IND vs ENG: ಇಂಗ್ಲೆಂಡ್ ತಂಡದಲ್ಲಿರುವ ಆರ್‌ಸಿಬಿ ಆಟಗಾರರಿಗೆ ಅಶ್ವಿನ್ ಮೆಚ್ಚುಗೆ!
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ (ಜನವರಿ 22) ದಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20ಐ ಸರಣಿ ಆರಂಭವಾಗಲಿದೆ. ಇದರ ನಡುವೆ ಭಾರತ ತಂಡದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್ ತಂಡದ ಆಟಗಾರರಾದ ಫಿಲ್ ಸಾಲ್ಟ್ ಹಾಗೂ ಜಾಕೋಬ್ ಬೆಥಲ್ ಆಟವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಕೋಲ್ಕತಾ: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟಿ20ಐ ಸರಣಿಯ ನಿಮಿತ್ತ ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್ ತಂಡದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಾದ ಫಿಲ್ ಸಾಲ್ಟ್ ಹಾಗೂ ಜಾಕೋಬ್ ಬೆಥೆಲ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಫಿಲ್ ಸಾಲ್ಟ್ ಚುಟುಕು ಕ್ರಿಕೆಟ್‌ನ ಬಹುಮೌಲ್ಯ ಆಟಗಾರರಾಗಿದ್ದಾರೆ ಎಂದು ತಮ್ಮದೇ ಯುಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನ್ ಗುಣಗಾನ ಮಾಡಿದ್ದಾರೆ.
ಭಾರತ ಪ್ರವಾಸಕ್ಕೂ ಮುನ್ನ ಫಿಲ್ ಸಾಲ್ಟ್ ಅವರು ಎಲ್‌ಐಟಿಯಲ್ಲಿ ಅಬುಧಾಬಿ ನೈಟ್ ರೈಡರ್ಸ್ ತಂಡದ ಪರ ಆಡಿದ್ದರು. ಆರಂಭಿಕ ಪಂದ್ಯದಲ್ಲಿ ಡೆಸರ್ಟ್ ವೈಪರ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ (71* ರನ್) ಸಿಡಿಸಿದ್ದರು. ಆದರೆ, ನಂತರದ ಪಂದ್ಯಗಳಲ್ಲಿ ಅವರು ಸತತ ವೈಫಲ್ಯ ಕಂಡಿದ್ದರು.
IND vs ENG 1st T20I: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ!
ಫಿಲ್ ಸಾಲ್ಟ್ ಬಹುಮೌಲ್ಯ ಆಟಗಾರ: ಅಶ್ವಿನ್
"ಫಿಲ್ ಸಾಲ್ಟ್ ಅವರು ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ಬಹುಮೌಲ್ಯ ಆಟಗಾರ ಎಂದು ಹೇಳಬಹುದು. ಅವರು ಎಲ್‌ಐಟಿಯಲ್ಲಿ ಅಬುಧಾಬಿ ಕಿಂಗ್ಸ್ ಪರ ಆಡಿದ್ದರು. ಅವರು ಮೊದಲ ಪಂದ್ಯದಲ್ಲಿ 70 ರನ್ ಗಳಿಸಿದ್ದರೂ, ನಂತರ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಭಾರತ ಪ್ರವಾಸಕ್ಕೆ ಬಂದಿದ್ದಾರೆ," ಎಂದು ಮಾಜಿ ಸ್ಪಿನ್ನರ್ ಹೇಳಿದ್ದಾರೆ.
ಬೆಥೆಲ್ ಆಟ ನೋಡಲು ಎದುರು ನೋಡುತ್ತಿದ್ದೇನೆ
ಇಂಗ್ಲೆಂಡ್‌ನ ಯುವ ಎಡಗೈ ಆಟಗಾರ ಜಾಕೋಬ್ ಬೆಥೆಲ್ ಸಾಕಷ್ಟು ಕುತೂಹಲ ಮೂಡಿಸಿದ್ದು, ಅವರ ಬ್ಯಾಟಿಂಗ್ ನೋಡಲು ಎದುರು ನೋಡುತ್ತಿದ್ದೇನೆ ಎಂದು ರವಿಚಂದ್ರನ್ ಅಶ್ವಿನ್ ತಿಳಿಸಿದ್ದಾರೆ.
"ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಯುವ ಆಟಗಾರ (ಜಾಕೋಬ್ ಬೆಥೆಲ್) ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಅದೇ ರೀತಿ ವೈಟ್ ಬಾಲ್ ಕ್ರಿಕೆಟ್‌ನಲ್ಲೂ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅವರಲ್ಲಿ ಏನಾದರೂ ಸಾಧಿಸಬಲ್ಲ ಸಾಮರ್ಥ್ಯ ಅಡಗಿದೆ. ಭಾರತ ವಿರುದ್ಧದ ಸರಣಿಯಲ್ಲಿ ಈತನ ಆಟವನ್ನು ನೋಡಲು ನಾನು ಸೇರಿದಂತೆ ಸಾಕಷ್ಟು ಮಂದಿ ಕಾಯುತ್ತಿದ್ದಾರೆ " ಎಂದು ಮಾಜಿ ಸ್ಪಿನ್ನರ್ ಹೇಳಿದ್ದಾರೆ.
Champions Trophy ಟೂರ್ನಿಗೆ ಭಾರತದ ಪ್ಲೇಯಿಂಗ್ XI ಆರಿಸಿದ ಆರ್ ಅಶ್ವಿನ್!
ಬೆಥೆಲ್‌ಗೆ ಉತ್ತಮ ಭವಿಷ್ಯವಿದೆ
"ಒಂದು ವೇಳೆ ನೀವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಯಾಗಿದ್ದರೆ, ಜಾಕೋಬ್ ಬೆಥೆಲ್ ಕಡೆ ಗಮನಹರಿಸಿ. ಭವಿಷ್ಯದಲ್ಲಿ ಅವರು ದೊಡ್ಡ ಆಟಗಾರರಾಗುತ್ತಾರೆ," ಎಂದು ರವಿಚಂದ್ರನ್ ಅಶ್ವಿನ್ ಭವಿಷ್ಯ ನುಡಿದ್ದಾರೆ.
2025ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ನ 18ನೇ ಆವೃತ್ತಿಯ ಅಂಗವಾಗಿ ನಡೆದ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ಫಿಲ್ ಸಾಲ್ಟ್‌ಗೆ 11.50 ಕೋಟಿ ರೂ ಹಾಗೂ ಜಾಕೋಬ್ ಬೆಥೆಲ್‌ಗೆ 2.5 ಕೋಟಿ ರೂ ನೀಡಿ ಖರೀದಿಸಿತ್ತು.
ಮೊದಲ ಟಿ20ಐ ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ XI
ಬೆನ್ ಡಕೆಟ್, ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮಿ ಓವರ್ಟನ್, ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಮಾರ್ಕ್ ವುಡ್