Narahari Tirtha Aradhana: ಹಂಪಿ ನರಹರಿತೀರ್ಥರ ಆರಾಧನೆ; ಸೌಹಾರ್ದಯುತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಲು ಸಿದ್ಧ ಎಂದ ಸುಬುಧೇಂದ್ರ ತೀರ್ಥ ಶ್ರೀ
Narahari Tirtha Aradhana: ಹಂಪಿ ತುಂಗಭದ್ರಾ ನದಿ ತೀರದಲ್ಲಿರುವ ನರಹರಿ ತೀರ್ಥರ ಬೃಂದಾವನದ ಪೂಜೆಗಾಗಿ ಉತ್ತರಾದಿಮಠ ಮತ್ತು ರಾಯರ ಮಠದ ನಡುವಿನ ಜಟಾಪಟಿ ನಡುವೆ ಸ್ಥಳದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಧಾರವಾಡ ಹೈಕೋರ್ಟ್ ಸೋಮವಾರ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಮಠದಿಂದ ಬುಧವಾರ ಉತ್ತರಾರಾಧನೆ ನೆರವೇರಿಸಲಾಗಿದೆ.
ವಿಜಯನಗರ: ಹಂಪಿ ನರಹರಿತೀರ್ಥರ ಸನ್ನಿಧಿಯಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಮಠದಿಂದ ಬುಧವಾರ ಉತ್ತರಾರಾಧನೆ ನೆರವೇರಿಸಲಾಯಿತು. ಶ್ರೀ ಸುಬುಧೇಂದ್ರ ತೀರ್ಥರು, ನರಹರಿ ತೀರ್ಥರ ಬೃಂದಾವನ ಸನ್ನಿಧಿಯಲ್ಲಿ ಮೂಲ ರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿದರು.
ಆರಾಧನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ಸುಬುಧೇಂದ್ರ ತೀರ್ಥರು, ನಮಗೆ ಆರಾಧನೆ ಮಾಡಲು ಕೋರ್ಟ್ ಅವಕಾಶ ನೀಡಿದೆ. ನಾವೇನೂ ಇಲ್ಲಿ ಸಂಭ್ರಮಾಚರಣೆ ಮಾಡುತ್ತಿಲ್ಲ, ನಮಗೆ ಕಾನೂನು ಪ್ರಕಾರ ಆರಾಧನೆಗೆ ಅವಕಾಶ ದೊರೆತಿದೆ. ನಮ್ಮ ಮಠವು ಎಂದಿಗೂ ದ್ವೇಷ ಸಾಧಿಸಲ್ಲಾ, ಪ್ರೀತಿ ಸಹಬಾಳ್ವೆಯಿಂದಲೇ ನಾವು ಮುನ್ನಡೆಯುತ್ತೇವೆ. ಪರ ಮಠದವರಿಗೂ ನಾವು ಜತೆಗೂಡಿ ಆರಾಧನೆ ಮಾಡೋಣ ಅಂತ ಆಹ್ವಾನ ಮಾಡಿದ್ದೇವೆ. ಪರ ಮಠದಂತೆ ನಾವಷ್ಟೇ ಮಾಡಬೇಕು ಎಂಬ ಅಭಿಪ್ರಾಯ ನಮ್ಮದಲ್ಲ ಎಂದು ತಿಳಿಸಿದರು.
ನಾವು ಎಂದಿಗೋ ನ್ಯಾಯಾಲಯದ ಮೆಟ್ಟಿಲು ನಾವಾಗಿಯೇ ಹತ್ತಲ್ಲ, ಪರ ಮಠದವರು ನಮ್ಮನ್ನು ಕೋರ್ಟ್‌ಗೆ ಎಳೆದಾಗ ನಾವು ಉತ್ತರ ಕೊಟ್ಟಿದ್ದೇವೆ. ನಾವು ಕೂಡಿ ಹೋಗಲು ಸಿದ್ಧರಿದ್ದೇವೆ. ಎರಡು ಮಠಗಳು ಸೌಹಾರ್ದಯುತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಉಭಯ ಮಠಗಳನ್ನು ಕೂಡಿಸಿಕೊಂಡು, ವ್ಯಾಜ್ಯ ಬಗೆಹರಿಸಿದರೆ, ನಾವು ಅದಕ್ಕೂ ಸಿದ್ಧ ಎಂದರು.
ಉನ್ನತ ಮಟ್ಟದ ಸ್ವಾಮೀಜಿಗಳು, ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಮಾಧ್ಯಮದವರೂ ಕೂಡ ಗೌರವಯುತವಾಗಿ ವೇದಿಕೆ ಸಿದ್ಧ ಮಾಡಿದ್ರೆ ನಾವು ವ್ಯಾಜ್ಯ ಬಗೆಹರಿಸಿಕೊಳ್ಳಲು ತಯಾರಿದ್ದೇವೆ. ನಮ್ಮ ಮಂತ್ರಾಲಯದ ಶ್ರೀ ಮಠ ಎಂದಿಗೂ ತಯಾರಾಗಿರುತ್ತದೆ ಎಂದರು.
ಈ ಸುದ್ದಿಯನ್ನೂ ಓದಿ | Roopa Gururaj Column: ಮೂರು ಉಳಿಸುವ ಸ್ವಾರ್ಥದಿಂದ ಆರು ನಷ್ಟ
ಹಂಪಿ ತುಂಗಭದ್ರಾ ನದಿ ತೀರದಲ್ಲಿರುವ ನರಹರಿ ತೀರ್ಥರ ಬೃಂದಾವನದ ಪೂಜೆಗಾಗಿ ಉತ್ತರಾದಿಮಠ ಮತ್ತು ರಾಯರ ಮಠದ ನಡುವಿನ ಜಟಾಪಟಿ ನಡುವೆ ಸ್ಥಳದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಧಾರವಾಡ ಹೈಕೋರ್ಟ್ ಸೋಮವಾರ ಆದೇಶ ನೀಡಿತ್ತು.
ರಾಯರ ಮಠಕ್ಕೆ ನ್ಯಾಯಾಲಯದಿಂದ ಹಾಕಿದ ನಿರ್ಬಂಧವನ್ನು ಹೈಕೋರ್ಟ್ ಇತ್ತೀಚೆಗೆ ತೆರವು ಮಾಡಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಉತ್ತಾರಾದಿ ಮಠದವರು ಮತ್ತೆ ಕೋರ್ಟ್ ಮೊರೆ ಹೋಗಿದ್ದರು. ಇದನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಯಥಾಸ್ಥಿತಿ ಕಾಪಾಡುವಂತೆ ತೀರ್ಪು ನೀಡಿತ್ತು.