Nelamangala News: ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಗುಣಮಟ್ಟ ಪರಿಶೀಲಿಸಿದ ಶಾಸಕ ಎನ್.ಶ್ರೀನಿವಾಸ್
ನೆಲಮಂಗಲದ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಗುಣಮಟ್ಟ ಪರಿಶೀಲನೆ ನಡೆಸಿದ ಶಾಸಕ ಎನ್.ಶ್ರೀನಿವಾಸ್ ಅವರು, ಶುಚಿ ಹಾಗೂ ರುಚಿಕರ ಆಹಾರ ವಿತರಣೆಗೆ ಆದ್ಯತೆ ನೀಡಲು ಸಿಬ್ಬಂದಿಗೆ ಸೂಚನೆ ನೀಡಿದರು.
Prabhakara R
January 3, 2025
ನೆಲಮಂಗಲ: ಕಡಿಮೆ ಬೆಲೆಯಲ್ಲಿ ನಗರ ಪ್ರದೇಶಗಳಲ್ಲಿನ ಬಡಜನರ ಹಸಿವು ತಣಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿದೆ. ಈ ನಿಟ್ಟಿನಲ್ಲಿ ನೆಲಮಂಗಲ ನಗರದಲ್ಲಿ (Nelamangala News) ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್‌ಗೆ ಶಾಸಕ ಶ್ರೀನಿವಾಸ್ ಅವರು ದಿಢೀರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಆಹಾರ ಗುಣಮಟ್ಟ ಪರಿಶೀಲನೆ ನಡೆಸಿದ ಶಾಸಕರು, ಶುಚಿ ಹಾಗೂ ರುಚಿಕರ ಆಹಾರ ವಿತರಣೆಗೆ ಆದ್ಯತೆ ನೀಡಲು ಸಿಬ್ಬಂದಿಗೆ ಸೂಚನೆ ನೀಡಿದರು. ಅಲ್ಲದೆ ಸಾರ್ವಜನಿಕರ ಜತೆ ಊಟ ಸವಿದ ಅವರು, ಕ್ಯಾಂಟೀನ್‌ನಲ್ಲಿ ವಿತರಣೆಯಾಗುತ್ತಿರುವ ಊಟದ ಬಗ್ಗೆ ಅಭಿಪ್ರಾಯಗಳನ್ನು ಪಡೆದರು.
ಇದೇ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅವರ ನಾಯಕತ್ವದಲ್ಲಿ ಬಡವರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಅನುಕೂಲವಾಗಲು ಇಂದಿರಾ ಕ್ಯಾಂಟೀನ್ ಮೂಲಕ ಕೇವಲ ಐದು ರೂಪಾಯಿಗೆ ಊಟ, ಉಪಾಹಾರ ನೀಡುತ್ತಿರುವುದು ರಾಷ್ಟ್ರಕ್ಕೆ ಮಾದರಿ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Turuvekere News: ಗಣಿಗಾರಿಕೆಯಿಂದ ರಂಗನಾಥ ಸ್ವಾಮಿ ದೇವಾಲಯ ಉಳಿಸಲು ಆಗ್ರಹ
ಬಸ್ ಟಿಕೆಟ್ ದರ ಏರಿಕೆ ಸಹಜ ಪ್ರಕ್ರಿಯೆ ಎಂದ ಸಚಿವ ಭೋಸರಾಜು
ಕೊಪ್ಪಳ: ಯಾವುದೇ ಸರಕಾರ ಇದ್ದರೂ ಪ್ರತಿ 3 ವರ್ಷಕ್ಕೊಮ್ಮೆ ಬಸ್ ಪ್ರಯಾಣ ದರ (Bus Fare Hike) ಏರಿಕೆ ಮಾಡಲಾಗುತ್ತದೆ. ಗ್ಯಾರಂಟಿ ಯೋಜನೆಗೂ ಬಸ್ ಪ್ರಯಾಣ ದರ ಪರಿಷ್ಕರಣೆಗೂ ಸಂಬಂಧ ಇಲ್ಲ ಎಂದು ಟಿಕೆಟ್ ದರ ಏರಿಕೆಯನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೊಸರಾಜು (N. S. Bosaraju) ಸಮರ್ಥಿಸಿಕೊಂಡರು.
ಕೊಪ್ಪಳ ತಾಲೂಕು ನಾರಾಯಣಪೇಟೆ ಗ್ರಾಮದ ಬಳಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ನಿಯಮಾನುಸಾರ ಬಸ್ ದರ ಏರಿಕೆ ಮಾಡಲಾಗಿದೆ. ಡೀಸೆಲ್ ಸೇರಿ ವಾಹನಗಳ ಬಿಡಿ ಭಾಗಗಳ ಬೆಲೆ ಏರಿಕೆಯಾಗಿದೆ. ಸಾರಿಗೆ ನೌಕರರ ವೇತನ ಹೆಚ್ಚಿಸಬೇಕು. ಇದಕ್ಕೆಲ್ಲ ಎಲ್ಲಿಂದ ಹಣ ತರಬೇಕು? ಎಂದು ಪ್ರಶ್ನಿಸಿದ ಸಚಿವರು, ಗ್ಯಾರಂಟಿ ಯೋಜನೆಗೆ ಸರಕಾರದಿಂದ ಪ್ರತ್ಯೇಕ ಹಣ ಮೀಸಲಿಡಲಾಗಿದೆ ಎಂದರು.
ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆ ಸಿಎಂ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸಂಕ್ರಾಂತಿ ನಂತರ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಬಗ್ಗೆ ಮತ್ತೊಂದು ಸಭೆ ನಡೆಸಲಾಗುವುದು ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಡೆತ್ ನೋಟ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಇಲ್ಲ. ಬಿಜೆಪಿಗರು ರಾಜಕೀಯಕ್ಕಾಗಿ ಮಾತನಾಡುತ್ತಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಅರೆಸ್ಟ್ ಆಗಿದ್ದರು. ಹಾಗಂತ ಜೋಶಿ ರಾಜೀನಾಮೆ ಕೊಟ್ಟರಾ? ಆರ್. ಅಶೋಕ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ ಮೇಲೆ ಆರೋಪಗಳಿದ್ದವು, ಆದರೂ ಅವರು ಯಾರೂ ರಾಜೀನಾಮೆ ಕೊಟ್ಟಿಲ್ಲ. ಸರಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ತನಿಖೆಯಾಗಿ ವರದಿ ಬರಲಿ ಎಂದರು ಖರ್ಗೆ ಪರ ಬ್ಯಾಟ್ ಬೀಸಿದರು.
ಸಿಎಂ ಸಿದ್ದರಾಮಯ್ಯ ಪ್ರತ್ಯೇಕ ಸಭೆ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ಯಾಬಿನೆಟ್ ಸಭೆ ಇತ್ತು. ಸಭೆ ನಂತರ ಹೊಸ ವರ್ಷದ ಹಿನ್ನೆಲೆ ಊಟಕ್ಕೆ ಸೇರಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಸಚಿವ ಸಂಪುಟ ಪುನರ್ ರಚನೆ ಕುರಿತ ವದಂತಿ ಬಗ್ಗೆ ಪ್ರತಿಕ್ರಿಯಿಸಿ, ನನಗೆ ತಿಳಿದಂತೆ ಹಿರಿಯ ಸಚಿವರನ್ನು ಸಂಪುಟದಿಂದ ಕೈ ಬಿಡುವುದಿಲ್ಲ. ಖಾಲಿ ಇರುವ ಖಾತೆ ಮಾತ್ರ ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಿಎಂ ಸಿದ್ಧರಾಮಯ್ಯ ಉತ್ತಮ ಯೋಜನೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಅಧಿಕಾರ ಹಂಚಿಕೆ ಹೈಕಮಾಂಡ್ ಗೆ ಬಿಟ್ಟ ವಿಚಾರ.| ಎನ್. ಎಸ್. ಭೋಸರಾಜು, ಸಚಿವ
ಈ ಸುದ್ದಿಯನ್ನೂ ಓದಿ | Engineer Self Harming: ಸರಣಿ ಆತ್ಮಹತ್ಯೆಗೆ ಮತ್ತೊಂದು ಸೇರ್ಪಡೆ; ಗದಗದಲ್ಲಿ ಇಂಜಿನಿಯರ್ ಆತ್ಮಹತ್ಯೆ