Aeroindia 2025: ಏರ್ ಶೋ ಹಿನ್ನೆಲೆ ಈ ದಿನಗಳಲ್ಲಿ ಬೆಂಗಳೂರು ಏರ್‌ಪೋರ್ಟ್ ವಿಮಾನ ಹಾರಾಟದಲ್ಲಿ ವ್ಯತ್ಯಯ
Aeroindia 2025: ಫೆಬ್ರವರಿ 5 ರಿಂದ ಫೆಬ್ರವರಿ 14 ರವರೆಗೆ ಪ್ರತಿದಿನ ಕೆಲವು ಗಂಟೆಗಳ ಕಾಲ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ. ಪ್ರಯಾಣಿಕರು ವಿಮಾನ ವೇಳಾಪಟ್ಟಿಗಳ ಪರಿಷ್ಕೃತ ಅಥವಾ ನವೀಕರಿಸಿದ ವಿವರಗಳಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ 2025 (Aeroindia 2025) ನಡೆಯುವ ಹಿನ್ನೆಲೆಯಲ್ಲಿ ಫೆಬ್ರವರಿ 5 ರಿಂದ ಫೆಬ್ರವರಿ 14 ರವರೆಗೆ ಪ್ರತಿದಿನ ಕೆಲವು ಗಂಟೆಗಳ ಕಾಲ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಯಾನ ಪ್ರದೇಶ ಮುಚ್ಚಲ್ಪಡಲಿದೆ. ಹೀಗಾಗಿ ವಿಮಾನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಲಿದೆ.
ಈ ಬಗ್ಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಕಟಣೆ ಹೊರಡಿಸಿದ್ದು, ಪ್ರಯಾಣಿಕರು ವಿಮಾನ ವೇಳಾಪಟ್ಟಿಗಳ ಪರಿಷ್ಕೃತ ಅಥವಾ ನವೀಕರಿಸಿದ ವಿವರಗಳಿಗಾಗಿ ಆಯಾ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. ವಿಮಾನ ವೇಳಾಪಟ್ಟಿಯ ನವೀಕೃತ ಮಾಹಿತಿಗೆ ಅನುಸಾರವಾಗಿ ತಮ್ಮ ಆಗಮನ ಮತ್ತು ನಿರ್ಗಮನವನ್ನು ಯೋಜಿಸಲು ನಾವು ವಿನಂತಿ ಮಾಡುತ್ತೇವೆ ಎಂದು ತಿಳಿಸಿದೆ.
ಯಾವಾಗ ವ್ಯತ್ಯಯವಾಗಲಿದೆ?
ಫೆ. 5 ರಿಂದ 8: ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5ರವರೆಗೆ
ಫೆ. 9: ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ
ಫೆ.10: ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2ರಿಂದ 4ರವರೆಗೆ
ಫೆ. 11 ಮತ್ತು 12: ಮಧ್ಯಾಹ್ನ 12ರಿಂದ 3ರವರೆಗೆ
ಫೆ. 13 ರಿಂದ 14: ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5ರವರೆಗೆ
ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ 2025ರ ನಿಮಿತ್ತ ಫೆಬ್ರವರಿ 5 ರಿಂದ ಫೆಬ್ರವರಿ 14, 2025 ರವರೆಗೆ ಪ್ರತಿದಿನ ಕೆಲವು ಗಂಟೆಗಳ ಕಾಲ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಯಾನ ಪ್ರದೇಶ ಮುಚ್ಚಲ್ಪಡಲಿದ್ದು, ಪ್ರಯಾಣಿಕರು ವಿಮಾನ ವೇಳಾಪಟ್ಟಿಗಳ ಪರಿಷ್ಕೃತ ಅಥವಾ ನವೀಕರಿಸಿದ ವಿವರಗಳಿಗಾಗಿ ಆಯಾ ವಿಮಾನಯಾನ… pic.twitter.com/57iYH5uaIt
— ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (@blrairport_kn) January 21, 2025
ಯಲಹಂಕದ 14 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಬಂದ್
ಬೆಂಗಳೂರು: ಏರೋ ಇಂಡಿಯಾ-2025 ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಜನವರಿ 23 ರಿಂದ ಫೆಬ್ರವರಿ 17 ರವರೆಗೆ ನಗರದ ಹೊರವಲಯದ ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಒಂದು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಬಿಬಿಎಂಪಿ ನೀಡಿದೆ.
ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿಯಲ್ಲಿ ಏರ್ ಶೋ ಇರುವುದರಿಂದ ಯಲಹಂಕದ 14 ಕಿಮೀ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧಿಸಿ ಪಾಲಿಕೆ ಆದೇಶಿಸಿದೆ. ನಿಮಯ ಉಲ್ಲಂಘನೆ ಮಾಡಿದರೆ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯಲಹಂಕ ವಲಯ ಜಂಟಿ ಆಯುಕ್ತರಿಂದ ಸೂಚನೆ ನೀಡಿದ್ದಾರೆ.
ಜನವರಿ 23 ರಿಂದ ಫೆಬ್ರವರಿ 17 ರವರೆಗೆ ಯಲಹಂಕ ವಾಯುನೆಲೆಯ ಸುತ್ತ 13 ಕಿ.ಮೀ ವ್ಯಾಪ್ತಿಯೊಳಗಿನ ಮಾಂಸದ ಅಂಗಡಿಗಳು ಮತ್ತು ಮಾಂಸಾಹಾರಿ ರೆಸ್ಟೋರೆಂಟ್‌ಗಳನ್ನು ಬಂದ್ ಮಾಡುವಂತೆ ಹಾಗೂ ಕ್ರೇನ್ಗಳನ್ನು ಬಳಸದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಸೂಚನೆ ನೀಡಿದೆ.
ಈ ಸುದ್ದಿಯನ್ನೂ ಓದಿ | Hindu Janajagruti Samiti: ಪ್ರಯಾಗರಾಜ್‌ನ ಮಹಾಕುಂಭಮೇಳದಲ್ಲಿ ಹಿಂದೂ ಜನಜಾಗೃತಿ ಸಮಿತಿಯ 'ಹಿಂದೂ ಏಕತಾ ಪಾದಯಾತ್ರೆ'
ಯಲಹಂಕ ವಾಯುನೆಲೆಯಲ್ಲಿ ರಿಹರ್ಸಲ್ಗಾಗಿ ವಿಮಾನಗಳು ಹಾರಾಟ ನಡೆಸಲಿವೆ. ಈ ವೇಳೆ ವಿಮಾನಗಳಿಗೆ ಪಕ್ಷಿಗಳು ಡಿಕ್ಕಿ ಹೊಡೆಯುವುದನ್ನು ತಡೆಗಟ್ಟಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.