೆಗೆ ಮತ್ತೆ ಮುಂದಾದರೆ ಇರಾನ್ ಮೇಲೆ ಮತ್ತೆ ದಾಳಿ ನಡೆಸಲು ಟ್ರಂಪ್ ಇಸ್ರೇಲ್‌ಗೆ ಅನುಮತಿ ನೀಡಬಹುದು ಎಂದು ವರದಿಗಳು ತಿಳಿಸಿವೆ. ಜೂನ್ 24 ರಂದು ಟ್ರಂಪ್ ಮಧ್ಯಸ್ಥಿಕೆಯ ಕದನ ವಿರಾಮಕ್ಕೆ ಸಹಿ ಹಾಕಲಾಗಿದ್ದರೂ, ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಮತ್ತೆ ಹಳಿಗೆ ತರಲು ಪ್ರಯತ್ನಿಸಿದರೆ ಮತ್ತಷ್ಟು ಮಿಲಿಟರಿ ದಾಳಿಗಳ ಸಾಧ್ಯತೆಗೆ ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಪಾಕಿಸ್ತಾನವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಔಪಚಾರಿಕವಾಗಿ ನಾಮನಿರ್ದೇಶನ ಮಾಡಿತ್ತು. ಭಾರತ-ಪಾಕಿಸ್ತಾನ ಸೇನಾ ಉದ್ವಿಗ್ನತೆಯ ಸಂದರ್ಭದಲ್ಲಿ ಟ್ರಂಪ್ ಅವರ ರಾಜತಾಂತ್ರಿಕ ಮಧ್ಯಸ್ಥಿಕೆಯಿಂದ ಕದನ ವಿರಾಮ ಸಾಧ್ಯವಾಯಿತು ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಅವರಿಗೆ ಟ್ರಂಪ್ ಶ್ವೇತಭವನದಲ್ಲಿ ಔತಣಕೂಟ ಏರ್ಪಡಿಸಿದ ಬೆನ್ನಲ್ಲೇ ಈ ನಾಮನಿರ್ದೇಶನ ಘೋಷಣೆಯಾಗಿದೆ. ಟ್ರಂಪ್ ಮತ್ತು ಮುನೀರ್ ನಡುವಿನ ಸಭೆಯ ವಿವರಗಳು ಬಹಿರಂಗಗೊಂಡಿಲ್ಲವಾದರೂ, ಮುನೀರ್ ಈಗಾಗಲೇ ಟ್ರಂಪ್ ಅವರ ನೊಬೆಲ್ ನಾಮನಿರ್ದೇಶನವನ್ನು ಬೆಂಬಲಿಸಿದ್ದಾರೆ. ಪಾಕಿಸ್ತಾನವು ಎಕ್ಸ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, “2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಜೆ. ಟ್ರಂಪ್ ಅವರನ್ನು ಔಪಚಾರಿಕವಾಗಿ ನಾಮನಿರ್ದೇಶನ ಮಾಡಲು ಸರ್ಕಾರ ನಿರ್ಧರಿಸಿದೆ” ಎಂದು ತಿಳಿಸಿದೆ.
ಅಮೆರಿಕದ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿ ಮೈಕೆಲ್ ರೂಬಿನ್, ಟ್ರಂಪ್‌ರ ನೊಬೆಲ್ ಆಸೆಯ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ, “ಟ್ರಂಪ್ ಇತಿಹಾಸವನ್ನು ಅರ್ಥಮಾಡಿಕೊಳ್ಳುವುದಿಲ್ಲ. ನೊಬೆಲ್ ಪ್ರಶಸ್ತಿಯ ದುರಾಸೆಯಿಂದ ಅವರು ಅಮೆರಿಕದ ಭದ್ರತೆಗೆ ಅಪಾಯವನ್ನುಂಟುಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.