Murder Case: ಮನೆ ಕಟ್ಟಲು ನಿವೃತ್ತಿ ಹಣ ತೆಗೆದುಕೊಂಡು ಬರುತ್ತಿದ್ದ ಶಿಕ್ಷಕರ ಹತ್ಯೆ, ಹಣ ದರೋಡೆ
Murder Case: ಮನೆ ಕಟ್ಟಲು ನಿವೃತ್ತಿ ಹಣ ತೆಗೆದುಕೊಂಡು ಬರುತ್ತಿದ್ದ ಶಿಕ್ಷಕರ ಹತ್ಯೆ, ಹಣ ದರೋಡೆ
ಹರೀಶ್ ಕೇರ
December 4, 2024
ಬೆಂಗಳೂರು: ಕನಸಿನ ಮನೆ ಕಟ್ಟುವ ಉದ್ದೇಶಕ್ಕಾಗಿ ಬ್ಯಾಂಕ್‌ನಿಂದ ತಮ್ಮ ನಿವೃತ್ತಿಯ ಹಣವನ್ನು ವಿತ್‌ಡ್ರಾ ಮಾಡಿ ಮರಳುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳು ಕೊಲೆ (Murder Case) ಮಾಡಿ ಹಣವನ್ನು ದೋಚಿದ್ದಾರೆ. ಈ ಕೃತ್ಯ ಬೆಂಗಳೂರು ಗ್ರಾಮಾಂತರ (Bengaluru crime news) ಜಿಲ್ಲೆಯ ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿ ನಡೆದಿದೆ.
ನಿವೃತ್ತ ಶಿಕ್ಷಕ ಹನುಮಂತರಾಯಪ್ಪ ಕೊಲೆಗೀಡಾದವರು. ಅವರ ಬಳಿ ಇದ್ದ ಮೂರು ಲಕ್ಷ ರೂ. ಹಣದೊಂದಿಗೆ ಪಾತಕಿಗಳು ಪರಾರಿಯಾಗಿದ್ದಾರೆ. ಹನುಮಂತರಾಯಪ್ಪ ಅವರು ವೃತ್ತಿಯಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದರು. ನಿವೃತ್ತಿಯಿಂದ ಬಂದಿದ್ದ ಹಣವನ್ನು ನೆಲಮಂಗಲದ ಘೋರಘಟ್ಟ ಗ್ರಾಮದ ಬಳಿಯ ಕೆನರಾ ಬ್ಯಾಂಕ್‌ನಿಂದ ಡ್ರಾ ಮಾಡಿಕೊಂಡು ಬರುತ್ತಿರುವಾಗ ದುಷ್ಕರ್ಮಿಗಳು ಅಡ್ಡಹಾಕಿ ದೊಣ್ಣೆಯಿಂದ ಹೊಡೆದ ಕೊಂದು ಹಣ ಸಮೇತ ಓಡಿಹೋಗಿದ್ದಾರೆ.
ಮನೆಯನ್ನು ಕಟ್ಟಿಸುತ್ತಿದ್ದ ಶಿಕ್ಷಕ, ಸುಮಾರು ಮೂರು ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಒಂದಷ್ಟು ವಸ್ತುಗಳನ್ನು ಖರೀದಿಸಿ ಹೊರಟಿದ್ದರು. ಬ್ಯಾಂಕ್‌ನಿಂದ ಅವರನ್ನು ಹಿಂಬಾಲಿಸಿಕೊಂಡು ಬಂದ ಅಪರಿಚಿತ ಖದೀಮ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬೈಕ್‌ನಿಂದ ಅವರು ಕೆಳಗೆ ಬೀಳುತ್ತಿದ್ದಂತೆ ದೊಣ್ಣೆಯಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿ ಹಣ ಎಗರಿಸಿ ಪರಾರಿಯಾಗಿದ್ದಾನೆ.
ಮೃತ ಹನುಮಂತರಾಯಪ್ಪ ತಮ್ಮ ಏಕೈಕ ಪುತ್ರಿ ಹೇಮಲತಾಗೆಂದು ತಮ್ಮ ನಿವೃತ್ತಿಯಿಂದ ಬಂದಿದ್ದ ಹಣದಲ್ಲಿ ಮನೆ ಕಟ್ಟಿಸಿ ಕೊಡುತ್ತಿದ್ದರು. ದೊಡ್ಡಬಳ್ಳಾಪುರದ ಕುರುಬರಹಳ್ಳಿಯಲ್ಲಿ ಮನೆ ಕಟ್ಟಲು ಪಾಯ ಹಾಕಲಾಗಿತ್ತು. ತ್ಯಾಮಗೊಂಡ್ಲು ಕೆನರಾ ಬ್ಯಾಂಕ್‌ನಲ್ಲಿ ಹಣ ತೆಗೆದುಕೊಂಡು ಮನೆಗೆ ಬೇಕಾದ ರೇಷನ್, ಗ್ಯಾಸ್ ತಗೊಂಡು ಟಿವಿಎಸ್ ಮೊಪೆಡ್‌ನಲ್ಲಿ ಬರುತ್ತಿದ್ದಾಗ ದುಷ್ಕರ್ಮಿ ದೊಣ್ಣೆಯಿಂದ ಹೊಡೆದು ಕೊಂದಿದ್ದಾನೆ.
ಕೊಲೆ ನಡೆದ ಜಾಗಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲಿಸಿದರು. ಬಳಿಕ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತ ದೇಹವನ್ನು ಹಸ್ತಾಂತರಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಪೊಲೀಸರು ಅದಷ್ಟು ಬೇಗ ಕೊಲೆಗಾರರನ್ನ ಬಂಧಿಸಬೇಕು ಎಂದು ಮೃತ ಹನುಮಂತರಾಯಪ್ಪ ಅಳಿಯ ನಾಗೇಶ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Murder Case: ಬೆಂಗಳೂರಲ್ಲಿ ಮತ್ತೊಬ್ಬ ಯುವತಿಯ ಬರ್ಬರ ಹತ್ಯೆ; ಪ್ರೇಯಸಿಯನ್ನೇ ಚಾಕು ಇರಿದು ಕೊಂದ ಪ್ರಿಯಕರ!