HD Kumaraswamy: ನಿತಿನ್ ಗಡ್ಕರಿ ಭೇಟಿಯಾಗಿ ರಾಜ್ಯ ಹೆದ್ದಾರಿ ಯೋಜನೆಗಳ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಚರ್ಚೆ
ರಾಜ್ಯದ ವಿವಿಧ ಹೆದ್ದಾರಿ ಯೋಜನೆಗಳ ಬಗ್ಗೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು, ಹಲವಾರು ಮನವಿಗಳನ್ನು ಸಲ್ಲಿಸಿ ಆದಷ್ಟು ಬೇಗ ಕ್ರಮ ವಹಿಸುವಂತೆ ಕೋರಿದರು. ಈ ಕುರಿತ ವಿವರ ಇಲ್ಲಿದೆ.
Vishwavani News
January 8, 2025
ನವದೆಹಲಿ: ರಾಜ್ಯದ ವಿವಿಧ ಹೆದ್ದಾರಿ ಯೋಜನೆಗಳ ಬಗ್ಗೆ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು, ಹಲವಾರು ಮನವಿಗಳನ್ನು ಸಲ್ಲಿಸಿ ಆದಷ್ಟು ಬೇಗ ಕ್ರಮ ವಹಿಸುವಂತೆ ಕೋರಿದರು.
ನವದೆಹಲಿಯಲ್ಲಿ ಬುಧವಾರ ಬೆಳಗ್ಗೆ ನಿತಿನ್ ಗಡ್ಕರಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಎಚ್.ಡಿ. ಕುಮಾರಸ್ವಾಮಿ ಅವರು, ರಾಜ್ಯದಲ್ಲಿ ಹಲವಾರು ಹೆದ್ದಾರಿ ಯೋಜನೆಗಳ ಅಭಿವೃದ್ಧಿ ಆಗಬೇಕಿದ್ದು, ಆ ಬಗ್ಗೆ ಕ್ರಮ ವಹಿಸಬೇಕು ಎಂದು ಹತ್ತಕ್ಕೂ ಹೆಚ್ಚು ಯೋಜನೆಗಳ ಮನವಿ ಪತ್ರಗಳನ್ನು ಸಲ್ಲಿಸಿದರು. ಈ ಪೈಕಿ ಕೆಲ ಯೋಜನೆಗಳ ಬಗ್ಗೆ ತಕ್ಷಣವೇ ಖುದ್ದಾಗಿ ಗಮನ ಹರಿಸುವುದಾಗಿ ಸಚಿವ ನಿತಿನ್ ಗಡ್ಕರಿ ಅವರು ಭರವಸೆ ನೀಡಿದರು.
ಈ ಸುದ್ದಿಯನ್ನೂ ಓದಿ | ISRO Chairman: ಇಸ್ರೋ ಹೊಸ ಸಾರಥಿಯಾಗಿ ವಿ.ನಾರಾಯಣನ್; ಇವರ ಹಿನ್ನೆಲೆ ಏನು? ಇಲ್ಲಿದೆ ಡಿಟೇಲ್ಸ್
ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು ಮುಂತಾದ ಜಿಲ್ಲೆಗಳ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ಸಾರಿಗೆ ಸಚಿವರ ಜತೆ ಎಚ್.ಡಿ. ಕುಮಾರಸ್ವಾಮಿ ಅವರು ಸಮಾಲೋಚನೆ ನಡೆಸಿದರು. ನಮ್ಮ ಮನವಿಗೆ ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ ಸಾರಿಗೆ ಸಚಿವರು, ಎಲ್ಲಾ ಯೋಜನೆಗಳ ಬಗ್ಗೆ ಖುದ್ದು ಗಮನ ಹರಿಸುವುದಾಗಿ ಸಚಿವ ನಿತಿನ್ ಗಡ್ಕರಿ ಅವರು ಭರವಸೆ ನೀಡಿದರು ಎಂದು ಅವರು ತಿಳಿಸಿದ್ದಾರೆ.
ಮಂಡ್ಯದ ಹೊರ ವರ್ತುಲ ರಸ್ತೆ
ಮಂಡ್ಯ ಹೆದ್ದಾರಿಯ ಬೈಪಾಸ್ ರಸ್ತೆ ಅಗಲೀಕರಣ ಮಾಡುವುದು, ಅದರ ವೈಟ್ ಟ್ಯಾಪಿಂಗ್ ಹಾಗೂ NH-275 ರಲ್ಲಿರುವ ಮಂಡ್ಯ ನಗರದ ಎಲ್ಲಾ ಜಂಕ್ಷನ್ಗಳು, ಪಾದಚಾರಿ ಮಾರ್ಗಗಳನ್ನೂ ಅಭಿವೃದ್ಧಿ ಮಾಡಬೇಕು ಎಂದು ಅವರು ಕೋರಿದರು. ಮಂಡ್ಯ ಹೆದ್ದಾರಿಯ ಬೈಪಾಸ್ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಹಳ್ಳದಿಣ್ಣೆ ಬಿದ್ದು ವಾಹನ ಸವಾರರಿಗೆ ಬಹಳಷ್ಟು ತೊಂದರೆ ಆಗಿದೆ. ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಸಂಚಾರ ಮಾಡುವುದು ಅಪಾಯಕಾರಿ ಆಗಿದೆ ಎಂದು ಎಂದು ಸಚಿವ ಗಡ್ಕರಿ ಅವರಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಮನವರಿಕೆ ಮಾಡಿಕೊಟ್ಟರು.
ಜೇವರ್ಗಿ- ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ (NH-150A) ಯಲ್ಲಿನ ಪಾಂಡವಪುರ ಪಟ್ಟಣ, ಕಿರಂಗೂರು ಬಳಿಯ ಹೆದ್ದಾರಿ ಅಭಿವೃದ್ಧಿ ಮಾಡುವ ಬಗ್ಗೆಯೂ ಸಚಿವರು ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದರು.
ಈ ಸುದ್ದಿಯನ್ನೂ ಓದಿ | Reliance: ರಿಲಯನ್ಸ್ನಿಂದ ‘ರಸ್ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ!
ಆಂಧ್ರ ಪ್ರದೇಶದ ಕುಪ್ಪಂ- ಬಂಗಾರಪೇಟೆ- ಕೋಲಾರ -ಚಿಂತಾಮಣಿ; ಚಿಂತಾಮಣಿಯ ಗಜಾನನ ಸರ್ಕಲ್- ಚೇಳೂರು;, ರಾಷ್ಟ್ರೀಯ ಹೆದ್ದಾರಿ NH-75ರಿಂದ ಹೊಸಕೋಟೆ-ಎಚ್.ಕ್ರಾಸ್- ಚಿಂತಾಮಣಿ ನಡುವೆ ಸಂಪರ್ಕ ಕಲ್ಪಿಸುವ NH-69, NH-42ರಿಂದ ಹೊಸಕೋಟೆ -ಗೌನಿಪಲ್ಲಿ - ಶ್ರೀನಿವಾಸಪುರ ಮೂಲಕ NH-75ಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಯೋಜನೆಗಳ ಬಗ್ಗೆಯೂ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಗಮನ ಸೆಳೆದರು.