CID Dysp KanakaLakshmi: ವಕೀಲೆ ಜೀವಾ ಆತ್ಮಹತ್ಯೆ: ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮೀ ಬಂಧನ
2024ರ ನ. 22ರಂದು ಬೆಂಗಳೂರಿನಲ್ಲಿ ವಕೀಲೆ ಜೀವಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಎಸ್‌ಐಟಿ ಅಧಿಕಾರಿಗಳು, ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮೀ ಅವರನ್ನು ಬಂಧಿಸಿದ್ದಾರೆ. ವಕೀಲೆ ಜೀವಾ ಡೆತ್‌ನೋಟ್‌ನಲ್ಲಿ ಕನಕಲಕ್ಷ್ಮೀ ಹೆಸರು ಉಲ್ಲೇಖಿಸಿದ್ದರಿಂದ ಅದಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮೀ.

ಬೆಂಗಳೂರು: ವಕೀಲೆ ಜೀವಾ (Advocate Jeeva) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ (ಮಾ. 11) ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮೀ (Dysp KanakaLakshmi) ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಕರ್ನಾಟಕ ಭೋವಿ ನಿಗಮ ಹಗರಣದ ತನಿಖೆ ಎದುರಿಸಿದಾಗ ಕನಕಲಕ್ಷ್ಮೀ ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದಲ್ಲದೆ, 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ವಕೀಲೆ ಜೀವಾ 13 ಪುಟಗಳ ಡೆತ್‌ನೋಟ್ ಬರೆದಿಟ್ಟು 2024ರ ನ. 22ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಜೀವಾ ಸಹೋದರಿ ಸಂಗೀತಾ ದೂರು ನೀಡಿದ್ದರು. ಇದೀಗ ಈ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಕನಕಲಕ್ಷ್ಮೀ ಅವರನ್ನು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಭೋವಿ ನಿಗಮದ ಅಕ್ರಮದ ತನಿಖೆಯನ್ನು ಕಾಂಗ್ರೆಸ್ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಅದರಂತೆ ಕನಕಲಕ್ಷ್ಮೀ ತನಿಖೆ ಕೈಗೆತ್ತಿಕೊಂಡು ಬೋವಿ ನಿಗಮದ ಫಲಾನುಭವಿಗಳಿಗೆ ಮೆಟಿರಿಯಲ್ ಪೂರೈಸಿದ ಆರೋಪದ ಮೇಲೆ 34 ವರ್ಷದ ವಕೀಲೆ ಜೀವಾ ಅವರನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಜೀವಾ ಬೆಂಗಳೂರಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು.
ಈ ಸುದ್ದಿಯನ್ನೂ ಓದಿ: Hampi Horror: ಹಂಪಿ ಗ್ಯಾಂಗ್‌ರೇಪ್ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ, ಇವರೇ ಆ ಪಾಪಿಗಳು!
ಡೆತ್‌ನೋಟ್‌ನಲ್ಲಿ ಏನಿತ್ತು?
ಈ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯ ಸಾಕ್ಷಿಯಾಗಿ ಸಿಕ್ಕಿದ್ದು ಜೀವಾ ಬರೆದಿಟ್ಟಿದ್ದ ಡೆತ್‌ನೋಟ್. 13 ಪುಟಗಳ ಡೆತ್‌ನೋಟ್‌ನಲ್ಲಿ ಅವರು ಕನಕಲಕ್ಷ್ಮೀ ವಿರುದ್ಧ ಗಂಭೀರ ಆರೋಪ ಹೊರಿಸಿದ್ದರು. ಸಿಐಡಿ ವಿಚಾರಣೆ ವೇಳೆ ಅವಮಾನವಾಗಿದ್ದು, ಮಾನಸಿಕವಾಗಿ ನೊಂದಿರುವುದಾಗಿ ತಿಳಿಸಿದ್ದರು. ಜೀವಾ ಅವರ ಸಹೋದರಿ ಸಂಗೀತಾ ಕೂಡ ಕನಕಲಕ್ಷ್ಮೀ ವಿರುದ್ಧ ದೂರು ನೀಡಿದ್ದರು.
ದೂರಿನಲ್ಲಿ 2024ರ ನ. 14 ಮತ್ತು 21ರ ನಡುವೆ ಕನಕಲಕ್ಷ್ಮೀ ವಿಚಾರಣೆಗಾಗಿ ಜೀವಾ ಅವರನ್ನು ಕರೆದಿದ್ದರು. ಈ ವೇಳೆ ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದಲ್ಲದೆ, 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಉಲ್ಲೇಖಿಸಲಾಗಿತ್ತು. ಬನಶಂಕರಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದರು.