Balenciaga Bubble Outfit Fashion: ವೈರಲ್ ಆಯ್ತು ಪ್ಯಾಕಿಂಗ್‌ಗೆ ಬಳಸುವ ಬಬಲ್ ವ್ರಾಪ್ ಔಟ್‌ಫಿಟ್!
ದುಬಾರಿ ಹೈ ಫ್ಯಾಷನ್‌ಗೆ ಸೇರಿದ ಪ್ರತಿಷ್ಟಿತ ಬ್ಯಾಲೆನ್ಸಿಯಾಗ ಕಂಪನಿಯು ಬಿಡುಗಡೆಗೊಳಿಸಿದ ಬಬಲ್ ವ್ರಾಪರ್ ಔಟ್ಫಿಟ್ (Balenciaga Bubble Outfit Fashion) ಫೋಟೋ ಹಾಗೂ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಹಾಗಾದಲ್ಲಿ,ಇದ್ಯಾವ ಬಗೆಯ ಔಟ್‌ಫಿಟ್? ಇಲ್ಲಿದೆ ಡಿಟೇಲ್ಸ್.
Vishwavani News
January 5, 2025
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದುವರೆಗೂ ಪ್ಯಾಕಿಂಗ್‌ಗೆ ಬಳಸಲಾಗುತ್ತಿದ್ದ ಪಾರದರ್ಶಕ ಬಬಲ್ ವ್ರಾಪ್ ಇದೀಗ ಔಟ್‌ಫಿಟ್ ರೂಪ ಪಡೆದಿದೆ. ಅರರೆ, ಇದೇನಿದು? ಪ್ಯಾಕಿಂಗ್‌ಗೆ ಬಳಸುವ ವ್ರಾಪರ್‌ನಿಂದ ಔಟ್‌ಫಿಟ್ಟಾ ಎಂದು ಅಚ್ಚರಿಪಡುತ್ತಿದ್ದೀರಾ! ಆದರೆ, ಇದು, ನಿಜ. ಅಷ್ಟು ಮಾತ್ರವಲ್ಲ, ಈ ಬಬಲ್ ವ್ರಾಪರ್ ಔಟ್‌ಫಿಟ್ (Balenciaga Bubble Outfit Fashion), ಪ್ಲಾನ್ ಮಾಡಿ ಡಿಸೈನ್ ಮಾಡಿ ಬಿಡುಗಡೆಗೊಳಿಸಿರುವುದು ಅಂತಿಥಹ ಕಂಪನಿಯಲ್ಲ! ಬದಲಿಗೆ ಹೈ ಫ್ಯಾಷನ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬ್ಯಾಲೆನ್ಸಿಯಾಗ ಕಂಪನಿ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.
ಚಿತ್ರಕೃಪೆ: ಮಸ್ಟ್ಶೇರ್ ನ್ಯೂಸ್ & Znwr.store
ಹೌದು, ಆಗಾಗ್ಗೆ ಊಹೆಗೂ ಮೀರಿದ ಫಂಕಿ ಫ್ಯಾಷನ್ ಬ್ಯಾಗ್ ಹಾಗೂ ಔಟ್‌ಫಿಟ್‌ಗಳನ್ನು ಬಿಡುಗಡೆಗೊಳಿಸಿ ಫ್ಯಾಷನ್ ಪ್ರಿಯರನ್ನು ನಿಬ್ಬೆರಗಾಗಿಸಿರುವ ಈ ಕಂಪನಿ ಇದೀಗ ಈ ಹೊಸ ವರ್ಷದ ಇವ್‌ಗೆಂದು ಮತ್ತೊಂದು ಫ್ಯಾಷನ್ ಔಟ್‌ಫಿಟ್ ಬಿಡುಗಡೆಗೊಳಿಸಿ, ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡಿದೆ.
ಏನಿದು ಬಬಲ್ ವ್ರಾಪ್ ಔಟ್‌ಫಿಟ್
ಯಾವುದೇ ವಸ್ತುವನ್ನು ಪ್ಯಾಕಿಂಗ್ ಮಾಡುವಾಗ ಬಳಸುವ, ಅದುವಿದಾಗ ಚಟ್‌ಪಟ್ ಎನ್ನುವ ಸಾಮಾನ್ಯ ಬಬಲ್ ಹೊಂದಿರುವ ಪ್ಲಾಸ್ಟಿಕ್ ಶೈಲಿಯ ವ್ರಾಪ್ ಈ ಔಟ್‌ಫಿಟ್‌ನ ಫ್ಯಾಬ್ರಿಕ್‌ನಂತೆ ಬಳಸಲಾಗಿದೆ. ಹಾಗೆಂದು ಇದರ ಬೆಲೆ ಕಡಿಮೆಯೇನಿಲ್ಲ! ಆನ್‌ಲೈನ್‌ನಲ್ಲೂ ಬಿಡುಗಡೆಗೊಂಡಿರುವ ಈ ಔಟ್‌ಫಿಟ್ ಅದರಲ್ಲೂ ಜಾಕೆಟ್ ಬೆಲೆ ಸರಿ ಸುಮಾರು 116 ಡಾಲರ್ ಬೆಲೆ ಎಂದು ಟ್ಯಾಗ್ ಲೈನ್‌ನಲ್ಲೆ ನಮೂದಿಸಲಾಗಿದೆ. ಇದರೊಂದಿಗೆ ಬಾಡಿಕಾನ್ ಸ್ಲಿವ್ಲೆಸ್ ಡ್ರೆಸನ್ನು ಬಿಡುಗಡೆಗೊಳಿಸಲಾಗಿದೆ.
ವೈರಲ್ ಆಗಿದ್ದು ಹೇಗೆ?
ಫ್ಯಾಷನ್ ಪ್ರಿಯ ಮಹಿಳೆಯೊಬ್ಬಳು ಮಿಂಕ್ಸ್ ಮಾಲ್‌ವೊಂದರ ಶಾಪ್‌ವೊಂದರಲ್ಲಿ ಹೊಸ ವರ್ಷಕ್ಕೆ ಶಾಪಿಂಗ್ ಮಾಡುವಾಗ ಈ ಔಟ್‌ಫಿಟ್ ಆಕೆಯ ಕಣ್ಣಿಗೆ ಬಿದ್ದಿದೆ. ಈ ವಿಚಿತ್ರ ಬಬಲ್ ವ್ರಾಪರ್ ಔಟ್‌ಫಿಟ್ ನೋಡಿದ ಆಕೆ ಟಿಕ್‌ಟಾಕ್‌ನಲ್ಲಿ, ತೋರಿಸುತ್ತಾ ಶೂಟ್ ಮಾಡಿದ ವಿಡಿಯೋ ಫ್ಯಾಷನ್ ಪ್ರಿಯರನ್ನು ಮಾತ್ರವಲ್ಲ, ಎಲ್ಲರನ್ನು ನಿಬ್ಬೆರಗಾಗುವಂತೆ ಮಾಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಆನ್‌ಲೈನ್ ಸ್ಟೋರ್‌ನಲ್ಲೂ ಲಭ್ಯ
ಇನ್ನು, ನೀವೇನಾದರೂ ಈ ಬಬಲ್ ಡ್ರೆಸ್ ಹಾಗೂ ಬಬಲ್ ಜಾಕೆಟ್ ಖರೀದಿಸುವುದಾದಲ್ಲಿ, ಲಭ್ಯವಿರುವ ಆನ್‌ಲೈನ್ ಶಾಪ್‌ಗೆ ವಿಸಿಟ್ ಮಾಡಿ, ದುಬಾರಿ ಬೆಲೆ ತೆತ್ತರೆ ಸಾಕು! ನಿಮ್ಮ ಮನೆ ಬಾಗಿಲಿಗೆ ತಲುಪುತ್ತದೆ ಎನ್ನುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್.
ಈ ಸುದ್ದಿಯನ್ನೂ ಓದಿ | Glopixs: ಡಿಜಿಟಲ್ ಮನರಂಜನೆ ಕ್ಷೇತ್ರಕ್ಕೆ ಗ್ಲೋಪಿಕ್ಸ್ ಒಟಿಟಿ; ಲೋಗೊ ಅನಾವರಣ
ಒಟ್ಟಿನಲ್ಲಿ, ಹೈ ಫ್ಯಾಷನ್ ಹೆಸರಲ್ಲಿ, ಊಹೆಗೂ ಮೀರಿದ ಡಿಸೈನ್‌ನ ವಿಚಿತ್ರ ಔಟ್‌ಫಿಟ್‌ಗಳನ್ನು ಬಿಡುಗಡೆಗೊಳಿಸುವುದರಲ್ಲಿ ಬ್ಯಾಲೆನ್ಸಿಯಾಗ ಸದಾ ಮುಂದಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)